ಸ್ಲಾೃಬ್ ಕುಸಿದು ನೌಕರನಿಗೆ ಗಾಯ

ಕುಂದಾಪುರ: ಇಲ್ಲಿನ ಮಿನಿ ವಿಧಾನಸೌಧ ಮೇಲಂತಸ್ತಿನ ಕಂದಾಯ ವಿಭಾಗ ಕಚೇರಿಯ ಸ್ಲ್ಯಾಬ್‌ನ ಗಾರೆ ಶನಿವಾರ ಮಧ್ಯಾಹ್ನ ಕುಸಿದಿದ್ದು, ಕರ್ತವ್ಯ ನಿರತರಾಗಿದ್ದ ನಾರಾಯಣ ಬಿಲ್ಲವ ಎಂಬುವರು ಗಾಯಗೊಂಡಿದ್ದಾರೆ.
ಸ್ಥಳದಲ್ಲಿ 12 ಮಂದಿ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದು, ತಕ್ಷಣ ಓಡಿದ್ದರಿಂದ ಸಂಭಾವ್ಯ ಅವಘಡ ತಪ್ಪಿದೆ. ಕಚೇರಿಯೊಳಗಿನ 3 ಕಂಪ್ಯೂಟರ್, ಫ್ಯಾನ್, ಹಲವು ಫೋನ್, ಕುರ್ಚಿಗಳು, ಕಡತ ಹಾಗೂ ಇತರ ಪರಿಕರಗಳಿಗೂ ಹಾನಿಯಾಗಿದೆ. ಗಾರೆ ನೆಲ ಹಾಗೂ ಮೇಜಿನ ಮೇಲೆ ಬಿದ್ದು ಕೊಠಡಿಯಲ್ಲಿ ಸಿಮೆಂಟ್, ಧೂಳು ತುಂಬಿದೆ. ಸ್ಥಳಕ್ಕೆ ಕುಂದಾಪುರ ಪೊಲೀಸರು ಭೇಟಿ ನೀಡಿದ್ದಾರೆ. ಅದೇ ಕೊಠಡಿಯ ಗೋಡೆ ಹಾಗೂ ಸ್ಲ್ಯಾಬ್‌ನ ಇನ್ನಷ್ಟು ಭಾಗ ಶಿಥಿಲಗೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡುವಂತಿದೆ.

ಕಳಪೆ ಕಾಮಗಾರಿ ಕಾರಣ: ಬೈಂದೂರು ಸಾರಿಗೆ ಡಿಪೋ ಗುತ್ತಿಗೆದಾರರೇ ಮಿನಿ ವಿಧಾನಸೌಧ ನಿರ್ಮಾಣ ಕಾಮಗಾರಿ ನಡೆಸಿದ್ದು, ಕಳಪೆ ಕಾಮಗಾರಿ ನಡೆಸಿದ ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂಬ ಆಗ್ರಹ ಹಲವು ವರ್ಷಗಳಿಂದಲೂ ಕೇಳಿಬರುತ್ತಿದೆ. ಅಲ್ಲದೇ ಇತ್ತೀಚೆಗೆ ಕುಂದಾಪುರ ಪುರಸಭೆಯಲ್ಲಿ ನಡೆದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲೂ ಈ ವಿಚಾರ ಪ್ರತಿಧ್ವನಿಸಿತ್ತು.

ಕಳೆದ ವರ್ಷವೂ ಕುಸಿದಿತ್ತು: ನಾಲ್ಕೂವರೆ ವರ್ಷದ ಹಿಂದೆ ನಿರ್ಮಾಣವಾಗಿದ್ದ ಮಿನಿ ವಿಧಾನಸೌಧದ ಮೊದಲ ಮಹಡಿಯ ಪ್ರವೇಶ ದ್ವಾರ ಬಳಿ ಸ್ಲ್ಯಾಬ್‌ನ ಸಿಮೆಂಟ್ ಗಾರೆ ಕಳೆದ ವರ್ಷ ಕುಸಿದಿತ್ತು. ಈ ಬಾರಿ ಮಳೆಗಾಲ ಆರಂಭದಲ್ಲೇ ಮಿನಿ ವಿಧಾನಸೌಧ ಸೋರುತ್ತಿತ್ತು. ಈ ಬಗ್ಗೆ ಮಾಧ್ಯಮಗಳು ಸಂಬಂಧಪಟ್ಟವರ ಗಮನ ಸೆಳೆದರೂ ಯಾವುದೇ ಮುಂಜಾಗ್ರತೆ ವಹಿಸಿರಲಿಲ್ಲ.

Leave a Reply

Your email address will not be published. Required fields are marked *