ಸುಮಲತಾ ಪರ ನಾನು ಮತ್ತು ಪಕ್ಷದ ನಾಯಕರು ಪ್ರಚಾರ ಮಾಡುತ್ತೇವೆ: ಬಿಎಸ್​ವೈ

ಬೆಂಗಳೂರು: ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಸುಮಲತಾ ಅಂಬರೀಷ್​ ಅವರ ಪರ ನಾನು ಪ್ರಚಾರಕ್ಕೆ ಹೋಗುತ್ತೇನೆ. ನಾನು ಮತ್ತು ನಮ್ಮ ಪಕ್ಷದ ನಾಯಕರೆಲ್ಲರೂ ಅವರ ಪರ ಕೆಲಸ ಮಾಡಿ ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ತಿಳಿಸಿದ್ದಾರೆ.

ಮೈತ್ರಿ ಸರ್ಕಾರ ಓಲಾ ಕಂಪನಿಯ ಲೈಸನ್ಸ್​ ರದ್ದುಗೊಳಿಸಿ ಎರಡೇ ದಿನಗಳಲ್ಲಿ ಲೈಸನ್ಸ್​ ರದ್ದು ಮಾಡಿದ್ದ ಆದೇಶವನ್ನು ವಾಪಸ್​ ತಗೊಂಡಿದ್ದಾರೆ. ಚುನಾವಣೆ ಸಮಯದಲ್ಲಿ ಹತ್ತಾರು ಕೋಟಿ ರೂ. ಲೂಟಿ ಮಾಡಲು ಸರ್ಕಾರ ಈ ವಿಧದಲ್ಲಿ ಸಂಚು ರೂಪಿಸಿದೆ ಎಂದು ಸಾಮಾನ್ಯ ಜನರೂ ಮಾತನಾಡಿಕೊಳ್ಳುತ್ತಿದ್ದಾರೆ. ಸುಮಲತಾ ಅಂಬರೀಷ್​ ಅವರ ಗೆಲುವು ಖಚಿತವಾಗುತ್ತಿದ್ದಂತೆ ಅದನ್ನು ಸಹಿಸದೆ ಜೆಡಿಎಸ್​ ಕಾರ್ಯಕರ್ತರು ದರ್ಶನ್​ ಮನೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಬಿಎಸ್​ವೈ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದರು.

ಬೆಂಗಳೂರು ದಕ್ಷಿಣದಿಂದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ಪರ್ಧಿಸಿದರೆ ಅದು ಅತ್ಯಂತ ಸಂತೋಷದ ವಿಷಯ. ಅವರ ಸ್ಪರ್ಧೆ ಖಚಿತವಾಗುವುದುನ್ನು ನಾನೂ ಕೂಡಾ ಕಾಯುತ್ತಿದ್ದೇನೆ ಎಂದು ಬಿಎಸ್​ವೈ ತಿಳಿಸಿದರು.

ಕಾಂಗ್ರೆಸ್​ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಬಿ.ಎಸ್​. ಯಡಿಯೂರಪ್ಪ ವಿರುದ್ಧ ನಕಲಿ ಡೈರಿ ಬಿಡುಗಡೆ ಮಾಡಿ, ಮಿಥ್ಯಾರೋಪ ಮಾಡಿದ ಕಾಂಗ್ರೆಸ್​ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದೇವೆ. ಜತೆಗೆ ಪೊಲೀಸ್​ ಆಯುಕ್ತರನ್ನು ಭೇಟಿ ಮಾಡಿ ಕಾಂಗ್ರೆಸ್​ನ ರಾಷ್ಟ್ರೀಯ ವಕ್ತಾರರ ವಿರುದ್ಧ ದೂರು ದಾಖಲಿಸಲಾಗುವುದು ಎಂದು ಬಿಜೆಪಿ ನಾಯಕ ಅರವಿಂದ್​ ಲಿಂಬಾವಳಿ ತಿಳಿಸಿದರು.