ಕೋಟದಲ್ಲಿ ಕೋಣ ಜಾತ್ರೆ..!

>

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ
ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ಬೆಲೆ ಕಟ್ಟಲಾಗದ ಸಾಲು ಮರ, ಜೀವವೈವಿಧ್ಯಗಳನ್ನು ಕಳೆದುಕೊಂಡಿದ್ದೇವೆ. ಡಾ.ಶಿವರಾಮ ಕಾರಂತರ ಮನೆ ಅರ್ಧ ಮರಳಿ ಮಣ್ಣು ಸೇರಿದೆ. ಮರು ಪೂರಣ ಸಾಧ್ಯವಿಲ್ಲದ ಅಮೂಲ್ಯ ಸಂಪತ್ತು ಕಳೆದುಕೊಂಡಿದ್ದು, ಮುಂದೆ ಕೋಟ ಕೋಣ ಜಾತ್ರೆ ನಿಂತು ಹೋದರೂ ಅಚ್ಚರಿಯಿಲ್ಲ.
ಸಮಸ್ಯೆಗಳ ನಡುವೆ ಕೋಟ ಕೋಣ ಜಾತ್ರೆ ಸಂಕಷ್ಟದಲ್ಲಿ ನಡೆಯುತ್ತಿದೆ. ಹೆದ್ದಾರಿ ವಿಸ್ತರಣೆಗೆ ರಸ್ತೆ ಬದಿಯ ಮರ, ಹಾಡಿ ಕಡಿದು ಬಯಲಾಗಿದೆ. ಹಸಿರು ಬಟ್ಟೆಯ ಚಪ್ಪರದಡಿ ಕೋಣಗಳ ಜಾತ್ರೆ ನಡೆಯುತ್ತಿದ್ದು, ಕೋಟ ಗಾಂಧಿ ಮೈದಾನ ಆಶ್ರಯ ತಾಣ.
ಉಡುಪಿ ಜಿಲ್ಲೆಯ ಗ್ರಾಮಾಂತರ ಪ್ರದೇಶದ ಕೃಷಿಕರು, ಕಂಬಳಕ್ಕೆ ಬಳಸಿಕೊಳ್ಳುವವರು ಕೋಣ ಜಾತ್ರೆಗೆ ಬರುತ್ತಾರೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಮಲ್ಲಿಕ್ ಸಾಹೇಬ್ ಹಾಗೂ ಬುಡ್ಡಾ ಸಾಹೇಬ್ ಕೋಟ ಕೋಣ ಜಾತ್ರೆ ರುವಾರಿಗಳು.
ಗಾಂಧಿ ಮೈದಾನಕ್ಕೆ ಕೋಣ ಜಾತ್ರೆ ಬರುವ ಮುನ್ನ ರಾಷ್ಟ್ರೀಯ ಹೆದ್ದಾರಿ ಪಕ್ಕದ ಗಿಳಿಯಾರು ಗ್ರಾಮ ಹರ್ತಟ್ಟು ಪರಿಸರಕ್ಕೆ ತಾಗಿಕೊಂಡಿರುವ ಪ್ರದೇಶದ ಹಸಿರು ಪರಿಸರದಲ್ಲಿ ನಡೆಯುತ್ತಿತ್ತು. ಕಾಲಕ್ರಮೇಣ ಹೆದ್ದಾರಿ ವಿಸ್ತರಣೆಯಿಂದ ಕೋಟ ಕೋಣಗಳ ಜಾತ್ರೆಗೆ ಸಂಕಷ್ಟ ಎದುರಾಗಿ ಅರ್ಧಕ್ಕೆ ಮೊಟಕುಗೊಂಡಿತು.
ಬಳಿಕ ಮಲ್ಲಿಕ್ ಸಾಹೇಬ್ ಪುತ್ರ ಆರಿಫ್, ಕೋಟ ಕೋಣಗಳ ವ್ಯಾಪಾರಿ ಹಂಡಿಕೆರೆಮನೆ ಮೊಹನದಾಸ ಭಂಡಾರಿ ಸಹಕಾರದಲ್ಲಿ ಆಗಿನ ಕೋಟ ಗ್ರಾಪಂ ಸಹಕಾರ ಪಡೆದು ತಮ್ಮ ವ್ಯಾವಹಾರಿಕ ನೆಲೆ ಕೋಟದ ಗಾಂಧಿ ಮೈದಾನಕ್ಕೆ ಸ್ಥಳಾಂತರಿಸಿ ಕೋಣಗಳಿಗೆ ಬರವಿಲ್ಲದಂತೆ ತಮ್ಮ ವ್ಯಾವಹಾರಿಕ ಕ್ಷೇತ್ರ ವಿಸ್ತರಿಸಿಕೊಂಡರು.
ವರ್ಷಕ್ಕೆರಡು ಬಾರಿ ಇಲ್ಲಿ ಜಾತ್ರೆ ನಡೆಯುತ್ತದೆ. ಅದರಂತೆ ದಕ್ಷಿಣ ಕನ್ನಡ ಅವಳಿ ಜಿಲ್ಲೆ ಅಲ್ಲದೆ ಉತ್ತರ ಕನ್ನಡದವರೆಗಿನ ಕೃಷಿಕರು ಬಂದು ವ್ಯವಹರಿಸುತ್ತಾರೆ.

ನೇರ ಕೃಷಿ ಕೇತ್ರಕ್ಕೆ ಇಳಿಯುವ ಕೋಣ: ಕೋಟಕ್ಕೆ ಬಂದಿಳಿದ ಕೋಣಗಳಿಗೆ ಥರಹೇವಾರಿ ಜಾತಿ! ಹಲ್ಲು ಮೂಡದ ಮರಿಕೋಣದಿಂದ ಹಿಡಿದು ಹಿರಿ ಕೋಣದವರೆಗೆ ವೈವಿಧ್ಯ. ಕೋಟದಿಂದ ನೇರ ಕೃಷಿ ಕ್ಷೇತ್ರಕ್ಕೆ ಇಳಿಯುತ್ತವೆ. ಮತ್ತೆ ಕೆಲ ಕೋಣಗಳು ಕಂಬಳ ಅಂಗಳದಲ್ಲಿ ಓಟಕ್ಕೂ ಸಿದ್ಧ. ಮೂರು ಶತಮಾನ ಕಂಡ ಕೋಟ ಕೋಣ ಜಾತ್ರೆ ಇಂದು ಬಿಸಿಲಿಗೆ ಒಣಗುತ್ತ, ರಸ್ತೆ ಬದಿಯಲ್ಲಿ ನಿಂತಿರುವುದು ಕೋಣ ಜಾತ್ರೆ ಅಂತಿಮ ಘಟ್ಟ ತಲುಪಿದೆಯಾ ಎಂಬ ಅನುಮಾನ ಹುಟ್ಟುಹಾಕುತ್ತದೆ. ಸಾಗಾಟ, ನಿರ್ವಹಣಾ ವೆಚ್ಚ ಕೋಣ ಜಾತ್ರೆಗೆ ಸಂಕಟ ತಂದಿದೆ.

ಪರಿಸ್ಥಿತಿ ಬದಲಾಗಿದೆ:  ಮಳೆಗಾಲ ಮುಕ್ತಾಯ, ಕೃಷಿ ಕಾಯಕ ಆರಂಭವಾಗುವಷ್ಟರಲ್ಲಿ ಕೋಣಗಳು ಕೋಟದಲ್ಲಿ ಪ್ರತ್ಯಕ್ಷವಾಗುತ್ತವೆ. ಮತ್ತೆ ಮಳೆಗಾಲ ಆರಂಭವಾಗುವವರೆಗೆ ಕೋಟದಲ್ಲಿ ಕೋಣಗಳ ಅಬ್ಬರವಿರುತ್ತದೆ. ಹಿಂದೆ ಕೋಟ ಕೋಣಗಳ ಜಾತ್ರೆಗೆ ಹೇಳಿ ಮಾಡಿಸಿದಂತಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ರಸ್ತೆ ವಿಸ್ತರಣೆ ಕೋಣ ಜಾತ್ರೆಗೆ ಸಂಚಕಾರ ತಂದಿದೆ. ಕೃಷಿ ಭೂಮಿಯಲ್ಲಿ ಯಂತ್ರಗಳ ಸದ್ದು ಹೆಚ್ಚಿದ್ದರಿಂದ ಕೋಣಗಳ ಬೇಡಿಕೆ ಕಡಿಮೆಯಾಗಿದೆ ಎಂಬುದು ವ್ಯಾಪಾರಸ್ಥರ ಅಳಲು.

ಹೊರ ರಾಜ್ಯದ ಕೋಣಗಳ ದರ್ಬಾರ್: ಕೋಟ ಕೋಣ ಜಾತ್ರೆಗೆ ಹೊರ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕೋಣಗಳು ಬರುತ್ತವೆ. ಸ್ಥಳೀಯ ಕೃಷಿಕರು ಅದನ್ನೇ ಮೆಚ್ಚಿಕೊಳ್ಳುತ್ತಾರೆ. ಮಹಾರಾಷ್ಟ್ರ, ಪಂಡರಾಪುರ, ಬೈಲುಗೊಂಗಲ, ಅಕ್ಕಿ ಆಲೂರು ಹಾಗೂ ರಾಜ್ಯದ ನಾನಾ ಕಡೆಯಿಂದ ಕೋಣಗಳು ಬರುತ್ತವೆ. ಮಹಾರಾಷ್ಟ್ರದ ಹೊಳೆಸಾಲು ಕೋಣಕ್ಕೆ ಬೇಡಿಕೆ ಹೆಚ್ಚು. ಜಾತ್ರೆಯಲ್ಲಿ 10 ಸಾವಿರದಿಂದ 50 ಸಾವಿರ ರೂ.ವರೆಗಿನ ಕೋಣಗಳು ಲಭ್ಯ.
ಪಂಡರಾಪುರದ ಕೋಣಗಳ ಆಕೃತಿ, ತಾಕತ್ತು, ಕೊಂಬು, ಗೊರಸು ಚಂದ. ಈ ಕೋಣಗಳು ಎಷ್ಟು ಕೆಲಸ ಕೊಟ್ಟರೂ ಹೆದರಲ್ಲ. ಕೋಣಗಳ ಸಾಗಾಟಕ್ಕೆ ಪರವಾನಗಿ ಸಿಗದಿರುವುದು ವ್ಯಾಪಾರಸ್ಥರಿಗೆ ತಲೆನೋವಾಗಿದೆ. ಪರವಾನಗಿ ಇಲ್ಲದೆ ಕೋಣ ತರುವುದರಿಂದ ದಾರಿ ಮಧ್ಯೆ ವ್ಯಾಪಾಸ್ಥರು ಹಲವು ತೊಂದರೆ ಅನುಭವಿಸಬೆಕಾಗುತ್ತದೆ.

ಈ ಬಾರಿ ಕೋಣಗಳ ಜಾತ್ರೆ ಆರಂಭಗೊಂಡು ಕೆಲವು ದಿನಗಳು ಕಳೆದಿವೆ. ವ್ಯವಹಾರ ಕೂಡ ವೇಗ ಪಡೆದುಕೊಂಡಿದೆ. ಯಾವುದೇ ಸಮಸ್ಯೆ ಎದುರಾಗದೆ ನಡೆಯುತ್ತಿದೆ. ಇಲ್ಲಿನ ಸ್ಥಳೀಯರು ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ.
ಆರಿಫ್ ಸಾಹೇಬ್ ಬೈಲಹೊಂಗಲ, ಕೋಣಗಳ ಉಸ್ತುವಾರಿ