ಬಿಎಸ್​ವೈ ಪ್ರಯತ್ನ ಫ್ಲಾಪ್ ಶೋ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ತೋರಿಸುತ್ತಿರುವ ಸಮ್ಮಿಶ್ರ ಸರ್ಕಾರ ಪತನ ಎಂಬ ಬಾಂಬೆ ಡಬ್ಬಾ ಶೋ ಮೇ23ರಂದು ಫ್ಲಾಪ್ ಶೋ ಆಗಲಿದೆ ಎಂದು ಸಚಿವ ಎಚ್.ಡಿ. ರೇವಣ್ಣ ಲೇವಡಿ ಮಾಡಿದ್ದಾರೆ.

ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಗರ್ಜಿ ಗಮ್ಮತ್ತು ಚಿತ್ರ ತೋರಿಸುವ ಬಿಎಸ್​ವೈ ನಾಟಕ ಯಶಸ್ವಿಯಾಗುವುದಿಲ್ಲ. ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಮಧ್ಯೆ ಏನು ನಡೆದಿದೆಯೋ ಗೊತ್ತಿಲ್ಲ. ಅದೇನೇ ಇದ್ದರೂ ದೇವೇಗೌಡರು, ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ರ್ಚಚಿಸಿ ಬಗೆಹರಿಸಿಕೊಳ್ಳಲಿದ್ದಾರೆ ಎಂದರು.

ಲೋಕಸಭಾ ಚುನಾ ವಣೆ ನಂತರ ಬಿಜೆಪಿ ಹಾಗೂ ಜೆಡಿಎಸ್ ಸರ್ಕಾರ ರಚಿಸುವ ಪ್ರಶ್ನೆಯೇ ಇಲ್ಲ. ನಾನೇ ಖುದ್ದಾಗಿ ಸಿಎಂ ಕುಮಾರಸ್ವಾಮಿ ಜತೆ ದೆಹಲಿಗೆ ಹೋಗಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಬರಗಾಲದ ಬಗ್ಗೆ, ಅಭಿವೃದ್ಧಿ ಕಾರ್ಯಗಳ ಬಗ್ಗೆ ಮನವಿ ಸಲ್ಲಿಸಿ ಬಂದಿದ್ದೇವೆ. ಯಾವುದೇ ರಾಜಕೀಯ ಚರ್ಚೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದರು.