ಉತ್ತರಪ್ರದೇಶದ ನಂತರ ಈಗ ಮತ್ತೆರಡು ರಾಜ್ಯಗಳಲ್ಲಿ ಮಹಾಮೈತ್ರಿ

ನವದೆಹಲಿ: ಲೋಕಸಭೆ ಚುನಾವಣೆಗಾಗಿ ಉತ್ತರಪ್ರದೇಶದಲ್ಲಿ ಮೈತ್ರಿ ಘೋಷಣೆ ಮಾಡಿಕೊಂಡಿರುವ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಮಧ್ಯಪ್ರದೇಶ ಮತ್ತು ಉತ್ತರಾಖಂಡದಲ್ಲೂ ಮೈತ್ರಿಯೊಂದಿಗೇ ಕಣಕ್ಕಿಳಿಯುತ್ತಿವೆ.

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಉಭಯ ಪಕ್ಷಗಳು, ಉತ್ತಪ್ರದೇಶ ಮತ್ತು ಉತ್ತರಾಖಂಡದಲ್ಲಿ ಲೋಕಸಭೆ ಚುನಾವಣೆಗಾಗಿ ಮೈತ್ರಿ ಮಾಡಿಕೊಳ್ಳುತ್ತಿರುವುದಾಗಿ ಘೋಷಣೆ ಮಾಡಿವೆ.

ಮೈತ್ರಿಯಲ್ಲಿ ಎಸ್​ಪಿ ಎರಡೂ ರಾಜ್ಯಗಳಿಂದ ಕೇವಲ 4 ಸ್ಥಾನಗಳನ್ನಷ್ಟೇ ಪಡೆದಿದ್ದು, ಇನ್ನುಳಿದ ಎಲ್ಲ ಸ್ಥಾನಗಳಲ್ಲೂ ಬಿಎಸ್​ಪಿ ಸ್ಪರ್ಧೆ ಮಾಡಲಿದೆ.

ಒಟ್ಟಾರೆ 29 ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಮಧ್ಯಪ್ರದೇಶದಲ್ಲಿ ಎಸ್​ಪಿ ಮೂರು ಕ್ಷೇತ್ರಗಳನ್ನು (ಬಲಾಘಟ್​, ತಿಕ್ರಿ, ಖುಜ್​ರಾವ್​) ಪಡೆದಿದೆ. ಇನ್ನುಳಿದ 26 ಕ್ಷೇತ್ರಗಳು ಬಿಎಸ್​ಪಿ ಪಾಲಾಗಿವೆ.
ಇನ್ನು ಐದು ಲೋಕಸಭೆ ಕ್ಷೇತ್ರಗಳಿರುವ ಉತ್ತರಾಖಂಡ್​ನಲ್ಲಿ ಅಖಿಲೇಶ್​ ಯಾದವ್​ ಅವರ ಪಕ್ಷ ಗದ್ವಾಲ್​ ಜಿಲ್ಲೆಯನ್ನು ತನಗಾಗಿ ಪಡೆದುಕೊಂಡಿದೆ. ಇನ್ನುಳಿದ ನಾಲ್ಕು ಕ್ಷೇತ್ರಗಳಲ್ಲೂ ಬಿಎಸ್​ಪಿ ಸ್ಪರ್ಧೆ ಮಾಡಿಕೊಂಡಿದೆ.

ಒಟ್ಟು 80 ಲೋಕಸಭೆ ಕ್ಷೇತ್ರಗಳನ್ನು ಹೊಂದಿರುವ ಉತ್ತರಪ್ರದೇಶದಲ್ಲಿ ಐದು ಕ್ಷೇತ್ರಗಳನ್ನು ಹೊರತುಪಡಿಸಿ ಎನ್ನೆಲ್ಲ ಕಡೆ ಎಸ್​ಪಿ ಮತ್ತು ಬಿಎಸ್​ಪಿ ಮೈತ್ರಿ ರಚಿಸಿಕೊಂಡಿವೆ. ಇದರ ಪ್ರಕಾರ ಎಸ್​ಪಿ 37 ಮತ್ತು ಬಿಎಸ್​ಪಿ 38ರಲ್ಲಿ ಸ್ಪರ್ಧೆ ಮಾಡಲಿವೆ. ಇದಾದ ನಂತರ ಎರಡೂ ಪಕ್ಷಗಳು ತಮ್ಮ ನೆರೆಯ ಎರಡೂ ರಾಜ್ಯಗಳಿಗೂ ಮೈತ್ರಿ ವಿಸ್ತರಿಸಿಕೊಂಡಿವೆ.

ಉತ್ತರ ಪ್ರದೇಶದ ಭಾಗವಾಗಿದ್ದ ಉತ್ತರಾಖಂಡವು 2007ರಲ್ಲಿ ವಿಭನೆಗೊಂಡು ಸ್ವತಂತ್ರ ರಾಜ್ಯವಾಗಿ ರಚನೆಯಾಗಿತ್ತು. ಸಹಜವಾಗಿಯೇ ಈ ರಾಜ್ಯದಲ್ಲಿ ಎಸ್​ಪಿ ಮತ್ತು ಬಿಎಸ್​ಪಿ ಪಕ್ಷಗಳು ಪ್ರಭಾವ ಹೊಂದಿವೆ. ಇನ್ನು ಮಧ್ಯಪ್ರದೇಶವು ಹಿಂದಿ ಭಾಷಿಕ ಮತ್ತು ಉತ್ತರ ಪ್ರದೇಶದ ನೆರೆ ರಾಜ್ಯವಾಗಿದ್ದು, ಗಡಿ ಜಿಲ್ಲೆಗಳಲ್ಲಿ ಬಿಎಸ್​ಪಿಯ ಪ್ರಭಾವವಿದೆ. ಇದೇ ಕಾರಣಕ್ಕೆ ಎರಡೂ ಪಕ್ಷಗಳೂ ಮೈತ್ರಿಯ ಮೂಲಕ ಎರಡೂ ರಾಜ್ಯಗಳಲ್ಲಿ ಚುನಾವಣಾ ಕಣಕ್ಕಿಳಿದಿವೆ.