ಬಿಎಸ್ಪಿ ಅಭ್ಯರ್ಥಿ 1.37 ಕೋಟಿ ರೂ. ಆಸ್ತಿ ಒಡೆಯ

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಬಿಎಸ್ಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಡಾ.ಶಿವಕುಮಾರ್ ಅವರು 1.37 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ.

ನಾಮಪತ್ರ ಸಲ್ಲಿಸಿದ ವೇಳೆ ಆಸ್ತಿ ಕುರಿತು ಸಲ್ಲಿಸಿದ ಅಫಿಡವಿಟ್‌ನಲ್ಲಿ ಒಟ್ಟು 49 ಲಕ್ಷ ರೂ. ಮೌಲ್ಯದ ಚರಾಸ್ತಿ ಮತ್ತು 88.75 ಲಕ್ಷ ರೂ. ಸ್ಥಿರಾಸ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದಾರೆ.

ಅವಿವಾಹಿತರಾದ ಇವರು ಕೈಯಲ್ಲಿ 2 ಲಕ್ಷ ರೂ. ನಗದು ಹೊಂದಿದ್ದಾರೆ. 1.16 ಕೋಟಿ ರೂ. ಸಾಲ ಮಾಡಿರುವುದಾಗಿ ಹೇಳಿಕೊಂಡಿದ್ದಾರೆ. ಗೃಹ ಸಾಲ 90 ಲಕ್ಷ ರೂ., ವಾಹನ ಸಾಲ 26.ಲಕ್ಷ ರೂ. ಪಡೆದಿರುವುದಾಗಿ ತಿಳಿಸಿದ್ದಾರೆ. 15 ಲಕ್ಷ ರೂ ಮೌಲ್ಯದ ಮಹಿಂದ್ರಾ ಎಕ್ಸ್‌ಯುವಿ ಕಾರು, 11 ಲಕ್ಷ ರೂ ಮೌಲ್ಯದ ಇನೋವಾ ಸೇರಿದಂತೆ 2 ಕಾರು ಹೊಂದಿದ್ದಾರೆ.

ನವದೆಹಲಿಯ ಆಕ್ಸಿಸ್ ಬ್ಯಾಂಕ್ ಶಾಖೆಯಲ್ಲಿ 30 ಸಾವಿರ ರೂ., ಬ್ಯಾಂಕೇತರ ಹಣಕಾಸು ಸಂಸ್ಥೆಯಲ್ಲಿ 12 ಸಾವಿರ ರೂ. , ಮೈಸೂರಿನ ಇಂಡಿಯನ್ ಬ್ಯಾಂಕ್‌ನಲ್ಲಿ 2 ಸಾವಿರ ರೂ., ವಿಮಾ ಕಂಪನಿಯಲ್ಲಿ 8 ಲಕ್ಷ ರೂ., ಅಂಚೆ ಉಳಿತಾಯ ಖಾತೆಯಲ್ಲಿ 2 ಲಕ್ಷ ರೂ., 1.50 ಲಕ್ಷ ರೂ. ಮೌಲ್ಯದ 50 ಗ್ರಾಂ ಚಿನ್ನಾಭರಣ ಹೊಂದಿರುವುದಾಗಿ ತಿಳಿಸಿದ್ದಾರೆ.

ಹುಲಿಕೆರೆ, ಗುನ್ನೂರುಗಳಲ್ಲಿ 2 ಎಕರೆ ಸ್ವಯಾರ್ಜಿತ ಜಮೀನು, ಚಾಮರಾಜನಗರದಲ್ಲಿ 2 ಸಾವಿರ ಚದರಡಿ ಅಳತೆ ನಿವೇಶನ, ಮೈಸೂರಿನ ಟಿ.ಕೆ.ಲೇಔಟ್‌ನಲ್ಲಿ 2400 ಚದರಡಿ ಅಳತೆಯ ಮನೆ ಹೊಂದಿರುವುದಾಗಿ ಹೇಳಿದ್ದಾರೆ.