ನಗರಸಭೆಯಿಂದ 4.38 ಕೋಟಿ ರೂ. ಉಳಿತಾಯ ಬಜೆಟ್

ಚಿಕ್ಕಮಗಳೂರು: ನಗರಸಭೆ ಪ್ರಸುತ್ತ ಅವಧಿ ಕೊನೆಯ 2019-20ನೇ ಸಾಲಿಗೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್ ಮಂಡಿಸಿದ 4.38 ಕೋಟಿ ರೂ. ಉಳಿತಾಯ ಬಜೆಟ್​ನ್ನು ಸರ್ವಸದಸ್ಯರು ಸರ್ವಾನುಮತದಿಂದ ಅಂಗೀಕರಿಸಿದರು.

ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಆಯವ್ಯಯ ಮಂಡನೆ ಸಭೆಯಲ್ಲಿ, ಅಧ್ಯಕ್ಷರು ಏಳು ಪುಟಗಳ ಬಜೆಟ್ ಓದಿ ಮಂಡಿಸಿದರು. ಇದನ್ನು ಆಡಳಿತ ಮತ್ತು ಪ್ರತಿಕ್ಷ ಸದಸ್ಯರು ಸಣ್ಣಪುಟ್ಟ ಆಕೇಪಗಳನ್ನೆತ್ತಿ ಒಕ್ಕೊರಲಿನಿಂದ ಒಪ್ಪಿ ಅನುಮೋದಿಸಿದರು.

ಬಜೆಟ್ ಗಾತ್ರ 140.40 ಕೋಟಿ ರೂ. ಇದ್ದು, ಪ್ರಾರಂಭಿಕ ಶಿಲ್ಕು 12.28 ಕೋಟಿ ರೂ. ಮತ್ತು ವಿವಿಧ ಮೂಲಗಳ ಆದಾಯ 60.10 ಕೋಟಿ ರೂ. ಆಗಿದೆ. ಒಟ್ಟು 72.39 ಕೋಟಿ ರೂ. ಆದಾಯವಾಗಿದ್ದು, ವಿವಿಧ ಯೋಜನೆಗೆ 68 ಕೋಟಿ ರೂ. ವೆಚ್ಚಕ್ಕೆ ಮೀಸಲಿಟ್ಟು, 4.38 ಕೋಟಿ ರೂ. ಉಳಿಕೆ ಅಂದಾಜಿಸಲಾಗಿದೆ.

ಬಜೆಟ್ ಮಂಡನೆಗೂ ಮೊದಲು ಸಾರ್ವಜನಿಕರು, ನಾಗರಿಕರ ಮುಖಂಡರ ಸಭೆ ಎರಡು ಬಾರಿ ನಡೆಸಿ ಸಲಹೆ ಪಡೆಯಲಾಗಿದೆ. ರಾಜಸ್ವ ಖಾತೆ, ಬಂಡವಾಳ ಖಾತೆ ಮತ್ತು ವಿಶೇಷ ಖಾತೆ ಎಂಬ ಮೂರು ಹಂತದಲ್ಲಿ ಆಯವ್ಯಯ ತಯಾರಿಸಲಾಗಿದೆ. ಐದು ವರ್ಷದಲ್ಲಿ ನಗರಸಭೆ ಸದೃಢತೆ ಕಂಡು ಬಂದಿದೆ. 2018-19ನೇ ಸಾಲಿನ ಆಯವ್ಯಯದಲ್ಲಿ ಹಲವಾರು ಹೊಸ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಶೇ.70ರಷ್ಟು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಅನುದಾನ ನಿರೀಕ್ಷೆ, ಮೀಸಲು: ಎಸ್​ಎಫ್​ಸಿ ಯಿಂದ 8.40 ಕೋಟಿ ರೂ. ಅನುದಾನ ನಿರೀಕ್ಷಿಸಲಾಗಿದ್ದು, ಇದರಲ್ಲಿ 6.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ, ಚರಂಡಿ, ಕುಡಿಯುವ ನೀರಿನ ಉಳಿಕೆ ಯೋಜನೆ ಪೂರ್ಣಗೊಳಿಸಲು ಮೀಸಲಿಡಲಾಗಿದೆ. ಆಸ್ತಿ ತೆರಿಗೆಯಿಂದ 6.80 ಕೋಟಿ ರೂ., ಕಟ್ಟಡ ಪರವಾನಗಿಯಿಂದ 75 ಲಕ್ಷ ರೂ., ವಾಣಿಜ್ಯ ಮಳಿಗೆಯಿಂದ 1.70 ಕೋಟಿ ರೂ., ರ್ಪಾಂಗ್ ಶುಲ್ಕದಿಂದ 50 ಲಕ್ಷ ರೂ., ಎಸ್​ಎಫ್​ಸಿ ಮುಕ್ತ ನಿಧಿಯಿಂದ 6 ಕೋಟಿ ರೂ., ಎಸ್​ಎಫ್​ಸಿ ವೇತನ ನಿಧಿಯಿಂದ 8.40 ಕೋಟಿ ರೂ. ನಿರೀಕ್ಷಿಸಲಾಗಿದೆ.

2018-19ನೇ ಅವಧಿಯಲ್ಲಿ ನಗರಸಭಾ ನಿಧಿ , ಎಸ್​ಎಫ್​ಸಿ, 14ನೇ ಹಣಕಾಸು ಯೋಜನೆಗಳಲ್ಲಿ ನಗರದ 10.61 ಕಿ.ಮೀ. ನಷ್ಟು ರಸ್ತೆ, 6.22 ಕಿ.ಮೀ. ಚರಂಡಿ ಮತ್ತು 2.36 ಕಿ.ಮೀ. ನೀರು ಸರಬರಾಜು ಪೈಪ್​ಲೈನ್ ಮತ್ತು 10 ಬೋರ್​ವೆಲ್ ಕೊರೆಸಲಾಗಿದೆ. ನಗರಕ್ಕೆ ಯಗಚಿ ನೀರು ಸರಬರಾಜು ವ್ಯವಸ್ಥೆಯ ಉನ್ನತೀಕರಣ ಹಾಗೂ 24*7 ನೀರು ಪೂರೈಕೆ ಕಾಮಗಾರಿಯ ಅಮೃತ್ ಯೋಜನೆಯಡಿ ಮಂಜೂರಾಗಿದ್ದು, ಶೇ.40ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಹಂತಹಂತವಾಗಿ ಮನೆ ಮನೆ ಸಂಪರ್ಕ ಈಗ ಮಡಲಾಗುತ್ತಿದೆ.