ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಮಂಗಳವಾರ ಮುಹೂರ್ತ ಫಿಕ್ಸ್​: ಬಿಜೆಪಿಯ 15, ಒಬ್ಬ ಪಕ್ಷೇತರ ಶಾಸಕರಿಗೆ ಮಂತ್ರಿಗಿರಿ

ನವದೆಹಲಿ: ಬಿ.ಎಸ್​. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಇದಕ್ಕಾಗಿ ಮಂಗಳವಾರ ಮುಹೂರ್ತ ಫಿಕ್ಸ್​ ಆಗಿದೆ. ಮೊದಲ ಹಂತದಲ್ಲಿ ಬಿಜೆಪಿಯ 15 ಮತ್ತು ಒಬ್ಬ ಪಕ್ಷೇತರ ಶಾಸಕರಿಗೆ ಮಂತ್ರಿಗಿರಿಯ ಭಾಗ್ಯ ದೊರೆಯಲಿದೆ.

ಸಿಎಂ ಕಚೇರಿಯ ಮೂಲಗಳು ಇದನ್ನು ಖಚಿತಪಡಿಸಿವೆ. ಕೇಂದ್ರ ಗೃಹ ಸಚಿವರೂ ಆಗಿರುವ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್​ ಷಾ ಅವರನ್ನು ಬಿ.ಎಸ್​. ಯಡಿಯೂರಪ್ಪ ಶನಿವಾರ ಸಂಜೆ ಭೇಟಿಯಾಗಿದ್ದರು. ಬಿಜೆಪಿಯ ರಾಷ್ಟ್ರೀಯ ಕಾರ್ಯದರ್ಶಿ ಬಿ.ಎಲ್​. ಸಂತೋಷ್​ ಮತ್ತು ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರ ಉಪಸ್ಥಿತಿಯಲ್ಲಿ ಅಂದಾಜು ಒಂದು ಗಂಟೆಗೂ ಹೆಚ್ಚುಕಾಲ ಉಭಯ ನಾಯಕರು ಮಾತುಕತೆ ನಡೆಸಿದರು. ಬಳಿಕ ಸಂಪುಟ ವಿಸ್ತರಣೆಗೆ ಅಮಿತ್​ ಷಾ ಹಸಿರು ನಿಶಾನೆ ತೋರಿದರು ಎನ್ನಲಾಗಿದೆ.

ಬಿಜೆಪಿ ಶಾಸಕಾಂಗ ಪಕ್ಷದ ಸಭೆ
ವಿಧಾನಸಭೆಯ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ಬೆಳಗ್ಗೆ 10 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ನಂತರ ನೂತನ ಸಚಿವ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಡೆಯಲಿದೆ. ದೆಹಲಿಗೆ ತೆರಳಿದ್ದ ಸಿಎಂ ಬಿ.ಎಸ್​. ಯಡಿಯೂರಪ್ಪ ಶನಿವಾರವೇ ಬೆಂಗಳೂರಿಗೆ ಮರಳಿದ್ದು, ಸಚಿವ ಸಂಪುಟ ವಿಸ್ತರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *