ಬೆಳಗಾವಿ: ಭರತೇಶ್ ಎಜುಕೇಶನ್ ಟ್ರಸ್ಟ್ ನೇತೃತ್ವದ ಪ್ರಮುಖ ಇಂಜಿನಿಯರಿಂಗ್ ಕಾಲೇಜು ಭರತೇಶ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಬೆಳಗಾವಿ ಸ್ಟಾರ್ಟ್‌ಅಪ್ಸ್ ಅಸೋಸಿಯೇಷನ್ (ಬಿಎಸ್‌ಎ)ನೊಂದಿಗೆ ಕಾರ್ಯತಂತ್ರದ ಪಾಲುದಾರಿಕೆ ಸಹಭಾಗಿತ್ವಕ್ಕೆ ಸಹಿ ಹಾಕಿದ್ದು, ಬಿಐಟಿಯು ವಿದ್ಯಾರ್ಥಿಗಳಿಗೆ ನಾವೀನ್ಯ, ಉದ್ಯಮಶೀಲತೆ ಉತ್ತೇಜಿಸುವ ಗುರಿ ಹೊಂದಿದೆ ಎಂದು ಭರತೇಶ್ ಎಜುಕೇಶನ್ ಟ್ರಸ್ಟ್ ಕಾರ್ಯದರ್ಶಿ ವಿನೋದ ದೊಡ್ಡಣ್ಣನವರ ತಿಳಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಶೈಕ್ಷಣಿಕ ವರ್ಷಕ್ಕೆ ಸೇರ್ಪಡೆಗೊಳ್ಳುವ ಮೊದಲ ಬ್ಯಾಚ್‌ಗೂ ಮುನ್ನವೇ ಇಂತಹ ಸಹಭಾಗಿತ್ವಕ್ಕೆ ಒಳಪಟ್ಟ ಕರ್ನಾಟಕದ ಮೊದಲ ಇಂಜಿನಿಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆಗೆ ಬಿಐಟಿ ಪಾತ್ರವಾಗಿದೆ. ಈ ಸಹಭಾಗಿತ್ವದ ಮೂಲಕ ಬಿಐಟಿಯು ಇನ್ನೋವೇಶನ್, ಇನ್‌ಕ್ಯುಬೇಶನ್ ಮತ್ತು ಉದ್ಯಮಶೀಲತಾ ಕೇಂದ್ರಗಳು ಸೇರಿ ಹಲವು ಭರವಸೆಯ ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡಲಿದೆ ಎಂದರು.
ತುರ್ತು ಇಂಡಿಯಾ ಎಲ್ಎಲ್ಪಿ, ಕೃಷಿಮಿತ್ರ ಪ್ಲಗ್-ಇನ್‌ಎಲ್ಎಲ್ಪಿ, ಜಬ್ಸಾ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್, ಬಾಲಲೋಕ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್, ಲೋಕಲ್ ವ್ಯೆಟೆಕ್ ಪ್ರೈವೇಟ್ ಲಿಮಿಟೆಡ್, ಶಾಸ್ತಾ ಗ್ಲೋಬಲ್ ಫೌಂಡೇಷನ್, ಯುಲಾಟೆಕ್ ಎಲ್ಎಲ್ಪಿ, ಮಾಧ್ಯಮ ಗೆಳೆಯ, ಎಸ್‌ಎಂಕೆ ಪರಿಹಾರಗಳು ಮತ್ತು ಡಿಜಿಟೋಮ್ಯಾಟಿಕ್ ಸರ್ವೀಸಸ್ ಪ್ರೈ. ಕಂಪನಿಯೊಂದಿಗೆ ಸಹಭಾಗಿತ್ವ ಹೊಂದಲಾಗಿದೆ ಎಂದರು.
ಬಿಐಟಿ ತನ್ನ ಕ್ಯಾಂಪಸ್‌ನಲ್ಲಿ ಬಿಎಸ್‌ಎ ಕಂಪನಿಗಳಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳೊಂದಿಗೆ 2000 ಚದರ ಅಡಿ ಜಾಗ ಒದಗಿಸಿದೆ. ಈ ಸಹಯೋಗವು ಇಂಟರ್ನ್‌ಶಿಪ್‌ಗಳು, ಅತಿಥಿ ಉಪನ್ಯಾಸಗಳು ಮತ್ತು ಉದ್ಯಮದ ಅನುಭವದಂತಹ ಹಲವಾರು ಅವಕಾಶಗಳ ಮೂಲಕ ಬಿಐಟಿ ವಿದ್ಯಾರ್ಥಿಗಳಿಗೆ ಪ್ರಯೋಜನವಾಗಲಿದೆ ಎಂದರು.
ಬಿಎಸ್‌ಎ ನೊಂದಿಗೆ ಒಡಂಬಡಿಕೆಗೆ ಸಹಿ ಹಾಕಲಾಯಿತು. ಟ್ರಸ್ಟ್‌ನ ಉಪಾಧ್ಯಕ್ಷ ಶ್ರೀಪಾಲ ಖೇಮಲಾಪುರೆ, ಕಾರ್ಯದರ್ಶಿ ಪ್ರಕಾಶ ಉಪಾಧ್ಯಾಯ, ಖಜಾಂಚಿ ಭೂಷಣ ಮಿರ್ಜಿ, ವ್ಯವಸ್ಥಾಪಕ ಸಮಿತಿ ಸದಸ್ಯ ಅಶೋಕ ದಾನವಾಡೆ, ಬಿಐಟಿ ಆಡಳಿತ ಮಂಡಳಿ ಅಧ್ಯಕ್ಷ ಶಶಾಂಕ ಲೆಂಗ್ಡೆ, ಸದಸ್ಯ ಡಾ. ಅನಿಲ ಶಿರಹಟ್ಟಿ, ಬಿಐಟಿಯ ಪ್ರಾಚಾರ್ಯ ಡಾ. ವೀಣಾ ಕರ್ಚಿ, ಬಿಐಟಿ ಆಡಳಿತಾಧಿಕಾರಿ ಡಾ. ಗೋಮಟೇಶ ರಾವಣ್ಣವರ, ಎಲ್ಲ 10 ಕಂಪನಿಗಳ ಪ್ರತಿನಿಧಿಗಳು ಇದ್ದರು.