ಆಯನೂರು: ಅಗತ್ಯ ಅನುದಾನವಿದ್ದರೂ ಚೋರಡಿಯಲ್ಲಿ ಪಶು ಆಸ್ಪತ್ರೆ ನಿರ್ಮಿಸಲು ಜಪಂ ಸಿಇಒ, ತಾಪಂ ಇಒ, ಚೋರಡಿ ಪಿಡಿಒ ನಿರ್ಲಕ್ಷೃ ತೋರುತ್ತಿದ್ದಾರೆ ಎಂದು ಆರೋಪಿಸಿ ಗ್ರಾಪಂ ಕಚೇರಿ ಎದುರು ಸದಸ್ಯರು, ಗ್ರಾಮಸ್ಥರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಮೂರು ವರ್ಷಗಳ ಹಿಂದೆ ಗ್ರಾಮಕ್ಕೆ ಪಶು ಆಸ್ಪತ್ರೆಗೆಂದು ಗ್ರಾಮಠಾಣಾ ಜಾಗ ದೊರೆತಿದೆ. ಈ ಹಿಂದಿನ ಶಾಸಕರು 40 ಲಕ್ಷ ರೂ. ಅನುದಾನ ನೀಡಿದ್ದರು. ಆದರೆ ಅನುದಾನ ವಾಪಸ್ ಹೋಯಿತು. ಈಗಿನ ಸರ್ಕಾರ 50 ಲಕ್ಷ ರೂ. ಬಿಡುಗಡೆಗೊಳಿಸಿದೆ. ಜತೆಗೆ ಶಾಸಕಿ ಶಾರದಾ ಪೂರ‌್ಯಾನಾಯ್ಕಾ ಶಾಸಕರ ಅನುದಾನದಲ್ಲಿ 20 ಲಕ್ಷ ರೂ. ನೀಡಿದ್ದರೂ ಅಧಿಕಾರಿಗಳು ಮಾತ್ರ ಮೌನವಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಚೋರಡಿ ಗ್ರಾಪಂನಲ್ಲಿ 6 ತಿಂಗಳಿನಿಂದ ಕಾರ್ಯದರ್ಶಿ, ಎಸ್‌ಡಿಎ ಹುದ್ದೆಗಳು ಖಾಲಿ ಇವೆ. ಮೇಲಧಿಕಾರಿಗಳ ಗಮನಕ್ಕೆ ತಂದರೂ ನಿರ್ಲಕ್ಷಿಸುತ್ತಿದ್ದಾರೆ. ಇದರಿಂದ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಮಾಹಿತಿ ಹಕ್ಕು, ಮರಣ ಪ್ರಮಾಣ ಪತ್ರ, ಯಾವುದೇ ಅರ್ಜಿಗಳ ವಿಲೇವಾರಿ ಮಾಡುತ್ತಿಲ್ಲ ಎಂದು ದೂರಿದರು.
ಸ್ಥಳಕ್ಕೆ ಆಗಮಿಸಿದ ತಾಪಂ ಇಒ ಅವಿನಾಶ್ ಮಾತನಾಡಿ, ಕಾರ್ಯದರ್ಶಿ ಹಾಗೂ ಎಸ್‌ಡಿಎ ಹುದ್ದೆಗಳಿಗೆ ಅಧಿಕಾರಿಗಳನ್ನು ನೇಮಿಸಿ ಇಂದಿನಿಂದಲೇ ಕಾರ್ಯನಿರ್ವಹಿಸುವಂತೆ ಆದೇಶ ಪತ್ರ ನೀಡಿದರು. ಆಸ್ಪತ್ರೆ ನಿರ್ಮಾಣ ಹಾಗೂ ಇತರ ವಿಷಯಗಳ ಬಗ್ಗೆ ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.
ಚೋರಡಿ ಗ್ರಾಪಂ ಅಧ್ಯಕ್ಷ ನಿರಂಜನ, ಉಪಾಧ್ಯಕ್ಷ ಶಿವಕುಮಾರ, ಸದಸ್ಯರಾದ ಅಶೋಕ, ವೀಣಾ ನಾಗರಾಜ್, ಆರ್.ಕೆ.ಮಂಜಪ್ಪ, ಸುನೀತಾ, ಸುಧಾ, ಬಂಗಾರಮ್ಮ, ಗ್ರಾಮಸ್ಥರಾದ ಲಕ್ಷ್ಮೀನಾರಾಯಣ, ಸದಾಶಿವ, ರವಿ, ಚಂದ್ರಶೇಖರ ಇತರರಿದ್ದರು.