ಬೆಂಗಳೂರು: ವಿಧಾನಸೌಧ ಆವರಣದಲ್ಲಿ 25 ಅಡಿ ಎತ್ತರದ ನಾಡದೇವತೆ ತಾಯಿ ಭುವನೇಶ್ವರಿ ಪ್ರತಿಮೆಯನ್ನು ಸ್ಥಾಪಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿರುವುದು ಕನ್ನಡಿಗರಿಗೆ ಹೆಮ್ಮೆ ತಂದಿದೆ. ಆದರೆ, ಈ ಪ್ರತಿಮೆಯನ್ನು ವಿಧಾನಸೌಧ ಹಿಂಭಾಗದ ಬದಲು ಮುಂಭಾಗದಲ್ಲಿ ಪ್ರತಿಷ್ಠಾಪಿಸಬೇಕೆಂದು “ನೈಜ ಹೋರಾಟಗಾರರ ವೇದಿಕೆ’ ಸರ್ಕಾರವನ್ನು ಒತ್ತಾಯಿಸಿದೆ.
ವಿಕಾಸಸೌಧ ಹಾಗೂ ವಿಧಾನಸೌಧ ಮಧ್ಯೆ ಪ್ರತಿಷ್ಠಾಪಿಸಿರುವ ಮಹಾತ್ಮ ಗಾಂಧಿ ಪ್ರತಿಮೆಯು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಅಂಬೇಡ್ಕರ್, ಜವಹರಲಾಲ್ ನೆಹರು, ನಾಡಪ್ರಭು ಕೆಂಪೇಗೌಡ ಹಾಗೂ ಜಗದ್ಗುರು ಬಸವಣ್ಣ ಅವರ ಪ್ರತಿಮೆಯನ್ನು ವಿಧಾನಸೌಧ ಮುಂಭಾಗದಲ್ಲಿ ಪ್ರತಿಷ್ಠಾಪಿಸಲಾಗಿದೆ. ಹಾಗಾಗಿ, ಕನ್ನಡಿಗರ ಹೆಮ್ಮೆಯ ಪ್ರತಿಕವಾದ ಭುವನೇಶ್ವರಿ ಪ್ರತಿಮೆಯನ್ನು ವಿಧಾನಸೌಧದ ಮೆಟ್ಟಿಲುಗಳ ಮುಂಭಾಗದ ಜಾಗದಲ್ಲೇ ಪ್ರತಿಷ್ಠಾಪಿಸಬೇಕು. ವಿಧಾನಸೌಧದ ಹಿಂಭಾಗದಲ್ಲಿ ಪ್ರತಿಷ್ಠಾಪಿಸಿದರೆ ನ್ಯಾಯ ಸಮ್ಮತವಲ್ಲ ಮತ್ತು ಇದು ಕನ್ನಡಿಗರಿಗೆ ಮಾಡುವ ದ್ರೋಹವಾಗಲಿದೆ. ವಿಧಾನಸೌಧಕ್ಕೆ ಬರುವವರಿಗೆ ಪ್ರತಿಮೆ ಸಮರ್ಪಕವಾಗಿ ಕಾಣುವುದಿಲ್ಲ ಎಂದು ವೇದಿಕೆ ಅಧ್ಯಕ್ಷ ಎಚ್.ಎಂ. ವೆಂಕಟೇಶ ಹೇಳಿದ್ದಾರೆ.
ದೆಹಲಿ ಮೂಲದ ಕಲಾವಿದರಿಗೆ ಪ್ರತಿಮೆ ನಿರ್ಮಾಣದ ಗುತ್ತಿಗೆ ಕೊಟ್ಟಿರುವುದು ಸರಿಯಲ್ಲ. ರಾಜ್ಯದಲ್ಲಿ ಸಾಕಷ್ಟು ಒಳ್ಳೆಯ ಕಲಾವಿದರಿದ್ದು, ಪ್ರತಿಮೆ ನಿರ್ಮಾಣ ಕಾರ್ಯವನ್ನು ಕನ್ನಡಿಗರಿಗೆ ನೀಡಬೇಕಿತ್ತು ಎಂದರು.