ಸೇತುವೆ ಸೃಷ್ಟಿಸಿದೆ ನೀರಿನ ಸಮಸ್ಯೆ

ಹೇಮನಾಥ್ ಪಡುಬಿದ್ರಿ

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮಗಳನ್ನು ಸಂಪರ್ಕಿಸಲು ಪಲಿಮಾರು ಗ್ರಾಮದ ಅವರಾಲು ಮಟ್ಟುವಿನಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣದಿಂದ ನದಿ ಪಾತ್ರದ ಕೊಪ್ಪಳ, ನಡಿಕೊಪ್ಪಲ ಮತ್ತಿತರ ಪ್ರದೇಶಗಳಲ್ಲಿ ನೀರಿನ ತತ್ವಾರ ಉಂಟಾಗಿದೆ.

ಸೇತುವೆ ನಿರ್ಮಾಣಕ್ಕಾಗಿ ನದಿಗೆ ಅಡ್ಡಲಾಗಿ ಮಣ್ಣು ತುಂಬಿಸಿದ ಪರಿಣಾಮ ಏರಿಳಿತ ಕಡಿಮೆಯಾಗಿ ನದಿಯ ಕವಲುಗಳು ಬತ್ತಿ ಹೋಗಿವೆ. ಇದರಿಂದ ಸುಮಾರು ಆರು ಅಡಿ ನೀರು ಇರುತ್ತಿದ್ದ ಈ ಭಾಗದ ಮನೆಗಳಲ್ಲಿನ ಬಾವಿಗಳು ಕೆಲವು ದಿನಗಳಿಂದ ಸಂಪೂರ್ಣ ಬತ್ತಿದ್ದು, ಜನ, ಜಾನುವಾರುಗಳು ಕುಡಿಯುವ ನೀರಿಗೆ ಪರದಾಡುವಂತಾಗಿದೆ.

ಟ್ಯಾಂಕರ್ ನೀರು ಸರಬರಾಜು: ಪಲಿಮಾರು ಗ್ರಾಪಂ ವ್ಯಾಪ್ತಿಯ ಕೊಪ್ಪಲ ಪ್ರದೇಶದ ಜನ ಸೇತುವೆ ನಿರ್ಮಾಣದ ಸ್ಥಳಕ್ಕೆ ತೆರಳಿ ಪ್ರತಿಭಟಿಸಿದ ಪರಿಣಾಮ ಗುತ್ತಿಗೆದಾರರು ಈ ಭಾಗದ ಮನೆಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿದ್ದರು. ಈ ಗ್ರಾಮಕ್ಕೆ ಹೊಂದಿಕೊಂಡೇ ಇರುವ ಮಂಗಳೂರು ತಾಲೂಕು ಅತಿಕಾರಿಬೆಟ್ಟು ಗ್ರಾಮದ ನಡಿಕೊಪ್ಪಲ ಪ್ರದೇಶದ 14 ಮನೆಯವರು ಬಾವಿ ನೀರನ್ನೇ ನಂಬಿ ಜೀವನ ಸಾಗಿಸುತ್ತಿದ್ದು, ಈಗ ಬದಲಿ ವ್ಯವಸ್ಥೆಯೂ ಇಲ್ಲದೆ ನೀರಿಗಾಗಿ ಪರದಾಡುವಂತಾಗಿದೆ.

ಕ್ಯಾನ್ ನೀರಿನಲ್ಲಿ ಜೀವನ: ನಡಿಕೊಪ್ಪಲ ಗ್ರಾಮದವರು ದಿನಬಳಕೆಗಾಗಿ ಶುದ್ಧ ಕುಡಿಯುವ ನೀರನ್ನು ಪಲಿಮಾರಿನಿಂದ ಕ್ಯಾನ್‌ಗಳಲ್ಲಿ ತಂದು ಜೀವನ ಸಾಗಿಸುತ್ತಿದ್ದಾರೆ. ಸಮಸ್ಯೆ ಬಗ್ಗೆ ಗ್ರಾಪಂಗೆ ಮನವರಿಕೆ ಮಾಡಲಾಗಿದ್ದು, ಗ್ರಾಪಂ ಅಧ್ಯಕ್ಷರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೇತುವೆ ಗುತ್ತಿಗೆದಾರರಲ್ಲಿ ಮಾತುಕತೆ ನಡೆಸಿದ ಪರಿಣಾಮ ನದಿಗೆ ಅಡ್ಡಲಾಗಿ ಮಣ್ಣು ತುಂಬಿಸಿದ ಸ್ಥಳಗಳಲ್ಲಿ ಸಣ್ಣ ಪೈಪ್‌ಗಳನ್ನು ಅಳವಡಿಸಿ ತೂಬುಗಳನ್ನು ನಿರ್ಮಿಸಲಾಗಿದೆ. ನದಿಗೆ ಅಡ್ಡಲಾಗಿ ಹಾಕಿರುವ ಮಣ್ಣನ್ನು ಸುಮಾರು 10 ಮೀ. ವ್ಯಾಪ್ತಿಯಲ್ಲಿ ತೆರವು ಮಾಡಿದಲ್ಲಿ ನೀರಿನ ಒಳ ಹಾಗೂ ಹೊರ ಹರಿವು ಸುಗಮವಾಗಲಿದೆ. ಇದು ಹಿಂದಿನಂತೆ ನದಿಯ ನೀರಿನ ಮಟ್ಟ ಕಾಯ್ದುಕೊಳ್ಳಲು ಅನುಕೂಲ. ತೂಬು ನಿರ್ಮಾಣದಿಂದ ಮುಂದಿನ ದಿನಗಳಲ್ಲಿ ಇನ್ನಷ್ಟು ತೊಂದರೆಯಾಗಲಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ನಡಿಕೊಪ್ಪಲ ಪ್ರದೇಶದಲ್ಲಿ ಈವರೆಗೂ ನೀರಿನ ಸಮಸ್ಯೆ ಉಂಟಾಗಿರಲಿಲ್ಲ. ಸೇತುವೆ ನಿರ್ಮಾಣದಿಂದ ಬಾವಿ, ಹಳ್ಳಗಳು ಬರಿದಾಗಿವೆ. ತರಕಾರಿ ಹಾಗೂ ತೋಟಗಳಿಗೆ ನೀರುಣಿಸುವ ಸಲುವಾಗಿ ಜೆಸಿಬಿ ಮೂಲಕ ಹಳ್ಳಗಳ ಹೂಳೆತ್ತುವ ಕೆಲಸ ಮಾಡಿದ್ದೇವೆ. ಆದರೆ ಈ ನೀರು ವಾಸನೆಯುಕ್ತವಾಗಿದ್ದು, ಜಾನುವಾರುಗಳು ಕುಡಿಯುತಿಲ್ಲ. ನಳ್ಳಿ ನೀರಿನ ಸಂಪರ್ಕವೂ ಇಲ್ಲಿಲ್ಲ. ಎರಡು ಜಿಲ್ಲೆಗಳ ಗಡಿಯಲ್ಲಿರುವ ನಾವು ತೊಂದರೆ ಅನುಭವಿಸುತ್ತಿದ್ದೇವೆ. ಸಮಸ್ಯೆಗೆ ಮುಕ್ತಿ ದೊರೆಯಬೇಕು.
ವಿಜಯ ನಡಿಕೊಪ್ಪಲ
ಅತಿಕಾರಿಬೆಟ್ಟು ಗ್ರಾಮ ನಿವಾಸಿ

ಈ ಹಿಂದೆ ಶಾಂಭವಿ ನದಿಗೆ ಅಡ್ಡಲಾಗಿ ಮೂಲ್ಕಿ ಸೇತುವೆ, ಪಲಿಮಾರಿನ ರೈಲ್ವೆ ಸೇತುವೆಗಳ ನಿರ್ಮಾಣದ ಸಮಯದಲ್ಲಿ ಯಾವುದೇ ಸಮಸ್ಯೆಗಳಾಗಿರಲಿಲ್ಲ. ಈಗ ನಿರ್ಮಾಣವಾಗುವ ಸೇತುವೆ ಕಾಮಗಾರಿಯಿಂದ ಗ್ರಾಮಸ್ಥರಿಗೆ ನೀರಿನ ತೊಂದರೆ ಉಂಟಾಗಿದೆ. ಜನರ ಪ್ರತಿಭಟನೆ ಪರಿಣಾಮ ಗುತ್ತಿಗೆದಾರರು ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದಾರೆ. ಕೃಷಿ ಹಾಗೂ ಜಾನುವಾರುಗಳನ್ನು ನಂಬಿರುವ ನಮಗೆ ಬಿರು ಬೇಸಿಗೆಯಲ್ಲಿ ಬೇಡಿಕೆಯಿರುವಷ್ಟು ನೀರು ಪೂರೈಸಲು ಸಾಧ್ಯವೇ?
ಮೋಹನ್ ಬಿ ಅಂಚನ್
ಪಲಿಮಾರು ಗ್ರಾಮದ ಹೈನುಗಾರ