ಫೌಂಡೇಶನ್ ಇಲ್ಲದೆ ಕಟ್ಟಡ

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ತೊಪ್ಲು ಕಿಂಡಿ ಅಣೆಕಟ್ಟು ಅಂತರ್ಜಲ ಮಟ್ಟ ವೃದ್ಧಿ, ಕೃಷಿಗೆ ಅನುಕೂಲ ಹಾಗೂ ಕುಡಿಯುವ ನೀರು ಸಮಸ್ಯೆ ನಿವಾರಿಸಿ ಸುದ್ದಿ ಮಾಡಿದ್ದಕ್ಕಿಂತ ವೈರುಧ್ಯದಿಂದ ಸುದ್ದಿಯಾಗಿದ್ದೇ ಹೆಚ್ಚು. ಇದಕ್ಕೆ ಹೊಸ ಸೇರ್ಪಡೆ ಹಲಗೆ ಇಡುವ ಶೆಡ್!
ದಶಕದ ಹಿಂದೆ ನಿರ್ಮಿಸಿದ ಕಿಂಡಿ ಅಣೆಕಟ್ಟಿನ ಹಲಗೆ ಜೋಡಣೆಗೆ ಶೆಡ್ ಇಲ್ಲದೆ ನದಿ ದಂಡೆಯಲ್ಲಿ ಬಿಸಿಲು ಮಳೆಗೆ ಅನಾಥವಾಗಿ ಬಿದ್ದಿರುತ್ತಿತ್ತು. ಮಳೆಗಾಲದಲ್ಲಿ ಹಲಗೆ ಹಾಳಾಗಿ, ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕಲು ಹಿನ್ನಡೆಯಾಗಿತ್ತು. ಸಣ್ಣ ನೀರಾವರಿ ಇಲಾಖೆ ಕಳೆದ ಸಾಲಿನಲ್ಲಿ ಮತ್ತೆ 50 ಸಾವಿರ ರೂ. ಅನುದಾನ ನೀಡಿ ಹೊಸ ಹಲಗೆ ಖರೀದಿಸಿದರೂ ಕಿಂಡಿ ಅಣೆಕಟ್ಟಿಗೆ ಸಾಕಾಗುವಷ್ಟು ಹಲಗೆ ಹೊಂದಿಸಲು ಆಗಲಿಲ್ಲ.
ಹಲಗೆಗೆ ಮಳೆಯಿಂದ ಮುಕ್ತಿ ನೀಡಲು 10 ವರ್ಷದ ಅನಂತರ ಶೆಡ್ ಕಟ್ಟಲು ಸಣ್ಣ ನೀರಾವರಿ ಇಲಾಖೆ ಮುಂದಾಗಿದೆ. ಇದಕ್ಕಾಗಿ 25 ಲಕ್ಷ ರೂ. ಅನುದಾನದಲ್ಲಿ ಶೆಡ್ ನಿರ್ಮಿಸಲು ಗುತ್ತಿಗೆ ನೀಡಿದೆ. ಆದರೆ ಗುತ್ತಿಗೆದಾರರು ಹಳೇ ಸ್ಲ್ಯಾಬ್ ಮೇಲೆ ಫೌಂಡೇಶನ್ ಇಲ್ಲದೆ ಕಟ್ಟಡ ಏಳಿಸುವ ಮೂಲಕ ಫೌಂಡೇಶನ್ ಹಣ ಉಳಿಸಿದ್ದು, ಕಳಪೆ ಕಾಮಗಾರಿಗೂ ದಾರಿ ಮಾಡಿಕೊಡುತ್ತಿದೆ. ಸಣ್ಣ ನೀರಾವರಿ ಇಲಾಖೆ ಬೇಜವಾಬ್ದಾರಿಗೆ ಇದು ಸಾಕ್ಷಿ.

ಅವೈಜ್ಞಾನಿಕ ಕಾಮಗಾರಿ: ತೊಪ್ಲು ಕಿಂಡಿ ಅಣೆಕಟ್ಟಿನ ಎರಡೂ ಬದಿ ಅಣೆಕಟ್ಟು ರಕ್ಷಣೆಗೆ ಬದು ಕಟ್ಟಿ ಜಾಗ ಸಮತಟ್ಟು ಮಾಡಿ, ಹೊಂಡಕ್ಕೆ ಶಿಲೆಕಲ್ಲು ಸುರಿದು ಅದರ ಮೇಲೆ ಕೆಂಪು ಮಣ್ಣು ಸುರಿದು ಮುಚ್ಚಲಾಗಿದೆ. ಅದರ ಮೇಲೆ ಒಂದಿಂಚು ಬೆಡ್ ಹಾಕಿದ್ದು, ಮಳೆಗಾಲದಲ್ಲಿ ಹಲಗೆ ಜೋಡಣೆಗೆ ಕಿಂಡಿ ಅಣೆಕಟ್ಟು ಸಮತಟ್ಟು ಬಳಕೆಯಾಗುತ್ತಿತ್ತು. ಹಲಗೆ ಭಾರಕ್ಕೆ ಕಲ್ಲುಕಟ್ಟಿದ ಸಮತಟ್ಟು ಬಿರುಕು ಬಿಟ್ಟಿದೆ. ಇನ್ನು ಸ್ಲ್ಯಾಬ್ ಕಟ್ಟಡ ಕಟ್ಟಿದರೆ ಉಳಿಯುತ್ತದಾ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಅಣೆಕಟ್ಟು ಕುಡಿಯುವ ನೀರಿನ ಮೂಲವನ್ನೇ ಕಲುಷಿತ ಮಾಡಿದೆ. ಕಿಂಡಿ ಅಣೆಕಟ್ಟು ಪ್ರಯೋಜನಕ್ಕೆ ಬಾರದಿದ್ದರೂ ಗುತ್ತಿಗೆದಾರರ ಹಿತದೃಷ್ಟಿಯೇ ಎದ್ದು ಕಾಣುತ್ತಿದೆ. ಈಗ ಶೆಡ್ ಕೂಡ ಫೌಂಡೇಶನ್ ಹಾಕದೆ ಕಟ್ಟುವ ಮೂಲಕ ಅನಾಹುತಕ್ಕೆ ದಾರಿ ಮಾಡಿಕೊಡುತ್ತಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.

ಹಲಗೆ ಜೋಡಣೆ ನಿಮಿತ್ತ ಕಟ್ಟಲಾಗುತ್ತಿರುವ ಕಟ್ಟಡ ಫೌಂಡೇಶನ್ ಇಲ್ಲದೆ ಹೊಳೆ ಬದಿ ಹಾಕಿದ ಸ್ಲ್ಯಾಬ್ ಮೇಲೆ ಕಟ್ಟುತ್ತಿರುವ ವಿಷಯ ಸಣ್ಣ ನೀರಾವರಿ ಇಲಾಖೆ ಎಡಬ್ಲುೃ ಗಮನಕ್ಕೆ ತಕ್ಷಣ ತರಲಾಗುತ್ತದೆ. ಕಾಮಗಾರಿ ಯಾವುದೇ ಇಲಾಖೆಯದ್ದಿರಲಿ ಕಳಪೆ ಕಾಮಗಾರಿ ಸಹಿಸಲ್ಲ.
ಬಿ.ಎಂ.ಸುಕುಮಾರ ಶೆಟ್ಟಿ ಶಾಸಕರು, ಬೈಂದೂರು

ತೊಪ್ಲು ಕಿಂಡಿ ಅಣೆಕಟ್ಟು ಹಲಗೆ ಇಡುವ ಶೆಡ್ ನಿರ್ಮಾಣ ಹಕ್ಲಾಡಿ ಗ್ರಾಮಕ್ಕೆ ಬಾರದೆ, ಹೆಮ್ಮಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುತ್ತದೆ. ಫೌಂಡೇಶನ್ ಹಾಕದೆ ಕಟ್ಟಡ ಕಟ್ಟುತ್ತಿರುವ ಕುರಿತು ಹೆಮ್ಮಾಡಿ ಗ್ರಾಪಂ ಗಮನ ಸೆಳೆಯುವ ಜತೆಗೆ ಕಟ್ಟಡ ಕಟ್ಟುವ ಸ್ಥಳಕ್ಕೆ ಭೇಟಿ ನೀಡಿ ಎಸ್ಟಿಮೇಟ್ ಪಡೆದು, ಅದರಂತೆ ಕಟ್ಟಡ ಕಟ್ಟಲು ಸೂಚಿಸಲಾಗುತ್ತದೆ.
ಸುಭಾಷ್ ಶೆಟ್ಟಿ ಹೊಳ್ಮಗೆ ಉಪಾಧ್ಯಕ್ಷ, ಹಕ್ಲಾಡಿ ಗ್ರಾಮ ಪಂಚಾಯಿತಿ

ತೊಪ್ಲು ಕಿಂಡಿ ಅಣೆಕಟ್ಟು ಶೆಡ್ ನಿರ್ಮಿಸಲು ಸಣ್ಣ ನೀರಾವರಿ ಇಲಾಖೆ 25 ಲಕ್ಷ ರೂ. ಅನುದಾನ ನೀಡುತ್ತಿದ್ದು, ಎಸ್ಟಿಮೇಟ್ ಪ್ರಕಾರ ಕಟ್ಟಡ ಕಟ್ಟಬೇಕಾಗುತ್ತದೆ. ಕಟ್ಟಡ ಹೇಗೆ ಕಟ್ಟುತ್ತಿದ್ದಾರೆ, ಕಟ್ಟಡಕ್ಕೆ ತಳಪಾಯ ಹಾಕದ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಎಸ್ಟಿಮೇಟ್ ಪ್ರಕಾರ ಕಟ್ಟದಿದ್ದರೆ ಕ್ರಮ ತೆಗೆದುಕೊಳ್ಳಲಾಗುತ್ತದೆ.
ಆಲ್ವಿನ್ ಇಂಜಿನಿಯರ್, ಸಣ್ಣ ನೀರಾವರಿ ಇಲಾಖೆ, ಬೈಂದೂರು

Leave a Reply

Your email address will not be published. Required fields are marked *