ಲೋಕಸಭೆ ಚುನಾವಣೆ: ಆಂಧ್ರಪ್ರದೇಶ, ತೆಲಂಗಾಣದಲ್ಲಿ ಮಾಯಾವತಿ, ಪವನ್‌ ಕಲ್ಯಾಣ್‌ ಮೈತ್ರಿ

ಲಖನೌ: ದೇಶಾದ್ಯಂತ ಲೋಕಸಭಾ ಚುನಾವಣೆಯ ಕಾವು ಏರುತ್ತಿದ್ದು, ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷ(BSP)ವು ಪವನ್‌ ಕಲ್ಯಾಣ್‌ ನೇತೃತ್ವದ ಜನ ಸೇನಾ ಪಕ್ಷದೊಂದಿಗೆ ಮೈತ್ರಿ ಘೋಷಣೆ ಮಾಡಿದೆ. ಲೋಕಸಭಾ ಮತ್ತು ರಾಜ್ಯ ವಿಧಾನಸಭೆ ಚುನಾವಣೆಗೆ ಆಂಧ್ರಪ್ರದೇಶದಲ್ಲಿ ಮತ್ತು ಲೋಕಸಭೆಗೆ ಮಾತ್ರ ತೆಲಂಗಾಣದಲ್ಲಿ ಮೈತ್ರಿ ಮಾಡಿಕೊಳ್ಳಲಿದೆ ಎಂದು ತಿಳಿಸಿದೆ.

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಆಂಧ್ರಪ್ರದೇಶದಲ್ಲಿ ನಡೆಯಲಿದ್ದು, ಆಂಧ್ರದ ಜನರು ಬದಲಾವಣೆಯನ್ನು ಬಯಸಿದ್ದಾರೆ. ಅಧಿಕಾರಕ್ಕೆ ಹೊಸ ಮುಖಗಳು ಬರಲೆಂದು ಬಯಸುತ್ತಿದ್ದಾರೆ. ಬಿಎಸ್‌ಪಿ, ಜನಸೇನಾ ಮತ್ತು ಇತರೆ ಕೆಲ ಕಮ್ಯುನಿಸ್ಟ್‌ ಪಕ್ಷಗಳು ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಸ್ಪರ್ಧೆ ಮಾಡಲಿವೆ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ತಿಳಿಸಿದ್ದಾರೆ.

ಸೀಟು ಹಂಚಿಕೆಯು ಅಂತಿಮವಾಗಿದೆ ಮತ್ತು ಸೀಟು ಹಂಚಿಕೆಯಲ್ಲಿ ಯಾವುದೇ ಭಿನ್ನಮತವಿಲ್ಲ. ಪವನ್‌ ಕಲ್ಯಾಣ್‌ ಅವರು ಆಂಧ್ರ ಪ್ರದೇಶದ ಮುಖ್ಯಮಂತ್ರಿಯಾಗಬೇಕೆಂದು ಬಯಸುತ್ತೇನೆ. ಸಾರ್ವತ್ರಿಕ ಚುನಾವಣೆಯಾಗಲಿ ಅಥವಾ ವಿಧಾನಸಭೆ ಚುನಾವಣೆಯಾಗಲಿ ಸೀಟು ಹಂಚಿಕೆ ಕುರಿತಂತೆ ಯಾವುದೇ ವಿವಾದವಿಲ್ಲ ಎಂದು ಹೇಳಿದರು.

ಏ. 3 ಮತ್ತು 4ರಂದು ಆಂಧ್ರಪ್ರದೇಶ ಮತ್ತು ತೆಲಂಗಾಣಕ್ಕೆ ಭೀಟಿ ನೀಡಲಿರುವ ಮಾಯಾವತಿ ಅವರು ಚುನಾವಣಾ ರ‍್ಯಾಲಿಗಳಲ್ಲಿ ಭಾಷಣ ಮಾಡಲಿದ್ದಾರೆ.

ಪವನ್‌ ಕಲ್ಯಾಣ್‌ ಮಾತನಾಡಿ, ಮಾಯಾವತಿ ಅವರು ಪ್ರಧಾನಿಯಾಗಬೇಕು. ಇದು ನಮ್ಮೆಲ್ಲರ ಇಚ್ಛೆ ಮತ್ತು ಉತ್ಕಟವಾದ ಬಯಕೆ ಎಂದು ಹೇಳಿದರು.

ಆಂಧ್ರಪ್ರದೇಶದಲ್ಲಿ ಏ. 11ರಂದು ಏಕಕಾಲದಲ್ಲಿಯೇ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ನಡೆಯಲಿದೆ. (ಏಜೆನ್ಸೀಸ್)

Leave a Reply

Your email address will not be published. Required fields are marked *