ಮೂರು ತಿಂಗಳಲ್ಲಿ ಮೇಲ್ಸೇತುವೆ ನಿರ್ಮಿಸಿ

ವಿಜಯವಾಣಿ ಸುದ್ದಿಜಾಲ ನವದೆಹಲಿ
ತಲಪಾಡಿ-ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66ರ ಪಂಪ್‌ವೆಲ್ ಮತ್ತು ತೊಕ್ಕೊಟ್ಟಿನಲ್ಲಿರುವ ಎರಡು ಮೇಲ್ಸೇತುವೆಗಳ ಕಾಮಗಾರಿಗಳನ್ನು ಮಳೆಗಾಲ ಮುಗಿದ ಬಳಿಕ (ಅಕ್ಟೋಬರ್ ನಂತರ) ಮೂರು ತಿಂಗಳ ಒಳಗಾಗಿ ಪೂರ್ಣಗೊಳಿಸಬೇಕು ಎಂದು ನವಯುಗ ಕನ್‌ಸ್ಟ್ರಕ್ಷನ್ ಸಂಸ್ಥೆಗೆ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಆದೇಶ ನೀಡಿದ್ದಾರೆ.
ದೆಹಲಿಯಲ್ಲಿ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದ ನಿಯೋಗದ ಜತೆ ಸೋಮವಾರ ಸಾಯಂಕಾಲ ಸಭೆ ನಡೆಸಿದ ಸಚಿವರು, ಆಮೆಗತಿಯಲ್ಲಿ ಸಾಗುತ್ತಿರುವ ಕಾಮಗಾರಿ ಪೂರ್ಣಗೊಳ್ಳಲೇಬೇಕು. ಇದು ನಿಮ್ಮ ಜವಾಬ್ದಾರಿ ಎಂದು ಸಭೆಯಲ್ಲಿ ಹಾಜರಿದ್ದ ನವಯುಗ ಸಂಸ್ಥೆಯ ವ್ಯವಸ್ಥಾಪಕರಿಗೆ ಸೂಚಿಸಿದರು.
2010ರಲ್ಲಿ ಆರಂಭವಾಗಿ 2013ರ ಮಾರ್ಚ್ ಒಳಗೆ ಮುಗಿಯಬೇಕಿದ್ದ 90 ಕಿ.ಮೀ. ಉದ್ದದ ಕುಂದಾಪುರ-ತಲಪಾಡಿ ಚತುಷ್ಪಥ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಭೂಸ್ವಾಧೀನ ವಿಳಂಬ, ಯೋಜನೆ ಬದಲಾವಣೆ, ಗುತ್ತಿಗೆದಾರರಿಗೆ ಎದುರಾದ ಆರ್ಥಿಕ ಸಮಸ್ಯೆ ಇದಕ್ಕೆ ಕಾರಣವಾಗಿತ್ತು. 90 ಕಿ.ಮೀ. ಕಾಮಗಾರಿಯಲ್ಲಿ 82 ಕಿ.ಮೀ. ಪೂರ್ಣಗೊಂಡಿರುವ ಕುರಿತು 2017ರಲ್ಲಿ ಹೆದ್ದಾರಿ ಪ್ರಾಧಿಕಾರ ಪ್ರಮಾಣ ಪತ್ರ ನೀಡಿದ್ದು, 2017ರ ಫೆಬ್ರವರಿಯಿಂದ ತಲಪಾಡಿ, ಹೆಜಮಾಡಿ ಮತ್ತು ಸಾಸ್ತಾನದಲ್ಲಿ ಟೋಲ್ ಸಂಗ್ರಹಕ್ಕೂ ಅವಕಾಶ ನೀಡಲಾಗಿದೆ. ಪಂಪ್‌ವೆಲ್, ತೊಕ್ಕೊಟ್ಟು ಫ್ಲೈಓವರ್‌ಗಳು ಹಾಗೂ ಮಹಾಕಾಳಿ ದೇವಸ್ಥಾನ ಬಳಿ ಪಾದಚಾರಿ ಅಂಡರ್‌ಪಾಸ್ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದ್ದು, ಈಗಾಗಲೇ ಹಲವು ಬಾರಿ ಪ್ರತಿಭಟನೆ ನಡೆದಿದೆ.
ಮೇಲ್ಸೇತುವೆ ಕಾಮಗಾರಿ ವಿಳಂಬ ಹಿನ್ನೆಲೆಯಲ್ಲಿ ಪ್ರತಿಪಕ್ಷ ಮುಖಂಡರು ಕೇಂದ್ರ ಸರ್ಕಾರ ಮತ್ತು ಸಂಸದ ನಳಿನ್ ವಿರುದ್ಧ ಸಾಕಷ್ಟು ಟೀಕೆಗಳನ್ನು ಮಾಡಿದ್ದರು. ಹೆದ್ದಾರಿ ಕಾಮಗಾರಿ ವಿಳಂಬ ಕುರಿತು ಆಗಸ್ಟ್ 2ರಂದು ನಳಿನ್ ಕೇಂದ್ರ ಸಚಿವರಿಗೆ ಪತ್ರ ಬರೆದಿದ್ದು, ಈ ಹಿನ್ನೆಲೆಯಲ್ಲಿ ಸಚಿವರು ಸಭೆ ನಡೆಸಿ ಸೂಚನೆ ನೀಡಿದ್ದಾರೆ.
ಎಸ್.ಅಂಗಾರ, ಶಾಸಕರಾದ ಹರೀಶ್ ಪೂಂಜ, ಡಾ.ಭರತ್ ಶೆಟ್ಟಿ, ಸಂಜೀವ ಮಟಂದೂರು ನಿಯೋಗದಲ್ಲಿದ್ದರು.

ಶಿರಾಡಿ ವಾರದೊಳಗೆ ಸಂಚಾರಕ್ಕೆ ಸೂಚನೆ:  ವಿಪರೀತ ಮಳೆಯಿಂದಾಗಿ ಶಿರಾಡಿ ಘಾಟಿ ರಸ್ತೆಯಲ್ಲಿ ಭೂಕುಸಿತ ಉಂಟಾಗಿದ್ದು, ವಾಹನ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ಶೀಘ್ರದಲ್ಲೇ ತುರ್ತು ಕಾಮಗಾರಿ ನಡೆಸಿ, ವಾರದ ಒಳಗೆ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಚಾರ್ಮಾಡಿ ಘಾಟಿ ರಸ್ತೆಯಲ್ಲೂ ತುರ್ತು ದುರಸ್ತಿ ಕಾಮಗಾರಿ ಕೈಗೊಳ್ಳಬೇಕು ಎಂದು ಗಡ್ಕರಿ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಸಿಗದ ಅರಣ್ಯ ಇಲಾಖೆ ಒಪ್ಪಿಗೆ:  ಬಿ.ಸಿ.ರೋಡ್‌ನಿಂದ ಹಾಸನವರೆಗಿನ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ 4 ಕಿ.ಮೀ ವ್ಯಾಪ್ತಿಯಲ್ಲಿ ಕಾಮಗಾರಿಗೆ ರಾಜ್ಯ ಪರಿಸರ ಇಲಾಖೆ ಒಪ್ಪಿಲ್ಲ. ಈ ನಿಟ್ಟಿನಲ್ಲಿ ಇಲಾಖೆಯ ಸಚಿವರು ಮತ್ತು ಅಧಿಕಾರಿಗಳೊಂದಿಗೆ ಕೇಂದ್ರದ ಅಧಿಕಾರಿಗಳು ಚರ್ಚೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಸಂಸದ ನಳಿನ್ ಮಾಹಿತಿ ನೀಡಿದ್ದಾರೆ.

ಚತುಷ್ಪಥ ಕಾಮಗಾರಿ ಶೀಘ್ರ:  ಕುಲಶೇಖರ- ಕಾರ್ಕಳ -ಶಿವಮೊಗ್ಗ ನಡುವಿನ ಚತುಷ್ಪಥ ಕಾಮಗಾರಿ ಯೋಜನೆಯ ಸಮಗ್ರ ಯೋಜನಾ ವರದಿ ಸಿದ್ಧಗೊಂಡಿದೆ. ಶೀಘ್ರದಲ್ಲೇ ಕಾಮಗಾರಿ ಕೈಗೆತ್ತಿಕೊಳ್ಳುವ ಭರವಸೆ ಕೇಂದ್ರ ಸಚಿವರಿಂದ ಸಿಕ್ಕಿದೆ ಎಂದು ನಳಿನ್ ತಿಳಿಸಿದ್ದಾರೆ. ಸಾಗರಮಾಲಾ ಯೋಜನೆ ಅಡಿಯಲ್ಲಿ ಬಿ.ಸಿ.ರೋಡ್- ಕಟೀಲು- ಮುಲ್ಕಿ ಹಾಗೂ ಮೆಲ್ಕಾರ್-ಕೊಣಾಜೆ- ತೊಕ್ಕೊಟ್ಟು ನಡುವಿನ ಚತುಷ್ಪಥ ರಸ್ತೆ ನಿರ್ಮಾಣ ಯೋಜನೆಯ ಸಮಗ್ರ ಯೋಜನಾ ವರದಿ ಸಿದ್ಧಗೊಂಡಿದ್ದು, ಕಾಮಗಾರಿ ಪ್ರಾರಂಭಿಸುವಂತೆ ಕೇಳಿಕೊಂಡಿದ್ದೇವೆ.

ಟೋಲ್ ರದ್ದು ಮನವಿ:  ಬಿ.ಸಿ.ರೋಡ್, ಸುರತ್ಕಲ್‌ನ ಮುಕ್ಕದಲ್ಲಿ ಕೇಂದ್ರ ಸರ್ಕಾರದ 2 ಟೋಲ್ಗೇಟ್‌ಗಳಿದ್ದು, ಇವುಗಳನ್ನು ಸ್ಥಗಿತಗೊಳಿಸಬೇಕು ಎಂದು ಕೇಳಿಕೊಂಡಿದ್ದೇವೆ. ಈ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಸಚಿವರು ಪ್ರತಿಕ್ರಿಯಿಸಿರುವುದಾಗಿ ನಳಿನ್ ತಿಳಿಸಿದ್ದಾರೆ.