More

    ಶೀತಲನಾಥ ದಿಗಂಬರ ಮೂರ್ತಿಗೆ ಜಿನಾಲಯ ನಿರ್ಮಿಸಿ

    ಹಳೇಬೀಡು: ಸಮಾಜದಲ್ಲಿ ಧಾರ್ಮಿಕ ಮನೋಭಾವ ಹಾಗೂ ಐಕ್ಯತೆ ಮೂಡಿಸುವ ನಿಟ್ಟಿನಲ್ಲಿ ಪ್ರಮುಖ ಪರ್ವ ದಿನದಂದು ವಿಶೇಷ ಕಾರ್ಯಕ್ರಮಗಳನ್ನು ಜೈನರಗುತ್ತಿ ಕ್ಷೇತ್ರದಲ್ಲಿ ಆಯೋಜಿಸುವುದು ಶ್ರೇಯಸ್ಕರ ಎಂದು ಮುನಿಶ್ರೀ ಪುಣ್ಯಸಾಗರ ಮಹಾರಾಜ್ ಅಭಿಪ್ರಾಯಪಟ್ಟರು.

    ಶೀತಲನಾಥ ಚಾರಿಟಬಲ್ ಟ್ರಸ್ಟ್ ಆಶ್ರಯದಲ್ಲಿ ಅಡಗೂರು ಸಮೀಪದ ಜೈನರಗುತ್ತಿ ಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ 1008 ಭಗವಾನ್ ಶಾಂತಿನಾಥ ತೀರ್ಥಂಕರರ ಧಾರ್ಮಿಕ ವಿಧಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಅನೇಕ ತೀರ್ಥಂಕರರು ಸಂಚರಿಸಿರುವ ಈ ಪ್ರದೇಶದಲ್ಲಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳನ್ನು ಕೈಗೊಂಡು ಅಭಿವೃದ್ಧಿಪಡಿಸುವ ಜತೆಗೆ, ಶೀತಲನಾಥ ದಿಗಂಬರ ಮೂರ್ತಿಗೆ ನೂತನ ಜಿನಾಲಯವನ್ನು ನಿರ್ಮಿಸುವ ಹೊಣೆಯೂ ಸಮಾಜದ ಮೇಲಿದೆ. ಸಮಾಜದ ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಎಲ್ಲ ಕಾರ್ಯಗಳನ್ನು ಕಾಲಮಿತಿಯಲ್ಲಿ ಅನುಷ್ಠಾನಗೊಳಿಸಬೇಕು ಎಂದರು.

    ಹಳೇಬೀಡು ಸಮೀಪದ ಜೈನಬಸದಿಯಲ್ಲಿ ಪ್ರಾಚೀನ ಕಾಲದ ಅನೇಕ ಜಿನಮೂರ್ತಿಗಳು ದೊರಕಿರುವುದು ಜೈನಧರ್ಮದ ವ್ಯಾಪಕತೆಯನ್ನು ಸೂಚಿಸುತ್ತದೆ. ಹಾಗಾಗಿ, ಲೋಕಕ್ಕೆ ಉಪಕಾರಿಯಾಗುವ ಕೆಲಸಗಳನ್ನು ಸ್ಥಳೀಯ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಳ್ಳಲಿ ಎಂದು ಆಶಯ ವ್ಯಕ್ತಿಪಡಿಸಿದರು.
    ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದೇವೇಂದ್ರ ಮಾತನಾಡಿ, ಟ್ರಸ್ಟ್‌ನಿಂದ ಜೈನ ಸಮಾಜದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡುವ ಚಿಂತನೆಯಿದ್ದು ಸ್ವಂತ ಶೈಕ್ಷಣಿಕ ಸಂಸ್ಥೆಯನ್ನು ಆರಂಭಿಸುವ ಗುರಿಯೂ ಇದೆ ಎಂದು ಹೇಳಿದರು.

    ಬೆಳಗಾವಿಯ ಧರ್ಮರತ್ನ ಡಿ.ಡಿ.ಪಾಟೀಲ್ ಹಾಗೂ ಧರ್ಮವೀರ ಸಿ.ಡಿ.ಪಾಟೀಲ್ ಮಾತನಾಡಿದರು. ಮುಖಂಡರಾದ ಹೊಸದುರ್ಗದ ಬಿ.ವಿ.ಅಣ್ಣಪ್ಪ, ಬೆಂಗಳೂರಿನ ಭೀಮರಾವ್, ಜಿಲ್ಲಾ ಜೈನ ಸಮಾಜದ ಅಧ್ಯಕ್ಷ ಅಜಿತ್ ಕುಮಾರ್, ಹಾಸನ ಎಂಇಸಿಟಿ ಅಧ್ಯಕ್ಷ ಧನಪಾಲ್ ಜೈನ್ ಮತ್ತಿತರರಿದ್ದರು.

    ಆರೋಗ್ಯ ತಪಾಸಣೆ ಉಚಿತ ಶಿಬಿರ ಇಂದು: ಶೀತಲನಾಥ ಟ್ರಸ್ಟ್ ವತಿಯಿಂದ ಅಡಗೂರು ಸಮೀಪದ ಜೈನರಗುತ್ತಿ ಕ್ಷೇತ್ರದಲ್ಲಿ ಜ.19ರಂದು ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿದೆ.

    ಕಣ್ಣಿನ ತಪಾಸಣೆ, ಬಿ.ಪಿ., ಡಯಾಬಿಟಿಸ್ ಹಾಗೂ ಸಾಮಾನ್ಯ ಆರೋಗ್ಯ ಪರೀಕ್ಷೆಯೂ ಇರುತ್ತದೆ ಎಂದು ಟ್ರಸ್ಟ್‌ನ ಸಂಚಾಲಕ ವಿಜಯ್‌ಕುಮಾರ್ ದಿನಕರ್ ಹೇಳಿದರು.

    ಪಾರ್ಶ್ವನಾಥ ಮಂದಿರದ ವಾರ್ಷಿಕೋತ್ಸವ ಪ್ರಯುಕ್ತ ಜಿನತೀರ್ಥಂಕರರನ್ನು ಪ್ರತಿನಿಧಿಸುವ 24 ಅಡಿ ಉದ್ದದ ಧರ್ಮಧ್ವಜಾರೋಹಣ ಮಾಡಲಾಗುವುದು. ಸಂಸದ ಪ್ರಜ್ವಲ್ ರೇವಣ್ಣ, ಶಾಸಕ ಕೆ.ಎಸ್.ಲಿಂಗೇಶ್ ಹಾಗೂ ಉದ್ಯಮಿ ಗ್ರಾನೈಟ್ ರಾಜಶೇಖರ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts