ಬಜೆಟ್​ಪೂರ್ವ ಸಭೆ ನಡೆಸಿದ ಸಿಎಂ

ಬೆಂಗಳೂರು: ಅತೃಪ್ತ ಶಾಸಕರ ರಾಜೀನಾಮೆ ಪ್ರಹಸನ ದೂರವಾಗಿ ಮೈತ್ರಿ ಸರ್ಕಾರ ಸುಭದ್ರ ಎಂದು ತಿಳಿಯುತ್ತಿದ್ದಂತೆ ನಿರಾಳರಾದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಮುಂಬರುವ ಬಜೆಟ್​ಗಾಗಿ ಸಿದ್ಧತೆ ಕೈಗೊಳ್ಳಲು ಪೂರ್ವಭಾವಿ ಸಭೆಗಳಿಗೆ ಬುಧವಾರ ಚಾಲನೆ ನೀಡಿದರು.

ರೇಸ್​ಕೋರ್ಸ್ ರಸ್ತೆಯಲ್ಲಿರುವ ಕರ್ನಾಟಕ ವಿದ್ಯುತ್ ನಿಗಮದ ಸಭಾಂಗಣದಲ್ಲಿ ಬುಧವಾರ ಮಧ್ಯಾಹ್ನ ಕಾರ್ವಿುಕ ಇಲಾಖೆಯ ಬಜೆಟ್ ಪೂರ್ವಭಾವಿ ಸಭೆ ನಡೆಸಿ, ರೂಪಿಸಬೇಕಾದ ಕಾರ್ಯಕ್ರಮಗಳ ಕುರಿತು ಚರ್ಚೆ ನಡೆಸಿದರು. ಡಿಸಿಎಂ ಡಾ.ಜಿ.ಪರಮೇಶ್ವರ್, ಕಾರ್ವಿುಕ ಸಚಿವ ವೆಂಕಟರಮಣಪ್ಪ, ಸರ್ಕಾರದ ಸಿಎಸ್ ಟಿ.ಎಂ.ವಿಜಯಭಾಸ್ಕರ್, ಸಿಎಂ ಆರ್ಥಿಕ ಸಲಹೆಗಾರ ಸುಬ್ರಹ್ಮಣ್ಯ ಇದ್ದರು. ಸಂಜೆ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣ ಇಲಾಖೆಯಲ್ಲಿ ಕೈಗೊಳ್ಳಬಹುದಾದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ.

24ರವರೆಗೆ ಸಭೆ: ಜ. 24ರವರೆಗೆ ಕೆಪಿಸಿ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಸಚಿವರು ಹಾಗೂ ಹಿರಿಯ ಅಧಿಕಾರಿಗಳೊಂದಿಗೆ ಬಜೆಟ್ ಪೂರ್ವಭಾವಿ ಸಭೆ ನಡೆಸಲಿರುವ ಸಿಎಂ ಕುಮಾರಸ್ವಾಮಿ, ಜ.25ರಂದು ವಾಣಿಜ್ಯ ಸಂಘ-ಸಂಸ್ಥೆಗಳು, ಸಾರಿಗೆ ಸಂಘ-ಸಂಸ್ಥೆಗಳು, ಅಬಕಾರಿ ಸಂಘ-ಸಂಸ್ಥೆಗಳು, ಭೂಮಾರುಕಟ್ಟೆ ಸಂಘ-ಸಂಸ್ಥೆಗಳ ಮುಖಂಡರೊಂದಿಗೆ ಸಭೆ ನಡೆಸುವರು. ತೆರಿಗೆ ಸಂಗ್ರಹಣಾ ಇಲಾಖೆಗಳಾದ ವಾಣಿಜ್ಯ ತೆರಿಗೆ, ಅಬಕಾರಿ, ಸಾರಿಗೆ, ಮುದ್ರಾಂಕ ಮತ್ತು ನೋಂದಣಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗಳ ಹಿರಿಯ ಸಚಿವರೊಂದಿಗೆ ಜ.28ರಂದು ಸಭೆ ನಡೆಸುವರು ಎಂದು ಸಿಎಂ ಕಚೇರಿ ಪ್ರಕಟಣೆ ತಿಳಿಸಿದೆ.

ನಾನಂತೂ ಕೂಲ್ ಎಂದ ಮುಖ್ಯಮಂತ್ರಿ

ಬೆಂಗಳೂರು: ಮೈತ್ರಿ ಸರ್ಕಾರ ಅಸ್ಥಿರಗೊಳಿಸುವ ಬಿಜೆಪಿ ಪ್ರಯತ್ನದ ಬಗ್ಗೆ ಒಳಗೊಳಗೆ ದುಗುಡ ಇಟ್ಟುಕೊಂಡಿರುವ ಸಿಎಂ ಎಚ್.ಡಿ.ಕುಮಾರಸ್ವಾಮಿ, ನಾನಂತೂ ತುಂಬಾ ಕೂಲ್ ಎಂದು ಪುನರುಚ್ಚರಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಯಾವುದೇ ಸಮಸ್ಯೆ ಆಗಿಲ್ಲ, ಕೂಲ್ ಆಗಿದ್ದೀನಿ ಅಂದಮೇಲೆ ಏನಾಗುತ್ತಿದೆ ಎಂದು ನೀವೇ ಅರ್ಥ ಮಾಡಿಕೊಳ್ಳಿ ಎಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದರು. ಕಾಂಗ್ರೆಸ್ – ಜೆಡಿಎಸ್ ಶಾಸಕರನ್ನು ರೆಸಾರ್ಟ್​ಗೆ ಶಿಫ್ಟ್ ಮಾಡುತ್ತಿಲ್ಲ. ರೆಸಾರ್ಟ್​ಗೆ ಶಿಫ್ಟ್ ಮಾಡುವ ಅವಶ್ಯಕತೆ ನಮಗೆ ಇಲ್ಲ. ನಮ್ಮ ಸರ್ಕಾರ ಸುಭದ್ರವಾಗಿದೆ. ಮಾಧ್ಯಮದವರಿಗೆ ಅತೃಪ್ತ ಶಾಸಕರು ನಾಟ್ ರೀಚಬಲ್ ಆಗಿರಬಹುದು. ನನಗೆ ರಮೇಶ್ ಜಾರಕಿಹೊಳಿ, ನಾಗೇಂದ್ರ ಸೇರಿ ಎಲ್ಲರೂ ಸಂಪರ್ಕದಲ್ಲಿದ್ದಾರೆ. ಮೂರು ದಿನಗಳಿಂದ ಎಲ್ಲರ ಜತೆ ಮಾತಾನಾಡಿದ್ದೇನೆ. ಜೆಡಿಎಸ್​ನಿಂದ ಆಪರೇಷನ್ ಮಾಡುವ ಅವಶ್ಯಕತೆ ಇಲ್ಲ, ಎಲ್ಲದ್ದಕ್ಕೂ ಸೂಕ್ತ ಸಮಯ ಬರಬೇಕು ಎಂದು ಹೇಳಿದರು.