Tuesday, 11th December 2018  

Vijayavani

ಪಂಚರಾಜ್ಯಗಳ ಫಲಿತಾಂಶದಲ್ಲಿ ಕೈ ಆಟ-3 ರಾಜ್ಯಗಳಲ್ಲಿ ಅಧಿಕಾರದತ್ತ ಕಾಂಗ್ರೆಸ್​ - ವರ್ಕೌಟ್​ ಆಗದ ಮೋದಿ - ಅಮಿತ್ ಷಾ ಅಲೆ        ರಾಜಸ್ಥಾನದಲ್ಲಿ ಮ್ಯಾಜಿಕ್ ನಂಬರ್ ಸನಿಹ ಕಾಂಗ್ರೆಸ್-95 ಕ್ಷೇತ್ರದಲ್ಲಿ ಕಾಂಗ್ರೆಸ್, 80 ಕ್ಷೇತ್ರಗಳಲ್ಲಿ ಬಿಜೆಪಿ ಮುನ್ನಡೆ        ಮಧ್ಯಪ್ರದೇಶದಲ್ಲಿ ಹಾವು ಏಣಿ ಆಟ - ಕೈ ಕಮಲ ಸಮಬಲದ ಹೋರಾಟ - ಸರ್ಕಾರ ರಚನೆಗೆ ಪಕ್ಷೇತರರೇ ನಿರ್ಣಾಯಕರು        ತೆಲಂಗಾಣದಲ್ಲಿ ನಡೆಯದ ಕೈ-ಕಮಲದ ಆಟ-ಶರವೇಗದಲ್ಲಿ ಮುನ್ನುಗಿದ ಕೆಸಿಆರ್​-ನೂತನ ಸಿಎಂ ಆಗಿ ನಾಳೆ ಪ್ರಮಾಣ ವಚನ        ಛತ್ತೀಸ್​ಗಢದಲ್ಲಿ ಅಧಿಕಾರದತ್ತ ಕಾಂಗ್ರೆಸ್ - ಆಡಳಿತಾರೂಢ ಬಿಜೆಪಿಗೆ ಭಾರಿ ಮುಖಭಂಗ        ಮಿಜೋರಾಂನಲ್ಲಿ ಕಾಂಗ್ರೆಸ್​​​ಗೆ ಭಾರಿ ಮುಖಭಂಗ - ಅಧಿಕಾರದ ಗದ್ದುಗೆ ಹಿಡಿದ ಎಂಎನ್​​​ಎಫ್​ - 25 ಕ್ಷೇತ್ರಗಳಲ್ಲಿ ಭರ್ಜರಿ ಮುನ್ನಡೆ       
Breaking News

ಆದಾಯ ತೆರಿಗೆ ಮಿತಿ, ನಿರೀಕ್ಷೆಯೇ ಅತಿ

Friday, 02.02.2018, 3:06 AM       No Comments

ಚುನಾವಣೆ ಪೂರ್ವದ ಕೊನೆಯ ಪೂರ್ಣಾವಧಿ ಬಜೆಟ್​ನಲ್ಲಿ ಮೋದಿ ಸರ್ಕಾರ ಆದಾಯ ತೆರಿಗೆ ಮಿತಿಯನ್ನು ಏರಿಸಲಿದೆ ಎಂಬ ಆರ್ಥಿಕ ತಜ್ಞರ ನಿರೀಕ್ಷೆ ಈಡೇರಿಲ್ಲ. ಪ್ರಮಾಣಿತ ಕಡಿತಕ್ಕೆ ಇದು ಸೀಮಿತವಾಗಿದೆ. ಒಟ್ಟಾರೆಯಾಗಿ ಕರದಾತರಿಗೆ ವಿಶೇಷ ಕೊಡುಗೆಗಳನ್ನೇನು ನೀಡದಿದ್ದರೂ, ಹಿರಿಯ ನಾಗರಿಕರಿಗೆ ಹಲವು ಉಪಯುಕ್ತ ಕ್ರಮಗಳನ್ನು ಪ್ರಕಟಿಸಲಾಗಿದೆ.

 ಹಿಂದಿನ ಆದಾಯ ತೆರಿಗೆ ಮಿತಿಯನ್ನೇ ಕೇಂದ್ರ ಸರ್ಕಾರ ಮುಂದುವರಿಸುತ್ತಿದ್ದು, ಪ್ರಮಾಣಿತ ಕಡಿತ (ಸ್ಟ್ಯಾಂಡರ್ಡ್ ಡಿಡಕ್ಷನ್) ವನ್ನು ಮಾತ್ರ ಮರುಪರಿಚಯ ಮಾಡಲಾಗಿದೆ. ಸುಮಾರು 12 ವರ್ಷಗಳ ಬಳಿಕ ಮತ್ತೆ ಪ್ರಮಾಣಿತ ಕಡಿತವನ್ನು ತಂದಿದ್ದು, 40 ಸಾವಿರ ರೂ. ಮಿತಿ ನಿಗದಿಪಡಿಸಲಾಗಿದೆ. ಈ ಮೊತ್ತಕ್ಕೆ ತೆರಿಗೆದಾರರು ವಿನಾಯಿತಿ ಪಡೆಯಬಹುದಾಗಿದೆ. ಸಾರಿಗೆ ಭತ್ಯೆ ಹಾಗೂ ವೈದ್ಯಕೀಯ ವೆಚ್ಚಗಳು ಇದರ ವ್ಯಾಪ್ತಿಗೆ ಬರಲಿದೆ. ಇದರಿಂದ ಸುಮಾರು 2.50 ಕೋಟಿ ಉದ್ಯೋಗಸ್ಥರಿಗೆ ಲಾಭವಾಗಲಿದೆ. ಪ್ರಮಾಣಿತ ಕಡಿತವು ಪಿಂಚಣಿದಾರರಿಗೂ ಅನ್ವಯವಾಗಲಿದೆ. ಒಟ್ಟಾರೆ ಈ ನಿರ್ಧಾರದಿಂದ ಕೇಂದ್ರ ಸರ್ಕಾರಕ್ಕೆ 8 ಸಾವಿರ ಕೋಟಿ ರೂ. ಹೊರೆಯಾಗಲಿದೆ.

ಇ-ತೆರಿಗೆ ಲೆಕ್ಕಾಚಾರ: ಕಳೆದ ಒಂದು ವರ್ಷದಿಂದ ದೇಶದ 102 ನಗರಗಳಲ್ಲಿ ಪ್ರಾಯೋಗಿಕವಾಗಿ ನಡೆಯುತ್ತಿದ್ದ ಇ-ತೆರಿಗೆ ಲೆಕ್ಕಾಚಾರವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ಆದಾಯ ತೆರಿಗೆ ಇಲಾಖೆಯಲ್ಲಿನ ಭ್ರಷ್ಟಾಚಾರ ನಿಯಂತ್ರಣ ಸಾಧ್ಯವಾಗಲಿದೆ. ಹೊಸ ವಿಧಾನದಲ್ಲಿ ಇಲಾಖೆ ಅಧಿಕಾರಿಗಳು ಹಾಗೂ ತೆರಿಗೆದಾರರ ನಡುವೆ ವೈಯಕ್ತಿಕ ಸಂಪರ್ಕವೇ ಇರುವುದಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕವೇ ತೆರಿಗೆ ಲೆಕ್ಕಾಚಾರವಾಗಲಿದೆ. ಹಾಗೆಯೇ ಎಲ್ಲ ನೋಟಿಸ್ ಹಾಗೂ ಇತರ ಮಾಹಿತಿಗಳು ಆದಾಯ ತೆರಿಗೆ ಇಲಾಖೆಯ ವೆಬ್ ಪೋರ್ಟಲ್​ನಲ್ಲಿಯೇ ಲಭ್ಯವಿರಲಿದೆ. ಇದರಿಂದ ವೈಯಕ್ತಿಕ ತೆರಿಗೆದಾರರು ಹಾಗೂ ಉದ್ಯಮಿಗಳಿಗೆ ಪ್ರ್ರೊಜನವಾಗಲಿದೆ.

 

ಕಳೆದ ಸಾಲಿನ ಐಟಿ ಲೆಕ್ಕಾಚಾರ

# ಆದಾಯ ತೆರಿಗೆ ಪಾವತಿಸಿದ ನೌಕರರು- 1.89 ಕೋಟಿ ರೂ

# ಆದಾಯ ತೆರಿಗೆ ಪಾವತಿ ಮೊತ್ತ- -1.44 ಲಕ್ಷ ಕೋಟಿ ರೂ

# ಸರಾಸರಿ ಆದಾಯ ತೆರಿಗೆ ಮೊತ್ತ- – 76,306 ರೂ

# ತೆರಿಗೆ ಪಾವತಿಸಿದ ವ್ಯಾಪಾರಿಗಳು- 1.88 ಕೋಟಿ ರೂ

# ಆದಾಯ ತೆರಿಗೆ ಪಾವತಿ ಮೊತ್ತ- – 48,000 ಕೋಟಿ ರೂ

# ಸರಾಸರಿ ಆದಾಯ ತೆರಿಗೆ ಮೊತ್ತ- – 25,753 ರೂ

ಸೆಸ್ ಶೇ.1 ಹೆಚ್ಚಳ

ವೈಯಕ್ತಿಕ ಆದಾಯ ತೆರಿಗೆ ಮತ್ತು ಸಂಸ್ಥೆಗಳ ಮೇಲಿನ ತೆರಿಗೆಗೆ ಪ್ರಸ್ತುತ ವಿಧಿಸಲಾಗುತ್ತಿರುವ ಶೇ. 3 ಶಿಕ್ಷಣ ಸೆಸ್ ಬದಲಾಗಿ ಮುಂದಿನ ಆರ್ಥಿಕ ವರ್ಷದಿಂದ ಶಿಕ್ಷಣ ಮತ್ತು ಆರೋಗ್ಯ ಸೆಸ್ ಎಂದು ಜಂಟಿಯಾಗಿ ಶೇ. 4 ಮೇಲ್ತೆರಿಗೆ ವಿಧಿಸುವ ಪ್ರಸ್ತಾಪವನ್ನು ವಿತ್ತ ಸಚಿವ ಅರುಣ್ ಜೇಟ್ಲಿ ಮುಂದಿಟ್ಟಿದ್ದಾರೆ. ಸೆಸ್​ನಿಂದ ಸಂಗ್ರಹಿಸಲಾಗುವ ಮೊತ್ತವನ್ನು ಬಡ ಮತ್ತು ಹಿಂದುಳಿದ ಕುಟುಂಬಗಳ ಆರೋಗ್ಯ ಮತ್ತು ಶಿಕ್ಷಣಕ್ಕೆ ಬಳಸಲಾಗುತ್ತದೆ. ಪ್ರಸಕ್ತ ವಿಧಿಸುತ್ತಿರುವ ಶೇ. 3 ಶಿಕ್ಷಣ ಮೇಲ್ತೆರಿಗೆಯಲ್ಲಿ ಶೇ. 2ನ್ನು ಪ್ರಾಥಮಿಕ ಶಿಕ್ಷಣಕ್ಕೆ ಮತ್ತು ಶೇ. 1ನ್ನು ಪ್ರೌಢ ಶಿಕ್ಷಣಕ್ಕೆ ವಿನಿಯೋಗಿಸಲಾಗುತ್ತಿದೆ.

ಆಮದು ಸರಕಿಗೆ ಪ್ರತ್ಯೇಕ ಸೆಸ್

ಆಮದು ಸರಕುಗಳ ಮೇಲೆ ಶಿಕ್ಷಣ ಸೆಸ್ ರದ್ದುಪಡಿಸಿ, ಅದರ ಬದಲಾಗಿ ಶೇ. 10ರ ಸಮಾಜ ಕಲ್ಯಾಣ ಮೇಲ್ತೆರಿಗೆ ವಿಧಿಸಲು ಸರ್ಕಾರ ನಿರ್ಧರಿಸಿದೆ. ಈ ಮೊತ್ತವನ್ನು ಸರ್ಕಾರದ ವಿವಿಧ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಲಾಗುತ್ತದೆ. ಕೆಲವೊಂದು ಆಮದು ಸರಕುಗಳಿಗೆ ಶೇ. 3 ಸರ್​ಚಾರ್ಜ್ ವಿಧಿಸಲಾಗುತ್ತದೆ.

ಸಣ್ಣ ಉದ್ಯಮಕ್ಕೆ ಸಬ್ಸಿಡಿ

ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಉದ್ಯಮಗಳಿಗೆ ಉತ್ತೇಜನ ನೀಡಲು ಸರ್ಕಾರ ನಿರ್ಧರಿಸಿದೆ. ಈ ವರ್ಗದ ಎಲ್ಲ ಉದ್ಯಮಗಳಿಗೆ ಬಂಡವಾಳ ಮತ್ತು ಬಡ್ಡಿ ಸಹಾಯಧನ, ಸಂಶೋಧನೆ, ಬೆಂಬಲ ಇತ್ಯಾದಿ ಉದ್ದೇಶಗಳಿಗಾಗಿ 3,794 ಕೋಟಿ ರೂ. ಸಬ್ಸಿಡಿ ಒದಗಿಸಲಾಗಿದೆ. ನೋಟು ನಿಷೇಧ ಮತ್ತು ಜಿಎಸ್​ಟಿ ಬಳಿಕ ಈ ಕ್ಷೇತ್ರದ ಉದ್ಯಮಗಳಲ್ಲಿ ಹಲವು ಬದಲಾವಣೆಯಾಗಿದ್ದು, ಹೊಸ ಹೂಡಿಕೆ ಮತ್ತು ಯುವ ಉದ್ಯಮಿಗಳನ್ನು ಆಕರ್ಷಿಸಲು ಈ ಸಬ್ಸಿಡಿ ಅನುಕೂಲವಾಗಲಿದೆ.

 

ಪ್ರಸಕ್ತ ಸಾಲಿನ ಬಜೆಟ್​ನ ಎಲ್ಲ ಅಂಶಗಳನ್ನೂ ಚುನಾವಣೆ ಕೇಂದ್ರಿತವಾಗಿ ಮಂಡಿಸಲಾಗಿದೆ ಎನ್ನಲಾಗುವುದಿಲ್ಲ. ಆದರೆ ಕೃಷಿ ಕ್ಷೇತ್ರದ ಬಿಕ್ಕಟ್ಟು ನಿವಾರಣೆಗೆ ಬಜೆಟ್ ಪೂರಕವಾಗಿಲ್ಲ. ಹಲವು ಯೋಜನೆಗಳ ಮೂಲಕ ಅಭಿವೃದ್ಧಿಯ ಕಲ್ಪನೆ ಮೂಡಿಸಿದರೂ, ದುಃಸ್ಥಿತಿಯಲ್ಲಿರುವ ವಿತ್ತೀಯ ಕ್ಷೇತ್ರ ಸುಧಾರಣೆ ಕಷ್ಟಸಾಧ್ಯ. ರೈತರ ಆದಾಯ ದ್ವಿಗುಣಗೊಳಿಸುವುದು ಅಸಾಧ್ಯ.

| ಡಾ.ಮನಮೋಹನ ಸಿಂಗ್ ಮಾಜಿ ಪ್ರಧಾನಿ

 

ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್​ನಿಂದ ಬಡವರ ಕನಸಿಗೆ ಇಂಬು ದೊರೆತಿದೆ. ರೈತರು, ಮೂಲ ಸೌಕರ್ಯ, ಗ್ರಾಮೀಣಾಭಿವೃದ್ಧಿ ಹಾಗೂ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಕ್ಷೇತ್ರಗಳ ಅಭಿವೃದ್ಧಿಗೆ ಸರ್ಕಾರ ಅಪಾರ ಹಣ ಮೀಸಲಿಟ್ಟಿದ್ದು, ಬಡವರು ಆರ್ಥಿಕವಾಗಿ ಸಬಲರಾಗಲಿದ್ದಾರೆ. ನವಭಾರತ ನಿರ್ವಣದ ಹಾದಿಯಲ್ಲಿ ಮುನ್ನುಗ್ಗಲು ಈ ಬಜೆಟ್ ಸಹಕಾರಿಯಾಗಲಿದೆ.

| ಅಮಿತ್ ಷಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

 

ವಿತ್ತೀಯ ಸುಧಾರಣೆ ಪರೀಕ್ಷೆಯಲ್ಲಿ ಅರುಣ್ ಜೇಟ್ಲಿ ಅನುತ್ತೀರ್ಣರಾಗಿದ್ದಾರೆ. ಭಾರತದ ಆರ್ಥಿಕ ದುಸ್ಥಿತಿ ಗಂಭೀರ ಪರಿಣಾಮ ಬೀರಲಿದೆ. ಹಣಕಾಸು ಕ್ರೋಡೀಕರಣದಲ್ಲೂ ಬಜೆಟ್ ವಿಫಲವಾಗಿದೆ. ಹಣಕಾಸು ಪರಿಸ್ಥಿತಿ ಸುಧಾರಣೆಯಾಗದ ಹೊರತು ಯಾವ ಬಜೆಟ್ ಸಹ ಯಶಸ್ವಿಯಾಗಲು ಸಾಧ್ಯವಿಲ್ಲ. ಈ ದಿಸೆಯಲ್ಲಿ ನಡೆಯುವಲ್ಲಿ ಅರುಣ್ ಜೇಟ್ಲಿಯವರು ಹಿನ್ನಡೆ ಅನುಭವಿಸಿದ್ದಾರೆ.

| ಪಿ.ಚಿದಂಬರಂ ಕೇಂದ್ರ ಮಾಜಿ ಹಣಕಾಸು ಸಚಿವ

 

ಭಾರತವು ಪ್ರಗತಿಯ ಹಾಗೂ ಸಕಾರಾತ್ಮಕ ಹಾದಿಯಲ್ಲಿ ಸಾಗುತ್ತಿದೆ ಎಂಬುದಕ್ಕೆ ಈ ಮುಂಗಡಪತ್ರ ನಿದರ್ಶನವಾಗಿದೆ. ಪ್ರಮುಖವಾಗಿ ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೂ ಇದುವರೆಗೂ ಇದ್ದ ಅಂತರಕ್ಕೆ ಪ್ರಸಕ್ತ ಸಾಲಿನ ಬಜೆಟ್ ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ. ಗ್ರಾಮೀಣಾಭಿವೃದ್ಧಿಗೆ ನೀಡಿದ ಪ್ರಾಮುಖ್ಯತೆ ಹೊಸ ಭಾಷ್ಯ ಬರೆಯುವುದು ಖಚಿತ.

| ರಾಜನಾಥ ಸಿಂಗ್ ಕೇಂದ್ರ ಗೃಹ ಸಚಿವ

 

 


ಕರದಾತನಿಗೆ ಕಹಿ, ಬಡವನಿಗೆ ಸಿಹಿ

| ಸಿಎ ನಾರಾಯಣಭಟ್ ತೆರಿಗೆ ತಜ್ಞರು

ಮುಂಗಡಪತ್ರವು ಆದಾಯ ತೆರಿಗೆ ಮತ್ತು ಜಿಎಸ್​ಟಿ ವಿಷಯದಲ್ಲಿ ತಟಸ್ಥ ಧೋರಣೆ ವಹಿಸಿದಂತಿದೆ. ಸರ್ಕಾರದ ಮುಖ್ಯ ಆದಾಯವಾದ ಈ ಬಾಬತ್ತುಗಳಲ್ಲಿ ಹೆಚ್ಚೇನು ಬದಲಾವಣೆ ತರಲಾಗಿಲ್ಲ. ಆದರೆ ಬಹಳ ಜನರ ನಿರೀಕ್ಷೆಯಂತೆ ಜೇಟ್ಲಿಯವರು ಅದಾಯದ ಕಡೆ ಹೆಚ್ಚು ಗಮನ ಹರಿಸದೆ ವೆಚ್ಚದ ಕಡೆ ಹೆಚ್ಚು ಗಮನಹರಿಸಿದಂತೆ ಅನಿಸುತ್ತಿದೆ. ವೆಚ್ಚದ ಕಡೆ ನೋಡಿದಾಗ ಸರ್ಕಾರದ ಗುರಿಯೆತ್ತವೆಂಬ ಅರಿವಾಗುವುದು. ಗ್ರಾಮೀಣ ಭಾರತ ಅದರಲ್ಲೂ ರೈತರ, ಬಡವರ ಮತ್ತು ಕೆಳ ವರ್ಗಗಳತ್ತ ಬಜೆಟ್ ಮುಖ ಎನ್ನುವದು ಸ್ಪಷ್ಟ. ಪ್ರಗತಿ ರಥದ ತೇರು ಹಳ್ಳಿಗಳತ್ತ ಹೊರಳಿದೆ. ಆದಾಯ ತೆರಿಗೆಯಲ್ಲಿ ತರಲಾರದ ಕನಿಷ್ಟ ಬದಲಾವಣೆಗಳು ಕರದಾತನಿಗೆ ಅಷ್ಟೊಂದು ಮುದ ಉಂಟುಮಾಡುವಂತಿಲ್ಲ. ಆದಾಯ ತೆರಿಗೆಯ ದರದಲ್ಲಿ ಹೆಚ್ಚಳವಿಲ್ಲವೆಂದಿದ್ದರೂ, ಆರೋಗ್ಯ ಮತ್ತು ಶಿಕ್ಷಣ ಸೆಸ್​ನ್ನು ಈಗಿದ್ದ ಶೇ.3ರಿಂದ 4 ಹೆಚ್ಚಳ ಮಾಡಲಾಗಿದೆ. ನೌಕರ ವರ್ಗ ಬಹಳ ನಿರೀಕ್ಷಿಸಿದ್ದ, ಸಾಮಾನ್ಯ ವಿನಾಯಿತಿ (ಸ್ಟಾಂಡರ್ಡ್ ಡಿಡಕ್ಸನ್) ಪುನಃ ಜಾರಿಗೆ ಬಂದಿದೆ. 40,000 ರೂಪಾಯಿಯನ್ನು ಪಗಾರಿನಲ್ಲಿ ವಿನಾಯಿತಿ ಮಾಡಲಾಗುವುದು. ಆದರೆ ಆ ಕೈಯಲ್ಲಿ ಕೊಟ್ಟದ್ದನ್ನು ಈ ಕೈಯಲ್ಲಿ ತಗೊಂಡ ಎನ್ನುವಂತೆ, ವೈದ್ಯಕೀಯ ಖರ್ಚಿಗಾಗಿ ಕೊಡುತ್ತಿದ್ದ 15,000 ರೂಪಾಯಿಗಳನ್ನು ಮತ್ತು ತಿರುಗಾಟದ ಖರ್ಚಿಗಾಗಿ ಕೊಡುತ್ತಿದ್ದ 19,200 ರೂಪಾಯಿಗಳ ವಿನಾಯಿತಿಯನ್ನು ಹಿಂಪಡೆಯಲಾಗಿದೆ. ಅಂದರೆ ನಿವ್ವಳವಾಗಿ 5,800 ರೂಪಾಯಿಗಳ ವಿಶೇಷ ವಿನಾಯಿತಿಯನ್ನು ನೀಡಿದಂತಾಯಿತು. ದೀರ್ಘಾವಧಿ ಷೇರಿನ ಮಾರಾಟ ಲಾಭಕ್ಕೆ, ಲಾಭವು 1 ಲಕ್ಷದ ಮೇಲಿದ್ದರೆ ಶೇ.10 ತೆರಿಗೆ ವಿಧಿಸಲಾಗಿದೆ. ರಿಟ್ಟರ್ನ್ ಸಲ್ಲಿಸಬೇಕಿರುವ ದಿನದಾಚೆ ರಿಟರ್ನ್ ಸಲ್ಲಿಕೆಯಾಗಿದ್ದರೆ, ಆದಾಯ ವಿನಾಯಿತಿಯನ್ನು ಪಡೆಯಲಾಗದು. ಅಂದರೆ, ಕಲಂ 80ಸಿಯಡಿ ನೀಡುವ ಹೂಡಿಕೆಗಳಿಗಾಗಿ ನೀಡುವ ವಿನಾಯಿತಿ ಅಥವಾ ವೈದ್ಯಕೀಯ ವಿಮೆಗೆ 80ಡಿ ಅಡಿ ಕೊಡುವ ವಿನಾಯಿತಿ ಮುಂತಾದವುಗಳಿಂದ ವಂಚಿತರಾಗಬೇಕಾಗುತ್ತದೆ. ಕಂಪನಿಗಳು ತಮ್ಮ ಷೇರುದಾರರಿಗೆ ಅಥವಾ ನಿರ್ದೇಶಕರುಗಳಿಗಳಿಗೆ ಸಾಲ ಅಥವಾ ಮುಂಗಡ ಕೊಟ್ಟರೆ, ಈ ಹಿಂದೆ ಪಡಕೊಂಡವರ ಪ್ರತ್ಯಕ್ಷ ಆದಾಯವೆಂದು ಪರಿಗಣಿಸಿ ತೆರಿಗೆ ಹಾಕಲಾಗುತ್ತಿತ್ತು. ಇದೀಗ ಮುಂಗಡ ಕೊಟ್ಟ ಕಂಪನಿಯೆ ಶೇ.30 ತೆರಿಗೆ ಕೊಡಬೇಕೆಂದು ತೀರ್ವನಿಸಲಾಗಿದೆ. ದತ್ತಿ ಸಂಸ್ಥೆಗಳು ಮಾಡುವ ಖರ್ಚುಗಳಿಗೆ ಟಿ.ಡಿ.ಎಸ್ ಮಾಡಬೇಕೆಂಬ ಒತ್ತಡವಿರಲಿಲ್ಲ. ಅಂದರೆ ಮೂಲದಲ್ಲಿ ತೆರಿಗೆ ಕಡಿತ ಮಾಡದೆ ಇತರರಿಗೆ ಹಣ ಸಂದಾಯ ಮಾಡಿದ್ದರೆ ಅಪಾಯವೇನೂ ಇದ್ದಿರಲಿಲ್ಲ. ದತ್ತಿ ಸಂಸ್ಥೆಗಳು 10,000 ರೂ.ಗಿಂತ ಮೆಲ್ಪಟ್ಟು ನಗದಿನಲ್ಲಿ ವ್ಯಯಿಸುವಂತಿಲ್ಲ.

ಪ್ರಥಮ ಪ್ರಜೆಯ ವೇತನ ಹೆಚ್ಚಳ

ವೇತನ ತಾರತಮ್ಯ ಸರಿಪಡಿಸುವ ನಿಟ್ಟಿನಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಹಾಗೂ ರಾಜ್ಯಪಾಲರ ವೇತನವನ್ನು ಕ್ರಮವಾಗಿ ತಿಂಗಳಿಗೆ 5 ಲಕ್ಷ ರೂ, 4 ಲಕ್ಷ ರೂ, ಹಾಗೂ 3.5 ಲಕ್ಷ ರೂ. ಗಳಿಗೆ ಏರಿಕೆ ಮಾಡಲಾಗಿದೆ. ಈವರೆಗೆ ರಾಷ್ಟ್ರಪತಿ ತಿಂಗಳಿಗೆ 1.5 ಲಕ್ಷ ರೂ. ವೇತನ ಪಡೆಯುತ್ತಿದ್ದರೆ, ಉಪ ರಾಷ್ಟ್ರಪತಿ 1.25 ಲಕ್ಷ ರೂ. ಪಡೆಯುತ್ತಿದ್ದರು. ರಾಜ್ಯಪಾಲರಿಗೆ 1.10 ಲಕ್ಷ ರೂ. ವೇತನವಿತ್ತು. ಸರ್ಕಾರದ ಉನ್ನತ ಅಧಿಕಾರಿಗಳು ಹಾಗೂ ಸೇವಾ ಮುಖ್ಯಸ್ಥರಿಗಿಂತ ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ರಾಜ್ಯಪಾಲರು ಕಡಿಮೆ ಸಂಬಳ ಪಡೆಯುತ್ತಿದ್ದರಾದರೂ, 7ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಲು ಕಾನೂನು ತಿದ್ದುಪಡಿ ಮಾಡದ ಕಾರಣ, ಈ ವೇತನ ತಾರತಮ್ಯವನ್ನು ಸರಿಪಡಿಸಲು ಸಾಧ್ಯವಾಗಿರಲಿಲ್ಲ. 2016ರ ಜ.1ರಂದು 7 ನೇ ವೇತನ ಆಯೋಗದ ಶಿಫಾರಸುಗಳನ್ನು ಅನುಷ್ಠಾನಗೊಳಿಸಿದ ನಂತರ, ದೇಶದಲ್ಲೇ ಉನ್ನತ ಅಧಿಕಾರಿಯಾಗಿರುವ ಸಚಿವ ಸಂಪುಟ ಕಾರ್ಯದರ್ಶಿ 2.5 ಲಕ್ಷ ರೂ. ವೇತನ ಪಡೆಯುತ್ತಿದ್ದರೆ, ಕೇಂದ್ರ ಸರ್ಕಾರದ ಕಾರ್ಯದರ್ಶಿ 2.25 ಲಕ್ಷ ವೇತನ ಪಡೆಯುತ್ತಿದ್ದಾರೆ. ಭೂಸೇನೆ, ವಾಯುಪಡೆ ಹಾಗೂ ನೌಕಾಪಡೆಗಳು ರಾಷ್ಟ್ರಪತಿಗಳ ಅಧೀನದಲ್ಲಿದ್ದರೂ ಈ ಮೂರೂ ಪಡೆಗಳ ಮುಖ್ಯಸ್ಥರಿಗಿಂತ ರಾಷ್ಟ್ರಪತಿಗಳು ಸಂಬಳ ಪಡೆಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಪ್ರಥಮ ಪ್ರಜೆಯ ವೇತನವನ್ನು ಮೂರು ಪಟ್ಟು ಹೆಚ್ಚು ಮಾಡಲಾಗಿದೆ.

ಸಂಸದರ ವೇತನ ಸ್ವಯಂಚಾಲಿತ ಪರಿಷ್ಕರಣೆ

ಸಂಸದೀಯ ಜಂಟಿ ಸಮಿತಿಯೇ ಸಂಸದರ ವೇತನ ನಿರ್ಧರಿಸುವ ಸಂಪ್ರದಾಯಕ್ಕೆ ಇನ್ನುು ಬ್ರೇಕ್ ಬೀಳಲಿದ್ದು, ಪ್ರತಿ 5 ವರ್ಷಗಳಿಗೊಮ್ಮೆ ಹಣದುಬ್ಬರಕ್ಕೆ ಅನುಗುಣವಾಗಿ ಸಂಸತ್ ಸದಸ್ಯರ ವೇತನವನ್ನು ಸ್ವಯಂಚಾಲಿತವಾಗಿ ಪರಿಷ್ಕರಣೆ ಮಾಡುವ ಹೊಸ ಕಾನೂನನ್ನು ಸಚಿವ ಜೇಟ್ಲಿ ಪ್ರಸ್ತಾಪಿಸಿದ್ದಾರೆ. ಪ್ರತಿಬಾರಿ ಜನಪ್ರತಿನಿಧಿಗಳು ತಮ್ಮ ವೇತನ ಹೆಚ್ಚಳ ಮಾಡಿಕೊಂಡಾಗ ಸಾರ್ವಜನಿಕ ವಲಯದಲ್ಲಿ ಚರ್ಚೆ ಹಾಗೂ ಟೀಕೆಗಳು ಕೇಳಿಬರುತ್ತಿತ್ತು. ಹೀಗಾಗಿ 2018ರ ಏ.1ರಿಂದ ಜಾರಿಗೆ ಬರುವಂತೆ ಸಂಸತ್ ಸದಸ್ಯರ ವೇತನ, ಕ್ಷೇತ್ರ ಭತ್ಯೆ, ಕಚೇರಿ ವೆಚ್ಚ, ಸಭೆಯ ಭತ್ಯೆಯನ್ನು

ಮರುನಿಗದಿ ಪಡಿಸಲು ಅಗ್ಯತ ಬದಲಾವಣೆಗಳನ್ನು ತರಲು ನಿರ್ಧರಿಸಲಾಗಿದೆ ಎಂದು ಜೇಟ್ಲಿ ತಿಳಿಸಿದರು. ಹಣದುಬ್ಬರಕ್ಕೆ ಅನುಗುಣವಾಗಿ ಪ್ರತಿ ಐದು ವರ್ಷಗಳಿಗೊಮ್ಮೆ, ಸ್ವಯಂಚಾಲಿತವಾಗಿ ವೇತನ ಪರಿಷ್ಕರಣೆ ಮಾಡುವಂತಹ ಕಾನೂನು ಜಾರಿಗೆ ನಿರ್ಧರಿಸಲಾಗಿದ್ದು, ಭವಿಷ್ಯದಲ್ಲಿ ಜನಪ್ರತಿನಿಧಿಗಳ ವೇತನ ಹೆಚ್ಚಳದ ವಿಚಾರವಾಗಿ ಯಾವುದೇ ಟೀಕೆಗಳು ಕೇಳಿ ಬರುವುದಿಲ್ಲ ಎಂದು ಜೇಟ್ಲಿ ಆಶಯ ವ್ಯಕ್ತಪಡಿಸಿದರು. ಸಂಸದರ ಸಂಭಾವನೆಯಲ್ಲಿ 50 ಸಾವಿರ ಮೂಲ ವೇತನ ಹಾಗೂ 45 ಸಾವಿರ ಕ್ಷೇತ್ರ ಭತ್ಯೆ (ಇತರ ಭತ್ಯೆಗಳನ್ನು ಹೊರತುಪಡಿಸಿ) ಒಳಗೊಂಡಿದ್ದು, ಪ್ರತಿ ಸಂಸದನಿಗೆ ಸರ್ಕಾರ ತಿಂಗಳಿಗೆ ಸರಾಸರಿ 2.7 ಲಕ್ಷ ರೂಪಾಯಿಗಳನ್ನು ಪಾವತಿಸುತ್ತಿದೆ.

80 ಸಾವಿರ ಕೋಟಿ ರೂ. ಆದಾಯ

ಕೇಂದ್ರ ಸರ್ಕಾರ ಮುಂದಿನ ಆರ್ಥಿಕ ವರ್ಷದಲ್ಲಿ ಬಂಡವಾಳ ಹಿಂತೆಗೆತದಿಂದ ಶೇ.10 ಹೆಚ್ಚುವರಿ ಆದಾಯ ನಿರೀಕ್ಷಿಸಿದೆ. 2017-18ನೇ ಸಾಲಿನಲ್ಲಿ ಸರ್ಕಾರ ಎಚ್​ಪಿಸಿಎಲ್​ನ ಶೇ.51.11 ಷೇರನ್ನು ಖರೀದಿಸುವಂತೆ ಒಎನ್​ಜಿಸಿ ಮನವೊಲಿಸುವ ಮೂಲಕ 36,915 ಕೋಟಿ ರೂ. ಆದಾಯ ಪಡೆದುಕೊಂಡಿತ್ತು. ಆ ಮೂಲಕ ಅದು ಆ ವರ್ಷದ ಬಜೆಟ್​ನಲ್ಲಿ ನಿಗದಿಪಡಿಸಿಕೊಂಡಿದ್ದ 72,500 ಕೋಟಿ ರೂ. ಬಂಡವಾಳ ಹಿಂತೆಗೆತದ ಆದಾಯದ ಗುರಿಗಿಂತಲೂ ಹೆಚ್ಚುವರಿಯಾಗಿ 1 ಲಕ್ಷ ಕೋಟಿ ರೂ. ಆದಾಯ ಸಂಗ್ರಹಿಸಿತ್ತು. ಕೇಂದ್ರೀಯ ಸಾರ್ವಜನಿಕ ಉದ್ಯಮಗಳಿಂದ 46,500 ಕೋಟಿ ರೂ., ಆಯಕಟ್ಟಿನ ಬಂಡವಾಳ ಹಿಂತೆಗೆತದಿಂದ 15 ಸಾವಿರ ಕೋಟಿ ರೂ. ಹಾಗೂ ವಿಮಾ ಕಂಪನಿಗಳ ಬಂಡವಾಳ ಹಿಂತೆಗೆತದಿಂದ 11 ಸಾವಿರ ಕೋಟಿ ರೂ. ಆದಾಯ ಕ್ರೊಢೀಕರಣವು ಇದರಲ್ಲಿ ಸೇರಿತ್ತು. ಆದ್ದರಿಂದ, ಮುಂದಿನ ಆರ್ಥಿಕ ವರ್ಷದಲ್ಲಿ ಅದು ಬಂಡವಾಳ ಹಿಂತೆಗೆತ ಪ್ರಕ್ರಿಯೆ ಮೂಲಕ 80 ಸಾವಿರ ಕೋಟಿ ರೂ. ಬಂಡವಾಳ ಹಿಂತೆಗೆದ ಗುರಿ ಹಾಕಿಕೊಂಡಿದೆ. 2019-20 ಮತ್ತು 2020-21ನೇ ಸಾಲಿನಲ್ಲಿ ತಲಾ 60 ಸಾವಿರ ಕೋಟಿ ರೂ. ಬಂಡವಾಳ ಹಿಂತೆಗೆತದ ಆದಾಯ ನಿರೀಕ್ಷಿಸುತ್ತಿದೆ. ಇದರ ಜತೆಗೆ ಏರ್ ಇಂಡಿಯಾ ಸೇರಿ ಇನ್ನೂ 24 ಸಿಪಿಎಸ್​ಇಗಳಿಂದ ಬಂಡವಾಳ ಹಿಂತೆಗೆತದ ಪ್ರಕ್ರಿಯೆಗೆ ಚಾಲನೆ ನೀಡಿದೆ. ಜನರಲ್ ಇನ್ಶೂರೆನ್ಸ್ ಕಂಪನಿಗಳು, ನ್ಯಾಷನಲ್ ಇನ್ಶೂರೆನ್ಸ್ ಕಂಪನಿ, ಯುನೈಟೆಡ್ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಮತ್ತು ಓರಿಯೆಂಟಲ್ ಇಂಡಿಯಾ ಇನ್ಶೂರೆನ್ಸ್ ಕಂಪನಿಗಳನ್ನು ವಿಲೀನಗೊಳಿಸಿ, ಏಕಮಾತ್ರ ವಿಮಾ ಕಂಪನಿಯಾಗಿ ರೂಪಿಸಿ, ಅದರ ಷೇರುಗಳನ್ನು ಮಾರಾಟಕ್ಕೆ ಬಿಡುಗಡೆ ಮಾಡಲಿದೆ.

ನೋಟ್​ಬ್ಯಾನ್ ಪ್ರಾಮಾಣಿಕರ ಉತ್ಸವ

ತೆರಿಗೆದಾರರ ಸಂಖ್ಯೆ ಹೆಚ್ಚಾಗಿರುವುದು ನೋಟು ಅಮಾನ್ಯೀಕರಣದ ಸಂಕೇತವಾಗಿದ್ದು, ‘ಇದು ಪ್ರಾಮಾಣಿಕರ ಉತ್ಸವ (ಇಮಾನ್ದಾರಿ ಕಾ ಉತ್ಸವ್) ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬಣ್ಣಿಸಿದರು. ನೋಟು ನಿಷೇಧಿಸಿ ಕಪು್ಪ ಹಣಕ್ಕೆ ಕಡಿವಾಣ ಹಾಕುವಾಗ ನಾವು ತೆರಿಗೆ ಮೇಲೂ ಕಣ್ಣು ಹಾಯಿಸಿದ್ದೆವು. ಅದರ ಫಲವಾಗಿಯೇ ಇಂದು ಅಪಾರ ಸಂಖ್ಯೆಯ ತೆರಿಗೆದಾರರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದಾರೆ. ಈ ಯಶಸ್ಸು ಕಪು್ಪ ಹಣದ ವಿರುದ್ಧದ ಹೋರಾಟಕ್ಕೆ ಹಾಗೂ ಪ್ರಾಮಾಣಿಕವಾಗಿ ತೆರಿಗೆ ಪಾವತಿಸಿದವರಿಗೆ ಸಲ್ಲಬೇಕು ಎಂದು ಬಜೆಟ್ ಭಾಷಣದ ವೇಳೆ ಮೆಚ್ಚುಗೆ ವ್ಯಕ್ತಪಡಿಸಿದರು. ನೋಟು ನಿಷೇಧಗೊಳಿಸಿದ್ದು ತೆರಿಗೆ ವ್ಯವಸ್ಥೆ ಸುಧಾರಣೆ ಜತೆಗೆ ವಹಿವಾಟು ಡಿಜಟಲೀಕರಣವಾಗಿದ್ದು, ಇದರಿಂದ ಕಪು್ಪ ಹಣ ನಿಮೂಲನೆಗೆ ಸಹಕಾರಿಯಾಗುತ್ತಿದೆ ಎಂದು ಹೇಳಿದರು. ಇದೇ ಕಾರಣಕ್ಕಾಗಿಯೇ 2014-15ನೇ ಸಾಲಿನಲ್ಲಿ 6.47 ಕೋಟಿ ಇದ್ದ ಮೂಲ ತೆರಿಗೆದಾರರ ಸಂಖ್ಯೆ 2017 ಮಾರ್ಚ್ ಅಂತ್ಯದ ವೇಳೆಗೆ 8.27 ಕೋಟಿಗೆ ತಲುಪಿದೆ. ನೋಟು ನಿಷೇಧದ ಬಳಿಕ, ಅಂದರೆ 2016-17ನೇ ಸಾಲಿನಲ್ಲಿ 85.51 ಲಕ್ಷ ನೂತನ ತೆರಿಗೆದಾರರು ನೋಂದಣಿ ಮಾಡಿಕೊಂಡಿದ್ದಾರೆ.

ಇಮಾನ್​ದಾರಿ ಕಿ ಉತ್ಸವ್: ನೇರ ತೆರಿಗೆ ಸಂಗ್ರಹದಲ್ಲಿ ಈ ಬಾರಿ ಏರಿಕೆ ಕಂಡಿದ್ದು ಶೇ.18.7ರ ಬೆಳವಣಿಗೆ ಸಾಧಿಸಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಇದು ಶೇ.12.6ರಷ್ಟಿತ್ತು. ಕಳೆದ 2 ವರ್ಷದಲ್ಲಿನ ಆರ್ಥಿಕ ಸುಧಾರಣೆಯಿಂದ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹದಲ್ಲಿ 90 ಸಾವಿರ ಕೋಟಿ ರೂ ಏರಿಕೆಯಾಗಿದೆ.

Leave a Reply

Your email address will not be published. Required fields are marked *

Back To Top