ಬಿಎಸ್ಪಿ ಅಭ್ಯರ್ಥಿ ಉಮೇದುವಾರಿಕೆ ಸಲ್ಲಿಕೆ

ಚಾಮರಾಜನಗರ: ಚಾಮರಾಜನಗರ ಲೋಕಸಭಾ ಮೀಸಲು ಕ್ಷೇತ್ರಕ್ಕೆ ಬಿಎಸ್ಪಿ ಅಭ್ಯರ್ಥಿಯಾಗಿ ಡಾ.ಶಿವಕುಮಾರ್ ಅವರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು.

ಮಂಗಳವಾರ ಬೆಳಗ್ಗೆ ಶಾಸಕ ಎನ್.ಮಹೇಶ್, ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅರಕಲವಾಡಿ ನಾಗೇಂದ್ರ, ಮಾದೇಶ್ ಉಪ್ಪಾರ್, ಸಮೀವುಲ್ಲಾ ಅವರ ಜತೆ ನಗರದ ಜಿಲ್ಲಾಡಳಿತ ಭವನಕ್ಕೆ ತೆರಳಿದರು. ಜಿಲ್ಲಾ ಚುನಾವಣಾಧಿಕಾರಿ ಬಿ.ಬಿ.ಕಾವೇರಿ ಅವರಿಗೆ ನಾಮಪತ್ರ ಸಲ್ಲಿಸುವ ಮೂಲಕ ಪ್ರಬಲ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳ ವಿರುದ್ಧ ರಣ ಕಹಳೆ ಮೊಳಗಿಸಿದರು.

ಇದಕ್ಕೂ ಮೊದಲು ಬೆಳಗ್ಗೆ ಅಭ್ಯರ್ಥಿ ಡಾ.ಶಿವಕುಮಾರ್ ಅವರು ಶಾಸಕ ಎನ್.ಮಹೇಶ್ ಅವರ ಜತೆ ನಗರದ ಕರಿನಂಜನಪುರ ರಸ್ತೆಯಲ್ಲಿರುವ ಸಾರಾನಾಥ ಬೌದ್ಧ ವಿಹಾರದಲ್ಲಿ ಬೌದ್ಧ ವಂದನೆ ಸಲ್ಲಿಸಿದರು. ನಂತರ ರಾಮಸಮುದ್ರ ಬಡಾವಣೆಯ ಬಳಿ ಇರುವ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಲ್ಲಿಂದ ಚಾಮರಾಜೇಶ್ವರ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಗೆಲುವಿಗಾಗಿ ಪ್ರಾರ್ಥಿಸಿದರು.

ನಂತರ ದೇವಾಲಯದ ಮುಂಭಾಗ ತೆರೆದ ವಾಹನವೇರಿ ಕಾರ್ಯಕರ್ತರ ಬೃಹತ್ ಮೆರವಣಿಗೆಯಲ್ಲಿ ಸಾಗಿದರು. ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ಸಾಗಿದ ಮೆರವಣಿಗೆಯು ಜಿಲ್ಲಾಡಳಿತ ಭವನದ ಮುಖ್ಯದ್ವಾರದಲ್ಲಿ ಅಂತ್ಯಗೊಂಡಿತು. ಅಭ್ಯರ್ಥಿಯು ಶಾಸಕರು, ಪಕ್ಷದ ಮುಖಂಡರ ಜತೆ ಕಾಲ್ನಡಿಗೆಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು.

ಮೆರವಣಿಗೆಯಲ್ಲಿ ನೀಲಿ ಬಾವುಟಗಳು ಹಾರಾಡಿದವು. ಬಿಎಸ್ಪಿ, ಪಕ್ಷದ ವರಿಷ್ಠೆ ಮಾಯಾವತಿ ಅವರ ಪರ ಘೋಷಣೆಗಳು ಮೊಳಗಿದವು. ಬಿರು ಬಿಸಿಲಿನಲ್ಲಿಯೇ ಸಹಸ್ರಾರು ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿ ಬಂದರು.

ಪಕ್ಷದ ಜಿಲ್ಲಾಧ್ಯಕ್ಷ ಮಾದಪ್ಪ, ಜಿಲ್ಲಾ ಉಪಾಧ್ಯಕ್ಷ ಸೋಮಣ್ಣ ಉಪ್ಪಾರ್, ಚಾ.ನಗರ ತಾಲೂಕು ಅಧ್ಯಕ್ಷ ಆಲೂರು ಮಲ್ಲು, ನಗರ ಅಧ್ಯಕ್ಷ ಚಿನ್ನಸ್ವಾಮಿ, ನಗರಸಭಾ ಸದಸ್ಯ ಪ್ರಕಾಶ್, ಮುಖಂಡರಾದ ಬ.ಮ,ಕೃಷ್ಣಮೂರ್ತಿ, ಮಹೇಶ್‌ನಾಯಕ, ಎಂ.ಮಹದೇವನಾಯಕ, ಸುಶೀಲ, ಬ್ಯಾಡಮೂಡ್ಲ ಬಸವಣ್ಣ, ಜಗದೀಶ್, ಜಯಂತ್ ಇತರರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಜನರ ಪ್ರೀತಿ ನಮ್ಮ ಮೇಲಿದೆ
ಕ್ಷೇತ್ರಾದ್ಯಂತ ಜನರು ನನ್ನ ಮೇಲೆ ಹೆಚ್ಚು ಪ್ರೀತಿ ತೋರುತ್ತಿದ್ದಾರೆ. ಈ ಚುನಾವಣೆಯಲ್ಲಿ ಗೆಲುವು ನಮ್ಮದೇ ಎಂದು ಬಿಎಸ್‌ಪಿ ಅಭ್ಯರ್ಥಿ ಡಾ. ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.

ನಾಮಪತ್ರ ಸಲ್ಲಿಸಿ ಹೊರಬಂದು ಸುದ್ದಿಗಾರರ ಜತೆ ಮಾತನಾಡಿ, ಚಾಮರಾಜನಗರ ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷದ ಶಾಸಕರಿದ್ದಾರೆ. ಉಳಿದ 7 ವಿಧಾನಸಭಾ ಕೇತ್ರಗಳಲ್ಲಿ ಬಿಎಸ್ಪಿ ಕಾರ್ಯಕರ್ತರ ಪಡೆಯಿದ್ದು ನನ್ನ ಪರ ದುಡಿಯುತ್ತಾರೆ ಎಂದರು.
ಶಾಸಕ ಎನ್.ಮಹೇಶ್ ಮಾತನಾಡಿ, 27 ರಂದು ನಾಮಪತ್ರ ಪರಿಶೀಲನೆಯಿದ್ದು 28 ರಂದು ಪಕ್ಷದ ಬಹಿರಂಗ ಪ್ರಚಾರ ಆರಂಭವಾಗಲಿದೆ. ಪಕ್ಷದ ಅಭ್ಯರ್ಥಿ ಶಿವಕುಮಾರ್ ಬಹುಜನ ವಿದ್ಯಾರ್ಥಿ ಸಂಘದ ಚಳವಳಿಯ ಸಂಪನ್ಮೂಲ ವ್ಯಕ್ತಿಯಾಗಿದ್ದರು ಎಂದರು.

ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್ 20 ವರ್ಷ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಆರ್.ಧ್ರುವನಾರಾಯಣ 10 ವರ್ಷಗಳು ಸಂಸದರಾಗಿ ಕೆಲಸ ಮಾಡಿದ್ದಾರೆ. ಆದ್ದರಿಂದ ಯುವಕರಾಗಿರುವ ಶಿವಕುಮಾರ್ ಅವರಿಗೆ ಆಶೀರ್ವದಿಸಬೇಕು ಎಂದರು.


ಚಾಮರಾಜನಗರ ಪವಿತ್ರ ಜಿಲ್ಲೆಯಾಗಿದ್ದು ಮಲೈ ಮಹದೇಶ್ವರ, ಬಿಳಿಗಿರಿರಂಗಸ್ವಾಮಿ, ಸಿದ್ದಪ್ಪಾಜಿ ನೆಲೆಸಿದ್ದಾರೆ. ಕಷ್ಟಗಳನ್ನು ನಿವಾರಿಸು ಎಂದು ಕೋರಿ ಹೊರ ಜಿಲ್ಲೆಗಳ ಜನರು ಇಲ್ಲಿಗೆ ಬರುತ್ತಾತೆ. ಇಂತಹ ಪ್ರದೇಶವನ್ನು ಹಿಂದುಳಿದ ಜಿಲ್ಲೆ ಎಂದು ಹೇಳುವುದು ಸರಿಯಲ್ಲ ಎಂದರು.

ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟ್ಟಿಯನ್ನು ತೆಗೆದು ಹಾಕಲು ಶಿವಕುಮಾರ್ ಅವರಿಗೆ ಪಕ್ಷಭೇದ ಮರೆತು ಎಲ್ಲರೂ ಮತ ಹಾಕಬೇಕು. ದೇಶದಲ್ಲಿ 70 ವರ್ಷಗಳ ಆಡಳಿತ ನಡೆಸಿದ ಕಾಂಗ್ರೆಸ್ ಬಡತನ ನಿರ್ಮೂಲನೆ ಮಾಡುವಲ್ಲಿ ವಿಫಲವಾಗಿದೆ. ಕೇಂದ್ರದಲ್ಲಿ ಬಿಜೆಪಿ ಸುಳ್ಳು ಭರವಸೆ ನೀಡಿ ಕಾಲ ಕಳೆದಿದೆ. ಇವೆರಡು ಪಕ್ಷದಿಂದ ದೇಶದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ದೇಶದಲ್ಲಿ 3ನೇ ಪರ್ಯಾಯ ಶಕ್ತಿಯಾಗಿ ಮಾಯಾವತಿ ಹೊರ ಹೊಮ್ಮಲಿದ್ದಾರೆ. ರಾಜ್ಯದ 28 ಕ್ಷೇತ್ರಗಳ ಪೈಕಿ ಚಾಮರಾಜನಗರ, ಚಿಕ್ಕೋಡಿ, ಚಿಕ್ಕಬಳ್ಳಾಪುರ ಕ್ಷೇತ್ರಗಳಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು