More

    ಕೃಷಿ ಆಧಾರಿತ ಉದ್ಯಮಕ್ಕೆ ಆದ್ಯತೆ ನೀಡಲು ಬಿಎಸ್​ವೈ ಮನವಿ

    ಬೆಂಗಳೂರು: ರೈತರ ಆತ್ಮಹತ್ಯೆ ಪ್ರವೃತ್ತಿ ತಡೆದು ಕೃಷಿ ಆರ್ಥಿಕತೆ ಬಲಪಡಿಸುವ ಉದ್ಯಮಗಳ ಸ್ಥಾಪನೆಗೆ ಆದ್ಯತೆ ನೀಡಲು ಉದ್ಯಮಿಗಳು ಹಾಗೂ ಹೂಡಿಕೆದಾರರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು. ಸ್ವಿಟ್ಜರ್ಲೆಂಡ್​ನ ದಾವೋಸ್​ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ ಸಮಾವೇಶದ ಮೊದಲ ದಿನವಾದ ಮಂಗಳವಾರ, ವಿವಿಧ ಉದ್ಯಮಿಗಳು ಹಾಗೂ ಹೂಡಿಕೆದಾರರ ಜತೆ ಚರ್ಚೆ ನಡೆಸಿದ ಅವರು, ಕೃಷಿ ಕೇಂದ್ರಿತ ಉದ್ಯಮಗಳ ಸ್ಥಾಪನೆಯಿಂದ ಹೆಚ್ಚಿನ ಉದ್ಯೋಗ ಸೃಷ್ಟಿಗೂ ಒತ್ತು ನೀಡಿದಂತಾಗುತ್ತದೆ ಎಂದು ಮನವರಿಕೆ ಮಾಡಿಕೊಟ್ಟರು. ಸ್ವಿಸ್ ಮೂಲದ 2000 ವ್ಯಾಟ್ ಕಂಪನಿ ಪ್ರತಿನಿಧಿಗಳು ಫುಡ್ ಕ್ಲಸ್ಟರ್​ಗಳ ಅಭಿವೃದ್ಧಿ ಯೋಜನೆಗಳ ಪ್ರಾತ್ಯಕ್ಷಿಕೆ ನೀಡಿದರು. ಕೃಷಿ ಉತ್ಪನ್ನಗಳಿಗೆ ಉತ್ತಮ ಬೆಲೆ ಒದಗಿಸಲು ಪೂರಕವಾದ ತಂತ್ರಜ್ಞಾನ ನಮ್ಮ ಬಳಿಯಿದ್ದು, ಫುಡ್ ಕ್ಲಸ್ಟರ್​ಗಳ ಅಭಿವೃದ್ಧಿಯಲ್ಲಿ ಹೂಡಿಕೆಗೆ ಒಲವು ವ್ಯಕ್ತಪಡಿಸಿದರು.

    ಈ ಪ್ರಸ್ತಾಪಕ್ಕೆ ವಿಶೇಷ ಆಸಕ್ತಿವಹಿಸಿದ ಸಿಎಂ, ಇಂತಹ ಯೋಜನೆಗಳಿಂದ ಕೃಷಿ ಹಾಗೂ ಗ್ರಾಮೀಣ ಆರ್ಥಿಕತೆ ಬಲವರ್ಧನೆಯಾಗುತ್ತದೆ. ರಾಜ್ಯಕ್ಕೆ ಹೊಸ ಯೋಜನೆಗಳು, ಬಂಡವಾಳ ಖಂಡಿತ ಬರಬೇಕು ಎಂದರು. ಕಂಪನಿಯ ಸಂಸ್ಥಾಪಕ ಪಾಲುದಾರ ಮಾಧವ್ ಭಾಗವತ್ ಅವರು ಇಂಗಾಲ ತಟಸ್ಥ ಸ್ಮಾರ್ಟ್ ಉಪ ನಗರಗಳ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿದ್ದು, ಈಗಾಗಲೇ ಪುಣೆ ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿರುವುದಾಗಿ ಸಿಎಂ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್​ಗೆ ಮಾಹಿತಿ ನೀಡಿದರು.

    ಕಂಪನಿಗಳ ಅಭಿಮತ: ಕಂಪನಿಗಳ ಪ್ರತಿನಿಧಿಗಳಲ್ಲಿ ರೈತರಿಂದ ಜಮೀನು ಖರೀದಿಸಲು ಸರ್ಕಾರದ ಕೆಲ ಅನಪೇಕ್ಷಿತ ನಿಯಮಗಳ ತಿದ್ದುಪಡಿ ಅಥವಾ ರದ್ದುಪಡಿಸುವ ಅಭಿಪ್ರಾಯ ವ್ಯಕ್ತಪಡಿಸಿದರು.

    ಟ್ರಂಪ್ ಭಾಷಣ ಆಲಿಸಿದ ಸಿಎಂ

    ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮ್ಮೇಳನದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಷಣ ಆಲಿಸಿದರು. ಈ ಮೂಲಕ ಅಮೆರಿಕ ಅಧ್ಯಕ್ಷರ ಭಾಷಣ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕರ್ನಾಟಕದ ಮೊದಲ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರವಾದರು.

    ಉ.ಕ.ದತ್ತ ಆಸಕ್ತಿ

    ರಾಜ್ಯದ ಬರಡು ಭೂಮಿ ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ, ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಸೌರ ವಿದ್ಯುತ್ ಸ್ಥಾಪನೆಗೆ ರಿನ್ಯೂ ಪವರ್ ಕಂಪನಿ ಆಸಕ್ತಿವಹಿಸಿ ಮುಂದೆ ಬಂದಿದೆ. ಸಿಎಂ ಜತೆಗೆ ಕಂಪನಿಯ ಸಿಇಒ ಸಮಂತ್ ಸಿನ್ಹಾ ರ್ಚಚಿಸಿ, ಬೇಡಿಕೆಗಿಂತ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ವಿದ್ಯುತ್ ಸಂಗ್ರಹಿಸುವ ಬ್ಯಾಟರಿಗಳು, ಇತರ ಉಪಕರಣಗಳನ್ನು ಅಳವಡಿಸುವ ಯೋಜನೆಯಿದೆ ಎಂದು ತಿಳಿಸಿದರು. ಅಲ್ಲದೇ ಆಡಳಿತಾತ್ಮಕ ಮತ್ತು ಕಾನೂನು ತೊಡಕು ನಿವಾರಿಸಲು ಸರ್ಕಾರ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.

    ದೀಪಿಕಾಗೆ ಕ್ರಿಸ್ಟಲ್ ಅವಾರ್ಡ್

    ದಾವೋಸ್: ಕರ್ನಾಟಕ ಮೂಲದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮಾನಸಿಕ ಆರೋಗ್ಯ ಜಾಗೃತಿ ಕುರಿತು ಅರಿವು ಮೂಡಿಸುತ್ತಿರುವುದನ್ನು ಪರಿಗಣಿಸಿ ಸ್ವಿಜರ್ಲೆಂಡ್​ನ ದಾವೋಸ್​ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯೂಇಎಫ್) ಕಾರ್ಯಕ್ರಮದಲ್ಲಿ ಕ್ರಿಸ್ಟಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕ್ರಿಸ್ಟಲ್ ಪ್ರಶಸ್ತಿ ಪಡೆದ ಭಾರತದ ಏಕಮಾತ್ರ ಚಿತ್ರ ನಟಿ ಎಂಬ ಹೆಗ್ಗಳಿಕೆಗೆ ದೀಪಿಕಾ ಪಾತ್ರರಾಗಿದ್ದಾರೆ. 2015ರಲ್ಲಿ ಸ್ವತಃ ಮಾನಸಿಕ ಖಿನ್ನತೆಯ ವಿರುದ್ಧ ಹೋರಾಡಿ ಗೆದ್ದಿದ್ದ ದೀಪಿಕಾ ಈ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿರುವವರ ನೆರವಿಗಾಗಿ ‘ಲೈವ್ ಲವ್ ಲಾಫ್ ಫೌಂಡೇಶನ್’ ಎಂಬ ಸಂಸ್ಥೆ ಪ್ರಾರಂಭಿಸಿ, ಕೆಲಸ ಮಾಡುತ್ತಿದ್ದಾರೆ. ಈ ಹಿನ್ನೆಲೆ ದೀಪಿಕಾಗೆ ಈ ಪ್ರಶಸ್ತಿ ಸಂದಾಯವಾಗಿದೆ. ವಿಶ್ವ ಆರ್ಥಿಕ ವೇದಿಕೆಯ ವಿಶ್ವ ಕಲಾ ವೇದಿಕೆ (ವರ್ಲ್ಡ್ ಆರ್ಟ್ಸ್ ಪೋರಂ) ಸಹಸಂಸ್ಥಾಪಕಿ ಮತ್ತು ಅಧ್ಯಕ್ಷೆ ಹಿಲ್ಡೆ ಶ್ವಾಬ್ ಕ್ರಿಸ್ಟಲ್ ಪ್ರಶಸ್ತಿ ಪ್ರಧಾನ ಮಾಡಿದ್ದಾರೆ.-ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts