ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ರೆಹಾನಾಳನ್ನು ವರ್ಗಾವಣೆ ಮಾಡಿದ ಬಿಎಸ್​ಎನ್​ಎಲ್​

ಕೊಚ್ಚಿ: ಕಿಸ್​ ಆಫ್​ ಲವ್​ನ ಆಯೋಜಕಿ, ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ಶಬರಿಮಲೆ ಪ್ರವೇಶಿಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಕೇರಳ ಮುಸ್ಲಿಂ ಜಮಾತ್ ಪರಿಷತ್ ಮುಸ್ಲಿಂ ಸಮುದಾಯದಿಂದ ಉಚ್ಚಾಟನೆ ಮಾಡಿದ ಬೆನ್ನಲ್ಲೇ, ಅವಳು ಕೆಲಸ ಮಾಡುತ್ತಿರುವ ಬಿಎಸ್​ಎನ್​ಎಲ್​ ಕೊಚ್ಚಿ ಶಾಖೆ ಆಕೆಯನ್ನು ಪಳರಿವತ್ತಮ್ ಟೆಲಿಫೋನ್​ ಎಕ್ಸ್​ಚೇಂಜ್​ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಫಾತಿಮಾ ಕೊಚ್ಚಿ ಶಾಖೆಯಲ್ಲಿ ಗ್ರಾಹಕ ಸಂಪರ್ಕ ವಿಭಾಗದ ಟೆಲಿಕಾಂ ತಂತ್ರಜ್ಞಳಾಗಿ ಕೆಲಸ ಮಾಡುತ್ತಿದ್ದಳು. ಈಗ ಆಕೆಯನ್ನು ಸಾರ್ವಜನಿಕ ಸಂಪರ್ಕ ಅಗತ್ಯವೇ ಇಲ್ಲದ ಪಳರಿವತ್ತಮ್ ದೂರವಾಣಿ ವಿನಿಮಯ ಕೇಂದ್ರಕ್ಕೆ ವರ್ಗಾಯಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರೆಹಾನಾ ವರ್ಗಾವಣೆ ವಿಚಾರ ತಿಳಿಯುತ್ತಿದ್ದಂತೆ ಶಬರಿಮಲೆ ಕರ್ಮ ಸಮಿತಿ ಪಳರಿವತ್ತಮ್​ ಬಿಎಸ್​ಎನ್​ಎಲ್​ ಕೇಂದ್ರದ ಬಳಿ ಪ್ರತಿಭಟನೆ ನಡೆಸಿ, ಆಕೆಯನ್ನು ಅಲ್ಲಿಂದ ಉಚ್ಚಾಟನೆ ಮಾಡಬೇಕು ಎಂದು ಆಗ್ರಹಿಸಿದೆ.

ಶಬರಿಮಲೆ ದೇಗುವ ಪ್ರವೇಶಿಸಲು ಪ್ರಯತ್ನಿಸಿ ವಿಫಲವಾಗಿದ್ದ ರೆಹಾನಾ ಫಾತಿಮಾ ಮನೆಯನ್ನು ದುಷ್ಕರ್ಮಿಗಳು ಈಗಾಗಲೇ ಧ್ವಂಸಗೊಳಿಸಿದ್ದರು. ಅಲ್ಲದೆ ಆಕೆ ಲಕ್ಷಾಂತರ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ ಮೇಲೆ ಎರಡು ದಿನಗಳ ಹಿಂದೆ ಕೇರಳ ಮುಸ್ಲಿಂ ಜಮಾತ್ ಪರಿಷತ್ ಮುಸ್ಲಿಂ ಸಮುದಾಯದಿಂದ ಉಚ್ಚಾಟನೆ ಮಾಡಿತ್ತು.