More

    ಜಾಗತಿಕ ಆರ್ಥಿಕ ಹಿಂಜರಿತದಲ್ಲೂ ಅಭಿವೃದ್ಧಿ ಮುನ್ನೋಟದ ಬಜೆಟ್: ಬಿಎಸ್​ವೈ ವಿಶ್ಲೇಷಣೆ

    ಕೋವಿಡ್ ಹಾಗೂ ಇನ್ನಿತರ ಕಾರಣಗಳಿಂದಾಗಿ ಜಾಗತಿಕ ಆರ್ಥಿಕ ಹಿಂಜರಿತ ಇದ್ದಾಗ್ಯೂ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ತೆಗೆದುಕೊಂಡ ಸಕಾಲಿಕ ದಿಟ್ಟ ಕ್ರಮಗಳಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿ 2023-24 ನೇ ಸಾಲಿಗೆ ದೀರ್ಘಕಾಲಿನ ಅಭಿವೃದ್ಧಿಯ ಮುನ್ನೋಟದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅತ್ಯುತ್ತಮವಾದ ಆಯವ್ಯಯವನ್ನು ಮಂಡಿಸಿದ್ದಾರೆ. ಈ ಆಯವ್ಯಯದಲ್ಲಿ ನಮ್ಮ ಪಕ್ಷದ ಆಶಯದಂತೆ ರೈತರ ಆದಾಯವನ್ನು ದ್ವಿಗುಣಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಜ್ಯದ ಬಡವರು, ದುರ್ಬಲ ವರ್ಗದವರು, ಮಹಿಳೆಯರು, ಶೋಷಿತರ ಹಾಗೂ ಯುವ ಜನರ ಶ್ರೇಯೋಭಿವೃದ್ಧಿಗೆ ಹಲವಾರು ಉಪ ಕ್ರಮಗಳನ್ನು ಕೈಗೊಳ್ಳಲಾಗಿದೆ.

    ಮೂಲಸೌಕರ್ಯಗಳಿಗೆ ಒತ್ತು ನೀಡುವುದನ್ನು ಈ ಆಯವ್ಯಯದಲ್ಲಿ ಮುಂದುವರಿಸಿದ್ದು, ಇದರಿಂದ ರಾಜ್ಯವು ದೇಶದಲ್ಲಿಯೇ ಹೂಡಿಕೆದಾರರ ನೆಚ್ಚಿನ ತಾಣವಾಗಿ ಮುಂದುವರಿಯಲಿದೆ. ಬೆಂಗಳೂರು ನಗರ ಅಭಿವೃದ್ಧಿ ನಮ್ಮ ಪಕ್ಷದ ಆದ್ಯತೆಯಾಗಿದ್ದು, ಅದರಂತೆ 2023-24 ನೇ ಸಾಲಿಗೆ 9,698 ಕೋಟಿ ರೂ. ಅನುದಾನವನ್ನು ಒದಗಿಸಲು ಉದ್ದೇಶಿಸಿರುವುದು ಬೆಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಕೋವಿಡ್ ಸಾಂಕ್ರಾಮಿಕದ ನಂತರ ಮೊದಲ ಬಾರಿಗೆ ರಾಜ್ಯದಲ್ಲಿ ರಾಜಸ್ವ ಹೆಚ್ಚುವರಿ ಆಯವ್ಯಯವನ್ನು ಮಂಡಿಸಿದ್ದು, ಬಿ.ಜೆ.ಪಿ. ನೇತೃತ್ವದಲ್ಲಿ ರಾಜ್ಯವು ಆರ್ಥಿಕವಾಗಿ ಸದೃಢವಾಗಿರುತ್ತದೆ ಎಂಬುದು ಸಾಬೀತಾಗಿದೆ. 3,09,182 ಕೋಟಿ ರೂ.ಗಳ ಮೊತ್ತದ ಆಯವ್ಯಯ ಮಂಡಿಸಿದ್ದು, ವಿತ್ತೀಯ ಹೊಣೆಗಾರಿಕೆ ಅಧಿನಿಯಮದ ಇತಿಮಿತಿಯೊಳಗೆ ಜನಪರವಾದ ದೀರ್ಘಕಾಲಿನ ಅಭಿವೃದ್ಧಿಯ ದೂರದೃಷ್ಟಿಯೊಂದಿಗೆ ಅತ್ಯುತ್ತಮವಾದ ಆಯವ್ಯಯವನ್ನು ನೀಡಿರುವುದಕ್ಕೆ ನಾನು ಮುಖ್ಯಮಂತ್ರಿಯವರನ್ನು ಅಭಿನಂದಿಸುತ್ತೇನೆ.

    ರೈತರಿಗೆ ಬಡ್ಡಿ ರಹಿತ ಸಾಲದ ಮೊತ್ತವನ್ನು 3 ರಿಂದ 5 ಲಕ್ಷ ರೂ. ವರೆಗೆ ಹೆಚ್ಚಿಸಿರುವುದು ಸ್ವಾಗತಾರ್ಹ. ಬೀಜ, ಗೊಬ್ಬರ ಖರೀದಿಗೆ ಭೂಸಿರಿ ಎಂಬ ಹೊಸ ಯೋಜನೆ ಜಾರಿಗೆ ತಂದು 10,000 ರೂ. ಸಹಾಯಧನ ಒದಗಿಸುವುದು ಒಳ್ಳೆಯದು. ರೈತರ ಬದುಕಿಗೆ ಭದ್ರತೆ ಒದಗಿಸಲು ರೂ.180 ಕೋಟಿ ವೆಚ್ಚದಲ್ಲಿ ಜೀವನ ಜ್ಯೋತಿ ವಿಮಾ ಯೋಜನೆ ಜಾರಿಗೆ ತರಲಾಗಿದೆ.

    ರೈತರ ಕೃಷಿ ಉತ್ಪನ್ನಗಳನ್ನು ಪೋ›ತ್ಸಾಹಿಸಿ ಬೆಲೆ ಬರುವಂತಾಗಲು ಕೊಯ್ಲೋತ್ತರ ತಂತ್ರಜ್ಞಾನಕ್ಕೆ 100 ಕೋಟಿ ರೂಪಾಯಿ ಯೋಜನೆ ರೂಪಿಸಿದೆ. ಬೆಂಬಲ ಬೆಲೆ ಯೋಜನೆ ಅಡಿ ಆವರ್ತ ನಿಧಿಯಡಿ 3,500 ಕೋಟಿ ರೂ.ಅನುದಾನ ಹೆಚ್ಚಿಸಿರುವ ಐತಿಹಾಸಿಕ ನಿರ್ಧಾರದಿಂದ ಕೃಷಿ ಉತ್ಪನ್ನಗಳ ಬೆಲೆ ಕುಸಿತ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ.

    ಕ್ರೀಡಾಪಟುಗಳಿಗೆ ಪೋ›ತ್ಸಾಹಿಸಲು ಕರ್ನಾಟಕ ಒಲಂಪಿಕ್ಸ್ ಕನಸಿನ ಯೋಜನೆ ರೂಪಿಸಿರುವುದು ಉತ್ತಮ ಕ್ರಮವಾಗಿದೆ. ಯುವಕರಿಗೆ ಉದ್ಯೋಗ ದೊರೆಯುವಂತಾಗಲು ಕಲಿಕೆ ಜೊತೆಗೆ ಕೌಶಲ್ಯ ಎಂಬ ಯೋಜನೆ ರೂಪಿಸಿ ವಿದ್ಯಾರ್ಥಿಗಳಿಗೆ ಹೆಚ್ಚುವರಿ ಆರ್ಥಿಕ ತಾಂತ್ರಿಕ ಕೌಶಲ್ಯ ಹೊಂದಿ ನಿರುದ್ಯೋಗ ಸಮಸ್ಯೆಗೆ ಪರಿಹಾರ ರೂಪಿಸಲಾಗಿದೆ.

    ಸಂಶೋಧನೆ ಹಾಗೂ ನಾವೀನ್ಯತೆಗೆ ಪೋ›ತ್ಸಾಹ ನೀಡಲು ಕರ್ನಾಟಕ ರಾಜ್ಯ ಸಂಶೋಧನೆ ಪ್ರತಿಷ್ಠಾನವನ್ನು ಸ್ಥಾಪಿಸಲು ಉದ್ದೇಶಿಸಿರುವುದು ಸ್ವಾಗತಾರ್ಹ. ಶಿಕ್ಷಣಕ್ಕೆ ಒತ್ತು ನೀಡಿದ್ದು, ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯಕವಾಗಲು ಮುಖ್ಯಮಂತ್ರಿ ವಿದ್ಯಾಶಕ್ತಿ ಯೋಜನೆ ರೂಪಿಸಿರುವುದು ಸ್ವಾಗತಾರ್ಹ. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸಲು ಅನುಕೂಲವಾಗಲು ಶೂನ್ಯ ಬಡ್ಡಿದರದಲ್ಲಿ ಗೃಹಿಣಿ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ.

    ಕೋವಿಶೀಲ್ಡ್ ಕೊಡಬಾರದಿತ್ತು, ಭಾರತದಲ್ಲಿನ್ನು ವ್ಯಾಕ್ಸಿನ್​ ಅನಗತ್ಯ; ಲಸಿಕೆ ಅಡ್ಡಪರಿಣಾಮಗಳ ಕುರಿತು ದನಿ ಎತ್ತಿದ ಡಾಕ್ಟರ್​

    ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts