ಬುವಾ-ಭತೀಜಾಗೆ ಮೋದಿಯೇ ಸವಾಲು

ಲೋಕಸಭೆಯ ಮೊದಲ ಹಂತದ ಮತದಾನಕ್ಕೆ ಪಶ್ಚಿಮ ಉತ್ತರಪ್ರದೇಶದ 8 ಕ್ಷೇತ್ರಗಳು ಸಜ್ಜಾಗಿವೆ. 2013ರ ಕೋಮುಸಂಘರ್ಷ, ಸಮಾಜವಾದಿ ಪಕ್ಷದ ಮೇಲಿನ ಆಕ್ರೋಶ ಹಾಗೂ ಎಲ್ಲಕ್ಕಿಂತ ಮೀರಿದ ಮೋದಿ ಅಲೆ ಪರಿಣಾಮವಾಗಿ ಈ ಎಂಟೂ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ ಬದಲಾದ ಸಾಮಾಜಿಕ-ರಾಜಕೀಯ ಚಿತ್ರಣಗಳು ಕದನ ಕುತೂಹಲವನ್ನು ಕಾವೇರಿಸಿವೆ. ಈ ಕುರಿತ ಸಾಕ್ಷಾತ್ ವರದಿ ನೀಡಿದ್ದಾರೆ ‘ವಿಜಯವಾಣಿ’ ದೆಹಲಿ ಪ್ರತಿನಿಧಿ ರಾಘವ ಶರ್ಮ ನಿಡ್ಲೆ.

ಮೋದಿ ನಾಯಕತ್ವ, ಪಾಕ್ ವಿರುದ್ಧ ರಾಜತಾಂತ್ರಿಕ ಮೇಲುಗೈ, ಮಹಾಮೈತ್ರಿ ಜಾತಿ ಸಮೀಕರಣ, ಮಾಯಾವತಿ-ಅಖಿಲೇಶ್ ಪ್ರಾದೇಶಿಕ ಪ್ರಾಬಲ್ಯ ಹಾಗೂ ಕೃಷಿ ಬಿಕ್ಕಟ್ಟು…

ಲೋಕಸಭೆ ಚುನಾವಣೆಗೆ ಏಪ್ರಿಲ್ 11ರಂದು ಮತ ಹಾಕಲಿರುವ ಪಶ್ಚಿಮ ಉತ್ತರಪ್ರದೇಶದ ಮತದಾರರ ಮಧ್ಯೆ ಈಗ ಈ ವಿಷಯಗಳದ್ದೇ ಚರ್ಚೆ. ಇಲ್ಲಿನ ಕ್ಷೇತ್ರಗಳಲ್ಲಿ ಒಂದೆಡೆ ಎನ್​ಡಿಎ ಮತ್ತೆ ಅಧಿಕಾರಕ್ಕೆ ಬರಬೇಕು ಎಂಬ ದನಿಗಳು ಕೇಳುತ್ತಿದ್ದರೆ ಮತ್ತೊಂದೆಡೆ ಮಹಾಮೈತ್ರಿಯ ‘ಮೋದಿ ಹಟಾವೋ ದೇಶ ಬಚಾವೋ’ ಅಭಿಯಾನವೂ ತೀವ್ರತೆ ಪಡೆದುಕೊಂಡಿದೆ. ಪ.ಉತ್ತರಪ್ರದೇಶದ ಕೈರಾನಾ ಲೋಕಸಭೆಯ ಉಪ ಚುನಾವಣೆಯ ಗೆಲುವೇ ಮಹಾಮೈತ್ರಿಯ ಮೂಲಬೇರು. ದೇಶಾದ್ಯಂತ ಮಹಾಮೈತ್ರಿ ಬಗ್ಗೆ ದನಿ ಕೇಳಿಬಂದಿದ್ದೇ ಈ ಗೆಲುವಿನಿಂದ. ಆದರೆ ಉತ್ತರಪ್ರದೇಶಕ್ಕೆ ಸೀಮಿತವಾಗಿರುವ ಎಸ್​ಪಿ-ಬಿಎಸ್​ಪಿ-ಆರ್​ಎಲ್​ಡಿ (ರಾಷ್ಟ್ರೀಯ ಲೋಕದಳ) ಒಳಗೊಂಡ ಮಹಾಮೈತ್ರಿ, ಮೋದಿ-ಷಾ ನೇತೃತ್ವದ ಬಿಜೆಪಿಯ ಬೆವರಿಳಿಸುತ್ತಿದೆ. ಬಿಜೆಪಿ ಪಕ್ಷ ಮತ್ತು ಅಭ್ಯರ್ಥಿಗಿಂತ ಹೆಚ್ಚು ಮತದಾರರ ಬಾಯಲ್ಲಿ ಮೋದಿಮಂತ್ರವೇ ಮೊಳಗುತ್ತಿರುವುದು ಬುವಾ-ಭತೀಜಾಗೆ (ಮಾಯಾವತಿ-ಅಖಿಲೇಶ್) ಸವಾಲಾಗಿ ಪರಿಣಮಿಸಿದೆ.

ಪಶ್ಚಿಮ ಉ.ಪ್ರದೇಶದ ಅನೇಕ ಜಿಲ್ಲೆಗಳು ಈಗಲೂ 2013ರ ಕೋಮುದಂಗೆಯ ಕರಿನೆರಳಿಂದ ಹೊರಬಂದಿಲ್ಲ. ‘ರಾಜಕೀಯ ಲಾಭಕ್ಕಾಗಿ ನಾವು ಬಲಿಯಾದೆವು’ ಎಂಬ ಅಳಲು ಅಮಾಯಕ ಸಂತ್ರಸ್ತರದ್ದು. ಮೂಲ ಹಳ್ಳಿಗಳನ್ನು ಬಿಟ್ಟ ಮಂದಿ ಬೇರೊಂದು ಹಳ್ಳಿಯಲ್ಲಿ ಜೀವನ ಕಂಡುಕೊಳ್ಳುತ್ತಿರುವ ಹೊತ್ತಲ್ಲೇ ಈಗ ಮತ್ತೊಂದು ಚುನಾವಣಾ ಕದನ ಎದುರು ನೋಡುತ್ತಿದ್ದಾರೆ. ಮುಜಫರನಗರ ಗಲಭೆ, ಹಿಂಸಾಚಾರಗಳು ಈ ಭಾಗದ ಸಾಮಾಜಿಕ-ರಾಜಕೀಯ ಚಿತ್ರಣವನ್ನೇ ಬದಲಿಸಿದ್ದರೂ, ಹೊಸ ವಿಷಯಗಳು ಮತದಾರರ ಮುಂದೆ ಚರ್ಚೆಗೆ ಬರುತ್ತಿದ್ದು, ಮೊದಲ ಬಾರಿಗೆ ಮತದಾನ ಮಾಡುತ್ತಿರುವವರು ಹಾಗೂ ಯುವಜನಾಂಗವನ್ನು ಬಿಜೆಪಿ ಸೆಳೆಯುತ್ತಿದೆ. ರಾಹುಲ್-ಮೋದಿ ವಿಚಾರಗಳು ಬಂದಾಗ, ಬಹುಪಾಲು ಯುವಕರು ಮೋದಿ ನಾಯಕತ್ವವೇ ದೇಶಕ್ಕೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಾವು ಮಾತನಾಡಿಸಿದ ಕೆಲವು ಮುಸ್ಲಿಂ ಯುವಕರು ಕೂಡ ಮೋದಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಅಚ್ಚರಿ ಮೂಡಿಸಿದರು. 2002ರ ಗೋಧ್ರಾ ನರಮೇಧ ನಂತರ ಮುಸ್ಲಿಮರು ಮೋದಿಯಿಂದ ದೂರವುಳಿದಿದ್ದರು. ಆದರೆ, ಕಳೆದೈದು ವರ್ಷಗಳ ಆಡಳಿತ ಕೆಲ ಮುಸ್ಲಿಂ ಯುವಕರ ಮನಸ್ಸನ್ನು ಬದಲಿಸುತ್ತಿದೆ ಎಂಬುದಕ್ಕೆ ಪಶ್ಚಿಮ ಉ.ಪ್ರದೇಶವೇ ಸಾಕ್ಷಿಯಾಗಿತ್ತು.

ಈ ಮಧ್ಯೆ, ಮೇಲ್ವರ್ಗದ ಮತದಾರರಲ್ಲಿ ಯೋಗಿ ಆದಿತ್ಯನಾಥ ಸರ್ಕಾರ ಕಾನೂನು-ಸುವ್ಯವಸ್ಥೆಯಲ್ಲಿ ಬದಲಾವಣೆ ತಂದಿದೆ ಎಂಬ ಅಭಿಪ್ರಾಯವಿದ್ದದ್ದೂ ಕಂಡುಬಂತು. ‘ಹಿಂದೆಲ್ಲ ಮುಜಫರನಗರದಲ್ಲಿ ಸಂಜೆ ಆಗುತ್ತಿದ್ದಂತೆ ಅಂಗಡಿ ಮುಚ್ಚುತ್ತಿದ್ದ ನಾವು ಈಗ ರಾತ್ರಿ 11 ಗಂಟೆವರೆಗೂ ಬಾಗಿಲು ತೆಗೆದಿರುತ್ತೇವೆ. ಕುಟುಂಬದೊಂದಿಗೆ ರಾತ್ರಿ ನೆಮ್ಮದಿಯಿಂದ ಓಡಾಡಬಹುದಾಗಿದೆ. ಮೋದಿ-ಯೋಗಿಯಿಂದಾಗಿ ಗೂಂಡಾಗಳ ಮೇಲಾಟಕ್ಕೆ ಬ್ರೇಕ್ ಬಿದ್ದಿದೆ’ ಎಂದು ನಗರದ ದಿನಸಿಅಂಗಡಿ ಮಾಲೀಕ ವಿನೋದ್ ಮಿಶ್ರಾ ಹೇಳಿದರು.

ಏರ್ ಸ್ಟ್ರೈಕ್ ಮೊದಲು ಮತ್ತು ನಂತರ: ಪುಲ್ವಾಮ ದಾಳಿ ಮತ್ತು ಬಾಲಾಕೋಟ್ ಪ್ರತಿದಾಳಿ ಬಳಿಕ ಮೋದಿ ನಾಯಕತ್ವವೇ ಬಿಜೆಪಿಯ ಚುನಾವಣೆಯ ಪ್ರಮುಖ ಕಾರ್ಯಸೂಚಿ. ಜನರು ಕೂಡ ಬಿಜೆಪಿ ಅಭ್ಯರ್ಥಿ ಬಗ್ಗೆ ತಿಳಿದುಕೊಳ್ಳುವುದಕ್ಕಿಂತ ಹೆಚ್ಚು ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

‘ಪಾಕಿಸ್ತಾನದ ಉಗ್ರರು ಮುಂಬೈ ಮೇಲೆ ದಾಳಿ ಮಾಡಿದಾಗ ಮನಮೋಹನ್ ಸಿಂಗ್ ಸರ್ಕಾರ ಏನು ಮಾಡಿತು? ಮೋದಿಯವರ ದಿಟ್ಟಕ್ರಮದಿಂದಾಗಿ ಪಾಕ್ ಈಗ ವಿಶ್ವದ ಮುಂದೆ ಬೆತ್ತಲಾಗಿದೆ. ದೇಶಕ್ಕಾಗಿ ಕೆಲಸ ಮಾಡುವ ವ್ಯಕ್ತಿ ಪ್ರಧಾನಿ ಆಗಬೇಕು. 90ರ ದಶಕದಲ್ಲಿ ಕಾಂಗ್ರೆಸ್​ಗೆ ವೋಟು ಹಾಕುತ್ತಿದ್ದೆ. ನಂತರ ಇಲ್ಲಿನ ಲೋಕಲ್ ಪಾರ್ಟಿಗಳಿಗೆ ಮತ ಹಾಕಿದೆ. ಆದರೆ ಅಖಿಲೇಶ್-ಮಾಯಾವತಿಗೆ ವೈಯಕ್ತಿಕ ಹಿತಾಸಕ್ತಿಗಳೇ ಹೆಚ್ಚು. 2014ರಿಂದ ಬಿಜೆಪಿಗೇ ನನ್ನ ಮತ’ ಎಂದು ಮೇರಠ್​ನ ಕಂಕರ್​ಪುರದಲ್ಲಿ ಸಿಕ್ಕ ಪ್ರಜಾಪತಿ ಸಮುದಾಯದ ಛಂಗಾ ಹೇಳಿದರು. ಬಾಲಾಕೋಟ್ ಪ್ರತಿದಾಳಿ ವಿಷಯ ಬಂದಾಗ ಯುವಕರು ಕೂಡ ಮೋದಿ ಪರ ನಿಲುವು ತಾಳಿದ್ದು ಅನೇಕ ಕಡೆ ಕಂಡು ಬಂತು.

ಕಾಂಗ್ರೆಸ್​ನ ಮತವಿಭಜನೆ ತಂತ್ರ: ಮೇರಠ್ ಲೋಕಸಭೆಯಲ್ಲಿ ಗೆಲ್ಲಲು ಸಾಧ್ಯ ಎಂಬುದು ಕಾಂಗ್ರೆಸ್​ಗೆ ಗೊತ್ತಿದೆ. ಹೀಗಾಗಿಯೇ ಬಿಜೆಪಿ ಮತ ಒಡೆದು, ಮಹಾಮೈತ್ರಿಗೆ ನೆರವಾಗಲು ಬಿಜೆಪಿ ಅಭ್ಯರ್ಥಿ ರಾಜೇಂದ್ರ ಅಗರ್ವಾಲ್ ವಿರುದ್ಧ ಅದೇ ಸಮುದಾಯದ ಹರೇಂದ್ರ ಅಗರ್ವಾಲ್​ಗೆ ಟಿಕೆಟ್ ನೀಡಿದೆ. ಗಾಜಿಯಾಬಾದ್​ನಲ್ಲೂ ಮಾಜಿ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ವಿರುದ್ಧ ಬ್ರಾಹ್ಮಣ ಸಮುದಾಯದ ಡಾಲಿ ಶರ್ಮರನ್ನು ಕಣಕ್ಕಿಳಿಸಲಾಗಿದೆ. ಕಳೆದ ಬಾರಿ 5 ಲಕ್ಷ ಮತಗಳಿಸಿದ್ದ ವಿ.ಕೆ. ಸಿಂಗ್ ಈ ಬಾರಿ ಗೆಲುವಿಗೆ ಭಾರಿ ಶ್ರಮ ಹಾಕುತ್ತಿದ್ದಾರೆ. ಉಳಿದಂತೆ ಮುಜಫರನಗರ ಮತ್ತು ಬಾಗ್ಪತ್ ಕ್ಷೇತ್ರಗಳಲ್ಲಿ ಆರ್​ಎಲ್​ಡಿ ಅಭ್ಯರ್ಥಿಗಳಿರುವುದರಿಂದ ಕಾಂಗ್ರೆಸ್ ಇಲ್ಲಿ ಸ್ಪರ್ಧಿಸದಿರಲು ತೀರ್ವನಿಸಿದೆ. ಆದರೆ, ಸಹರಾನ್​ಪುರ ಕ್ಷೇತ್ರದಲ್ಲಿ ಮಹಾಮೈತ್ರಿಯಿಂದ ಬಿಎಸ್​ಪಿ ಅಭ್ಯರ್ಥಿ ಫಜ್ಲೂರ್ ರೆಹಮಾನ್ ಕಣದಲ್ಲಿರುವುದರಿಂದ, ಇಮ್ರಾನ್ ಮಸೂದ್ ಎಂಬ ಮತ್ತೋರ್ವ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಶೇ.42ರಷ್ಟು ಮುಸ್ಲಿಂ ಜನಸಂಖ್ಯೆಯಿರುವ ಸಹರಾನ್​ಪುರ ಹರ್ಯಾಣ, ಪಂಜಾಬ್, ಉತ್ತರಾಖಂಡ, ಹಿಮಾಚಲ ಪ್ರದೇಶಗಳೊಂದಿಗೆ ಗಡಿ ಹಂಚಿಕೊಂಡಿದೆ. ಬಿಜೆಪಿ ಹಾಲಿ ಸಂಸದ ರಾಘವ್ ಲಖನ್​ಪಾಲ್ ಶರ್ಮ ಮುಸ್ಲಿಂ ಮತ ವಿಭಜನೆಯ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.

ಸಹರಾನ್​ಪುರದ ಹರೋರಾ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಮೂಲಕ 1986ರಲ್ಲಿ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದ ಮಾಯಾವತಿಗೆ ಸಹರಾನ್​ಪುರದೊಂದಿಗೆ ಅವಿನಾಭಾವ ನಂಟಿದೆ. 1986ರಲ್ಲಿ ಸೋತರೂ 1996 ಮತ್ತು 2002ರಲ್ಲಿ ಹರೋರಾದ ಜನರು ಮಾಯಾವತಿಯನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿದ್ದರು. ಹೀಗಾಗಿ, ಈಗಲೂ ಮಾಯಾವತಿ ಶಕ್ತಿಯ ಬೇರುಗಳು ಈ ಲೋಕಸಭೆ ಕ್ಷೇತ್ರದಲ್ಲಿವೆ.

ಕೈರಾನಾ ಲೋಕಸಭೆಗೆ ಕಳೆದ ವರ್ಷ ನಡೆದ ಉಪ ಚುನಾವಣೆಯಲ್ಲಿ ಮಹಾಮೈತ್ರಿ ಅಭ್ಯರ್ಥಿ ತಬಸ್ಸುಮ್ ಹಸನ್ ಗೆದ್ದಿದ್ದರು. ಈ ಬಾರಿ ಅವರು ಮಹಾಮೈತ್ರಿಯ ಆರ್​ಎಲ್​ಡಿಯಿಂದ ಸ್ಪರ್ಧಿಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ಪ್ರದೀಪ್ ಚೌಧರಿ ಜಾಟ್ ಸಮುದಾಯದವರು. ಹೀಗಾಗಿ ಕಾಂಗ್ರೆಸ್ ಕೂಡ ಜಾಟ್ ಸಮುದಾಯದ ಹರೇಂದ್ರ ಮಲಿಕ್​ಗೆ ಟಿಕೆಟ್ ನೀಡಿದೆ. ಜಾಟ್ ಮತ ವಿಭಜನೆಯಿಂದ ಮಹಾಮೈತ್ರಿಗೆ ಲಾಭ.