ಯಾರು ಏನೇ ಪುಂಗಿ ಊದಿದರೂ ಇನ್ನು 45 ದಿನಗಳಲ್ಲಿ ಯಡಿಯೂರಪ್ಪ ಸಿಎಂ ಆಗುತ್ತಾರೆ: ಶಿವನಗೌಡ ನಾಯಕ್​

ರಾಯಚೂರು: ಯಾರು ಏನೇ ಪುಂಗಿ ಊದಲಿ. ಇನ್ನು 45 ದಿನಗಳಲ್ಲಿ ಬಿ.ಎಸ್​. ಯಡಿಯೂರಪ್ಪ ರಾಜ್ಯ ಮುಖ್ಯಮಂತ್ರಿ ಆಗುತ್ತಾರೆ. ಇದು ಶೇ.200ರಷ್ಟು ಸತ್ಯ ಎಂದು ಶಾಸಕ ಶಿವನಗೌಡ ನಾಯಕ್​ ಹೇಳಿದ್ದಾರೆ.

ರಾಯಚೂರಿನಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ರಾಯಚೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಈಗಾಗಲೆ ಸೋಲೊಪ್ಪಿಕೊಂಡಿದ್ದಾರೆ. ತಮ್ಮ ಸೋಲು ಖಚಿತ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ. ಮಂಡ್ಯದಲ್ಲಿ ಸುಮಕ್ಕಾ ಹಾಗೂ ರಾಯಚೂರಿನಲ್ಲಿ ಅಮರೇಶ್ವರ ನಾಯಕ್​ ಅವರ ಗೆಲವು ನಿಶ್ಚಿತ. ಹಾಗೇನಾದರೂ ಸೋತರೆ ನನ್ನನ್ನು ಶಿವನಗೌಡ ಎಂದು ಕರೆಯಬೇಡಿ ಎಂದು ಹೇಳಿದರು.

ಏಮ್ಸ್​ ತಂದೇ ತೀರುವೆ
ನವದೆಹಲಿಯಲ್ಲಿರುವ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್​) ಮಾದರಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ರಾಯಚೂರಿಗೆ ತಂದೇ ತೀರುವೆ. ಇಲ್ಲವಾದರೆ ನಾನು ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ ಎಂದು ಶಿವನಗೌಡ ನಾಯಕ್​ ಸವಾಲು ಹಾಕಿದರು.

ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳುವೆವು
ಬಿಜೆಪಿಯಿಂದ ತಿಪ್ಪರಾಜು ಹವಾಲ್ದಾರ್​ಗೆ ಟಿಕೆಟ್​ ತಪ್ಪಿದ್ದರಿಂದ ಅವರಲ್ಲಿ ಅಸಮಾಧಾನವಿದೆ. ನಾವು ಅಣ್ಣತಮ್ಮಂದಿರು ಆಗಿರುವುದರಿಂದ, ಕುಳಿತು ಮಾತನಾಡಿ, ಈ ಅಸಮಾಧಾನ, ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುತ್ತೇವೆ. ಮತ್ತು ಅಮರೇಶ್ವರ ನಾಯಕ್​ ಅವರ ಗೆಲುವಿಗೆ ಶ್ರಮಿಸುತ್ತೇವೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *