ಸಿರಿಧಾನ್ಯ ಬೆಳೆದು ಸಿರಿವಂತನಾಗುವ ಅವಕಾಶ; ಶೇ.3 ಬಡ್ಡಿ ದರದಲ್ಲಿ ಗೃಹಲಕ್ಷ್ಮಿ ಬೆಳೆ ಸಾಲ

ಬೆಂಗಳೂರು: ಸಿರಿಧಾನ್ಯಗಳ ಕೃಷಿಗೆ ಹೆಚ್ಚಿನ ಒತ್ತು ನೀಡಲು ಸರ್ಕಾರ ಪ್ರಯತ್ನಿಸುತ್ತಿದೆ. ಇದಕ್ಕಾಗಿ ಅದು ಸಿರಿಧಾನ್ಯ ಮೇಳ ಸೇರಿ ವಿವಿಧ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ಪೂರಕವಾಗಿ 2019-2020ನೇ ಸಾಲಿನ ಬಜೆಟ್​ನಲ್ಲಿ ಸಿರಿಧಾನ್ಯ ಬೆಳೆಯುವ ರೈತರ ಬ್ಯಾಂಕ್​ ಖಾತೆಗಳಿಗೆ ನೇರವಾಗಿ 10 ಸಾವಿರ ರೂ. ಪ್ರೋತ್ಸಾಹ ಧನವನ್ನು ವರ್ಗಾವಣೆ ಮಾಡಲು ಸರ್ಕಾರ ನಿರ್ಧರಿಸಿದೆ.

ಶೇ.3 ಬಡ್ಡಿದರದ ಬೆಳೆಸಾಲ: ಸಣ್ಣ ರೈತರಿಗೆ ಕೃಷಿಯಲ್ಲಿ ತೊಡಗಲು ಪ್ರೋತ್ಸಾಹಿಸುವ ಜತೆಗೆ ಬೆಳೆಸಾಲ ಸಿಗುವಂತೆ ಮಾಡಲು ಸಿಎಂ ಕುಮಾರಸ್ವಾಮಿ ಗೃಹಲಕ್ಷ್ಮೀ ಬೆಳೆ ಸಾಲ ಯೋಜನೆ ಜಾರಿಗೊಳಿಸುವುದಾಗಿ ಘೋಷಿಸಿದ್ದಾರೆ. ಈ ಯೋಜನೆಯಡಿ ಚಿನ್ನಾಭರಣಗಳನ್ನು ಅಡಮಾನ ಮಾಡಿ, ಶೇ.3ರ ಬಡ್ಡಿದರದಲ್ಲಿ ಸಣ್ಣ ರೈತರು ಬೆಳೆಸಾಲ ಪಡೆಯಬಹುದಾಗಿದೆ.

ಏತ ನೀರಾವರಿಗೂ ಹೆಚ್ಚಿನ ಅನುದಾನ: ಬಾದಾಮಿ ತಾಲೂಕಿನಲ್ಲಿ ನೀರಾವರಿ ಸೌಲಭ್ಯ ಕಲ್ಪಿಸಲು ಕೆರೂರ ಏತ ನೀರಾವರಿ ಯೋಜನೆ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಅದು 300 ಕೋಟಿ ರೂ. ಅನುದಾನ ಒದಗಿಸುತ್ತಿದೆ.

ಅಂತೆಯೇ ಕೊಪ್ಪಳ ಏತ ನೀರಾವರಿ ಯೋಜನೆಗಾಗಿ 200 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ನೀರಾವರಿ ಸೌಲಭ್ಯ ಅಭಿವೃದ್ಧಿಗಾಗಿ 40 ಕೋಟಿ ರೂ. ಹಾಗೂ ರಾಯಚೂರು ಜಿಲ್ಲೆ ಬಸಪ್ಪ ಕೆರೆ ತುಂಬಿಸಲು 70 ಕೋಟಿ ರೂ. ಅನುದಾನ ಒದಗಿಸಲಾಗಿದೆ.