ಬಿಎಸ್​ವೈಗೆ ಬೇರೆ ಕೆಲಸವಿಲ್ಲ

ವಿಜಯಪುರ:ಸಮ್ಮಿಶ್ರ ಸರ್ಕಾರ ಬೀಳಿಸುವ ಮಾತು ಬಿಟ್ಟು ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾಡಲು ಬೇರೆ ಯಾವುದೇ ಕೆಲಸವಿಲ್ಲವೆಂದು ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಹರಿಹಾಯ್ದಿದ್ದಾರೆ.

ಕೆಲ ದಿನಗಳ ಹಿಂದೆ ಸಿಎಂ ಕುಮಾರಸ್ವಾಮಿ ಬಜೆಟ್ ಮಂಡಿಸುವುದಿಲ್ಲ ಎಂದರು. ಶಾಸಕರು ಗೈರಾಗುತ್ತಾರೆ ಎಂದರು. ಆದರೆ, ಆದದ್ದೇನು? ಸಿಎಂ ಬಜೆಟ್ ಮಂಡಿಸಿಯಾಯಿತಲ್ಲ. ಯಡಿಯೂರಪ್ಪ ಇಂಥದ್ದೇ ಸುಳ್ಳು ಹೇಳಿಕೊಂಡು ಹೋಗುತ್ತಿದ್ದಾರಷ್ಟೆ. ಸಮ್ಮಿಶ್ರ ಸರ್ಕಾರ ಐದು ವರ್ಷ ಪರಿಪೂರ್ಣ ಆಡಳಿತ ನೀಡಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ತಮಗೂ ಬಿಜೆಪಿಯವರು ಆಫರ್ ನೀಡಿದ್ದಾರಾ? ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮನಗೂಳಿ, ಬಿಜೆಪಿಯವರು ನನ್ನ ಸನಿಹಕ್ಕೆ ಬರಲ್ಲ. ಅವರು ನನಗೆ ಮಾತನಾಡಿಸುವ ಧೈರ್ಯ ಇಲ್ಲ. ನಾನು ದೇವೇಗೌಡರ ಕಟ್ಟಾ ಬೆಂಬಲಿಗ. ಎಂದಿಗೂ ನಾನು ಪಕ್ಷ ತೊರೆಯುವ ಪ್ರಶ್ನೆಯೇ ಇಲ್ಲ. ‘ನಮ್ಮ ಜತೆ ಉಂಡವರು, ಬೆಳೆದವರು ಎಲ್ಲ ಬಿಟ್ಟು ಹೋಗಿದ್ದಾರೆ. ನೀನು ಮಾತ್ರ ಬಿಡಬೇಡ ಎಂಬ ದೇವೆಗೌಡರ ಮಾತನ್ನೂ ನಾನು ಎಂದಿಗೂ ಮೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎರಡು ದಿನದಲ್ಲಿ ಆಲಮೇಲ ತಾಲೂಕು ಘೊಷಣೆ:ನೂತನ ತಾಲೂಕು ಘೊಷಣೆ ಪಟ್ಟಿಯಲ್ಲಿ ಆಲಮೇಲ ಹೆಸರಿತ್ತು. ಅದು ಹೇಗೆ ಕೈತಪ್ಪಿತು ಎನ್ನುವುದು ಗೊತ್ತಿಲ್ಲ. ಈ ಬಗ್ಗೆ ಸಿಎಂ ಕುಮಾರಸ್ವಾಮಿ ಅವರ ಗಮನಕ್ಕೆ ತಂದಿದ್ದು ಇನ್ನೆರಡು ದಿನದಲ್ಲಿ ಅದಕ್ಕೂ ತಾಲೂಕು ಭಾಗ್ಯ ಲಭಿಸಲಿದೆ. ನಾನು ಕೊಟ್ಟ ಮಾತು ಎಂದೂ ತಪ್ಪಿಲ್ಲ. ಆಲಮೇಲ ತಾಲೂಕು ಕೇಂದ್ರ ಮಾಡಿಯೇ ಸಿದ್ದ ಎಂದು ಸಚಿವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ.ರಿಯಾಜ್ ಫಾರೂಕಿ, ಹುಸೇನ ಬಾಗಾಯತ, ದಸ್ತಗೀರ ಸಾಲೋಟಗಿ, ಯಾಕೂಬ್ ಕೂಪರ್, ಸಿದ್ದು ಕಾಮತ ಇತರರಿದ್ದರು.

ತ್ರಿವಳಿ ತಲಾಖ್ ರದ್ದು:ಸರ್ಕಾರದ ನವದೆಹಲಿ ವಿಶೇಷ ಪ್ರತಿನಿಧಿ ಸೈಯ್ಯದ್ ಮೋಯಿನ್ ಅಲ್ತಾಪ್ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತ ವಿರೋಧಿ ನೀತಿ ಅನುಸರಿಸುತ್ತಿದೆ. ತ್ರಿವಳಿ ತಲಾಖ್ ಬಗ್ಗೆ ವಿನಾಕಾರಣ ಗೊಂದಲ ಸೃಷ್ಟಿಸಿದೆ. ತ್ರಿವಳಿ ತಲಾಖ್ ಎಂದರೆ ಕೇವಲ ಒಂದೇ ಕ್ಷಣದಲ್ಲಿ ಆಗುವ ವಿಚ್ಛೇದನ ಪ್ರಕ್ರಿಯೆ ಅಲ್ಲ. ಆದರೆ ಅದನ್ನೆಲ್ಲವನ್ನೂ ಬದಿಗೊತ್ತಿ ತ್ರಿವಳಿ ತಲಾಖ್ ಬಗ್ಗೆ ತಪ್ಪು ಕಲ್ಪನೆ ಮೂಡಿಸಿದೆ. ಒಂದು ವೇಳೆ ಕೇಂದ್ರದಲ್ಲಿ ನಮ್ಮ ಮೈತ್ರಿ ಸರ್ಕಾರ ಬಂದರೆ ಖಂಡಿತವಾಗಿಯೂ ತ್ರಿವಳಿ ತಲಾಖ್ ರದ್ದುಗೊಳಿಸಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ರೇವಣ್ಣ ಹೊಣೆಯಲ್ಲ:ಮಾಜಿ ಸಚಿವ ಬಿ.ಬಿ. ನಿಂಗಯ್ಯ ಮಾತನಾಡಿ, ಎಸ್​ಸಿ-ಎಸ್​ಟಿ ನೌಕರರ ಮೀಸಲು ಜೇಷ್ಠತೆ ವಿಸ್ತರಿಸುವ ಕಾಯ್ದೆ-2017ನ್ನು ಅನುಷ್ಠಾನಗೊಳಿಸುವಲ್ಲಿ ಯಾವುದೇ ರೀತಿ ವಿಳಂಬ ನೀತಿ ಅನುಸರಿಸಿಲ್ಲ. ವಿಳಂಬ ನೀತಿ ಅನುಸರಿಸಲಾಗುತ್ತಿದೆ ಎಂದು ರೇವಣ್ಣ ಅವರ ತಲೆ ಮೇಲೆ ಕಟ್ಟುವುದು ಸರಿಯಲ್ಲ. ರೇವಣ್ಣನವರು ಅದಕ್ಕೆ ಹೊಣೆಯಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಇದಕ್ಕೆ ದನಿಗೂಡಿಸಿದ ಸಚಿವ ಎಂ.ಸಿ. ಮನಗೂಳಿ, ದಲಿತ ವಿರೋಧಿ ನೀತಿಯನ್ನು ಸರ್ಕಾರ ಯಾವುದೇ ಕಾರಣಕ್ಕೂ ಅನುಸರಿಸುವುದಿಲ್ಲ. ಸುಪ್ರೀಂಕೋರ್ಟ್ ಮಾರ್ಗ ಸೂಚಿಯನ್ವಯ ಕಾರ್ಯನಿರ್ವಹಿಸಲಾಗುತ್ತಿದೆ. ದಲಿತ ವಿರೋಧಿ ನೀತಿ ಅನುಸರಿಸುತ್ತಿಲ್ಲ ಎಂದರು.

ಬಜೆಟ್​ಗೆ ಶ್ಲಾಘನೆ:ಸಿಎಂ ಕುಮಾರಸ್ವಾಮಿ ಮಂಡಿಸಿರುವ ಬಜೆಟ್ ಐತಿಹಾಸಿಕವಾಗಿದೆ. ವಿಶೇಷವಾಗಿ ಈ ಭಾಗದ ದ್ರಾಕ್ಷಿ- ದಾಳಿಂಬೆ ಬೆಳೆಗಾರರ ಹಿತರಕ್ಷಣೆ, ಆರ್ಥಿಕ ನೆರವು ನೀಡುವ ದೃಷ್ಟಿ ಯಿಂದ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಆರೋಗ್ಯ ದೃಷ್ಟಿಯಿಂದಲೂ ಸಂಜಯ ಗಾಂಧಿ ಆಸ್ಪತ್ರೆ ಸ್ಥಾಪನೆ, ಮಹಾನಗರ ಪಾಲಿಕೆಗೆ 125 ಕೋಟಿ ರೂ. ಅನುದಾನ ಹೀಗೆ ಬಜೆಟ್​ನಲ್ಲಿ ಸಾಕಷ್ಟು ಸಿಂಹಪಾಲು ಜಿಲ್ಲೆಗೆ ದೊರಕಿದೆ ಎಂದು ಸಚಿವರು ಹೇಳಿದರು. ಸರ್ಕಾರಿ ವೈದ್ಯಕೀಯ ಕಾಲೇಜ್, ತೋಟಗಾರಿಕೆ ಕಾಲೇಜ್ ಕೈ ತಪ್ಪಿದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಮನಗೂಳಿ, ತೋಟಗಾರಿಕೆ ಕಾಲೇಜ್ ಸ್ಥಾಪನೆಗೆ ಸರ್ವವಿಧದಲ್ಲಿಯೂ ಪ್ರಯತ್ನಿಸಿದ್ದೇನೆ. ಕೈ ತಪ್ಪಿ ಹೋಗಿದೆ ಎಂದು ಭಾವಿಸ ಬೇಡಿ. ಅದಕ್ಕೂ ಬೆನ್ನು ಹತ್ತಿದ್ದೇನೆ ಎಂದರು.