ಸಾಂಸ್ಕೃತಿಕ ನಗರಿಯಿಂದ ಪ್ರಧಾನಿ ಮೋದಿ ಹೋದರು ಮಾಯಾವತಿ ಬಂದರು

ಮೈಸೂರು: ಸಾಂಸ್ಕೃತಿಕ ನಗರಿಯಲ್ಲಿ ಲೋಕಸಭಾ ಚುನಾವಣೆಯ ರಂಗು ಕಳೆಗಟ್ಟಿದೆ. ಕೆಲ ಸಮಯದ ಹಿಂದೆ ಮೈಸೂರಿನ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಚಾರದ ರಣಕಹಳೆ ಊದಿ ನಿರ್ಗಮಿಸಿದ್ದರು. ಇದಾದ ಸ್ವಲ್ಪ ಸಮಯದ ಬಳಿಕ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಮೈಸೂರಿಗೆ ಆಗಮಿಸಿದ್ದಾರೆ.

ಮಂಗಳವಾರ ಸಂಜೆ ಮೈಸೂರಿಗೆ ಆಗಮಿಸಿದ ಮಾಯಾವತಿ ಅವರನ್ನು ಶಾಸಕ ಎನ್.ಮಹೇಶ್ ಹಾಗೂ ಪಕ್ಷದ ಅಭ್ಯರ್ಥಿಗಳು ಆತ್ಮೀಯವಾಗಿ ಬರಮಾಡಿಕೊಂಡರು. ಸದ್ಯ ಮಾಯಾವತಿ ಅವರು ಖಾಸಗಿ ಹೋಟೆಲ್​ನಲ್ಲಿ ವಾಸ್ತವ್ಯ ಹೂಡಿದ್ದು, ನಾಳಿನ ಕಾರ್ಯಕ್ರಮದ ಬಗ್ಗೆ ಪಕ್ಷದ ನಾಯಕರ ಜತೆ ಚರ್ಚೆ ನಡೆಸುತ್ತಿದ್ದಾರೆ.

ನಾಳಿನ ಸಮಾವೇಶದಲ್ಲಿ ಮೈಸೂರು ಕೊಡಗು, ಚಾಮರಾಜನಗರ, ಹಾಸನ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳ ಬಿಎಸ್​ಪಿ ಅಭ್ಯರ್ಥಿಗಳ ಪರ ಮಾಯಾವತಿ ಅವರು ಮಾತನಾಡಲಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬಿಎಸ್​ಪಿ ಸಮಾವೇಶ ನಡೆಯಲಿದ್ದು, ನಾಳೆ ಮತ್ತೊಂದು ಸಮಾವೇಶಕ್ಕೆ ವೇದಿಕೆ ಸಜ್ಜಾಗಿದೆ. ಮೋದಿ ಬಳಿಕ ಅದೇ ವೇದಿಕೆಯಲ್ಲಿ ಬಿಎಸ್​ಪಿ ಅಧಿನಾಯಕಿ ಮಾಯಾವತಿ ಅವರು ಚುನಾವಣಾ ಪ್ರಚಾರದ ಕಹಳೆ ಮೊಳಗಿಸಲಿದ್ದಾರೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *