Friday, 16th November 2018  

Vijayavani

ಕೋರ್​​ ಕಮಿಟಿ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಫೈಟ್- ಶೋಭಾಗೆ ಸ್ಥಾನ ನೀಡಲು ಹೆಗಡೆ ಜತೆ ಬಿಎಸ್​ವೈ ಪೈಪೋಟಿ        ಮೈಸೂರು ಪಾಲಿಕೆ ಮೇಯರ್​, ಉಪ ಮೇಯರ್​ ಸ್ಥಾನಕ್ಕಿಂದು ಚುನಾವಣೆ: ಮೇಯರ್​ ಗಾದಿಗಾಗಿ ದೋಸ್ತಿಗಳ ಫೈಟ್​        ಅಯ್ಯಪ್ಪನ ದರ್ಶನಕ್ಕಾಗಿ ಕೇರಳದ ಕೊಚ್ಚಿಗೆ ಬಂದಿಳಿದ ಹೋರಾಟಗಾರ್ತಿ ತೃಪ್ತಿ ದೇಸಾಯಿಗೆ ಪ್ರತಿಭಟನೆ ಬಿಸಿ        ಗಜ ಚಂಡಮಾರುತ ಅಬ್ಬರ: ತಮಿಳುನಾಡಿನ ಕರಾವಳಿವಳಿಯಲ್ಲಿ ಜನ ತತ್ತರ, ರಾಜ್ಯದ ದಕ್ಷಿಣ ಒಳನಾಡಿನಲ್ಲೂ ಮಳೆ ಸಾಧ್ಯತೆ        ಕಬ್ಬಿಗೆ ಸಮರ್ಪಕ ಬೆಲೆ ನೀಡುವಂತೆ ಆಗ್ರಹಿಸಿ ಮುಧೋಳದಲ್ಲಿ ರೈತರ ಬೃಹತ್​ ಹೋರಾಟ       
Breaking News

ಅಧಿಕಾರ ಖಚಿತ ಕೈ ಸರ್ಕಾರದ ಅಕ್ರಮ ಮರುತನಿಖೆ ನಿಶ್ಚಿತ

Tuesday, 16.01.2018, 3:05 AM       No Comments

| ವಿಜಯ್ ಜೊನ್ನಹಳ್ಳಿ

ಬೆಂಗಳೂರು: ‘ಸಿದ್ದರಾಮಯ್ಯ ಸರ್ಕಾರ ತನ್ನ ಅವಧಿಯಲ್ಲಿನ ಹಗರಣಗಳಿಗೆ ಕ್ಲೀನ್​ಚಿಟ್ ಪಡೆದುಕೊಂಡಿದೆ. ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ಈ ಎಲ್ಲ ಪ್ರಕರಣಗಳ ಮರುತನಿಖೆ ನಡೆಯಲಿದೆ. ಈ ಸರ್ಕಾರದ ವಿರುದ್ಧ ರೋಸಿ ಹೋಗಿರುವ ಸಾರ್ವಜನಿಕರು ಚುನಾವಣೆಗೆ ಕಾಯುತ್ತಿದ್ದಾರೆ. ಪರಿವರ್ತನಾ ಯಾತ್ರೆ ಮೂಲಕ ನಾನು ಸಂರ್ಪಸಿದ ಲಕ್ಷಾಂತರ ಮತದಾರರಿಂದ ಈ ವಿಚಾರ ತಿಳಿದುಬಂದಿದೆ’

ಇದು ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಸ್ಪಷ್ಟ ನುಡಿ. ರಾಜ್ಯದಲ್ಲಿ ಚುನಾವಣಾ ಅಖಾಡ ಕಾವೇರುತ್ತಿರುವ ಸಂದರ್ಭದಲ್ಲಿ ದಿಗ್ವಿಜಯ ನ್ಯೂಸ್ 24×7ಗೆ ವಿಶೇಷ ಸಂದರ್ಶನ ನೀಡಿರುವ ಅವರು ಪಕ್ಷದ ಕಾರ್ಯಯೋಜನೆ ಹಂಚಿಕೊಳ್ಳುವ ಜತೆಗೆ ರಾಜ್ಯ ಸರ್ಕಾರದ ವಿರುದ್ಧ ಹರಿಹಾಯ್ದರು.

ಉತ್ಸಾಹ ಹೆಚ್ಚಳ: ಕಾಂಗ್ರೆಸ್​ಗೆ ಮುಂದಿನ ಚುನಾವಣೆಯಲ್ಲಿ 60 ಸೀಟ್ ಕೂಡ ಸಿಗುವುದಿಲ್ಲ. ನಾವು ಅಧಿಕಾರಕ್ಕೆ ಬರುವುದರಲ್ಲಿ ಯಾವುದೇ ಸಂಶಯವಿಲ್ಲ. ಕಳೆದ 2 ತಿಂಗಳಿಂದ ನಡೆಯುತ್ತಿರುವ ಪರಿವರ್ತನಾ ಯಾತ್ರೆಯು ನನ್ನ ಆರೋಗ್ಯವನ್ನು ಸುಧಾರಿಸಿದೆ. ಜನರ ಮಧ್ಯ ಇರುವುದರಿಂದ ನನ್ನಲ್ಲಿ 28 ವರ್ಷದ ಉತ್ಸಾಹ ಮೂಡುತ್ತಿದೆ. ಜನರ ಜತೆಯಿದ್ದಾಗ ಆಯಾಸವೇ ಆಗುವುದಿಲ್ಲ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಆದರೆ ಕಾನೂನು ಸುವ್ಯವಸ್ಥೆ ಹದಗೆಡಲು ಬಿಜೆಪಿ ಕಾರಣ ಎಂಬ ಆರೋಪ ಮಾಡಲಾಗುತ್ತಿದೆ. ಅಧಿಕಾರ ನಡೆಸುವವರಿಗೆ ಏನೂ ಮಾಡಲಾಗದಿದ್ದರೆ ಹೀಗೆ ಆರೋಪ ಹೊರಿಸುವುದು ಸಾಮಾನ್ಯ ಎಂದು ಬಿಎಸ್​ವೈ ತಿರುಗೇಟು ನೀಡಿದ್ದಾರೆ.

ಟಿಕೆಟ್ ಹಂಚಿಕೆ ಷಾ ಮಾತು ಅಂತಿಮ

‘ನಾನು ಯಾರಿಗೂ ಟಿಕೆಟ್ ಕೊಡಿ, ಕೊಡಬೇಡಿ ಎಂದು ಶಿಫಾರಸು ಮಾಡುವುದಿಲ್ಲ. ಪಕ್ಷಾಧ್ಯಕ್ಷ ಅಮಿತ್ ಷಾ ಅವರ ದೆಹಲಿ ತಂಡ ರಾಜ್ಯದಲ್ಲಿ ಬೀಡುಬಿಟ್ಟಿದೆ. ಪ್ರತಿದಿನ ಕ್ಷೇತ್ರದ ಬಗ್ಗೆ ಮಾಹಿತಿ ಕಲೆಹಾಕುತ್ತಿದೆ. ಟೆಕೆಟ್ ವಿಚಾರದಲ್ಲಿ ಯಾರೂ ನನ್ನ ಬಗ್ಗೆ ಬೇಸರಿಸಿಕೊಳ್ಳಬಾರದು’ ಎಂದು ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.

ಧರ್ಮ ವಿವಾದ ಸರ್ಕಾರಕ್ಕೆ ತಿರುಗುಬಾಣ

ಲಿಂಗಾಯತ ಧರ್ಮ ರಚನೆಗೆ ಸಂಬಂಧಿಸಿ ನೀರಾವರಿ ಸಚಿವರನ್ನೇ ಸರ್ಕಾರ ಮುಂದೆಬಿಟ್ಟಿದೆ. ಈ ವಿಚಾರ ಚುನಾವಣೆ ವೇಳೆಗೆ ಸಿದ್ದರಾಮಯ್ಯಗೆ ತಿರುಗುಬಾಣ ಆಗುತ್ತದೆ, ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎನ್ನುವ ಮೂಲಕ ಬಿಎಸ್​ವೈ ಕುತೂಹಲ ಮೂಡಿಸಿದ್ದಾರೆ.


ಇದೆ ಭಾರಿ ಜನಬೆಂಬಲ, ಜಯ ನಮ್ಮದೇ

# ಕಳೆದ 2 ತಿಂಗಳಿಂದ ನಿರಂತರವಾಗಿ ಪ್ರವಾಸ ಮಾಡುತ್ತಿದ್ದೀರಿ, ಇಂಥ ಸತತ ಪ್ರವಾಸದಿಂದ ಆಯಾಸವಾಗುವುದಿಲ್ಲವೇ?

ಇಲ್ಲ. ಜನರ ಮಧ್ಯೆ ಇದ್ದರೆ ನನಗೆ 28ರ ತಾರುಣ್ಯ ಬರುತ್ತದೆ. ಪ್ರವಾಸದಿಂದ ಹೆಚ್ಚು ಉತ್ಸಾಹ ಬರುತ್ತದೆ. ಪ್ರವಾಸಮಾಡುವ ವೇಳೆ ಜನರು ಸೇರುವುದನ್ನು ನೋಡಿ ನನಗೆ ಆಯಾಸವೇ ಆಗುವುದಿಲ್ಲ.

# ನವ ಕರ್ನಾಟಕ ಪರಿವರ್ತನಾ ಯಾತ್ರೆಗೆ ಜನರ ಪ್ರತಿಕ್ರಿಯೆ ಹೇಗಿದೆ?

ಈಗಾಗಲೇ 180ಕ್ಕೂ ಅಧಿಕ ತಾಲ್ಲೂಕುಗಳಲ್ಲಿ ಪ್ರವಾಸ ಮುಗಿಸಿದ್ದೇನೆ. ಹಿಂದೆ, ಕುಮಾರಸ್ವಾಮಿ ನನಗೆ ಅಧಿಕಾರ ಕೊಡದೆ ಕೈಕೊಟ್ಟಾಗ ಜನರ ಬಳಿಗೆ ಹೋದಾಗ ಯಾವ ರೀತಿ ಬೆಂಬಲ ಸಿಕ್ಕಿತ್ತೋ, ಅದಕ್ಕಿಂತ ಹೆಚ್ಚಾಗಿ ಈಗ ಜನ ಸೇರುತ್ತಿದ್ದಾರೆ. ಯಾತ್ರೆ ಪೂರ್ಣಗೊಂಡಾಗ 2 ಕೋಟಿ ಜನರನ್ನು ಉದ್ದೇಶಿಸಿ ಮಾತನಾಡಿದಂತಾಗುತ್ತದೆ.

# ಪ್ರತಿಪಕ್ಷವಾಗಿ ನೀವು ನವ ಕರ್ನಾಟಕ ಪರಿವರ್ತನಾ ಯಾತ್ರೆ ಮಾಡುತ್ತಿದ್ದೀರಿ, ಈ ವೇಳೆ ಏನನ್ನು ಕಂಡುಕೊಂಡಿರಿ?

ತಡರಾತ್ರಿಯಾದರೂ ನನ್ನನ್ನು ನೋಡಲು ಜನ ಸಾವಿರಾರು ಸಂಖ್ಯೆಯಲ್ಲಿ ಸೇರಿರುತ್ತಾರೆ. ಇದರಿಂದ ಸರ್ಕಾರದ ಬಗ್ಗೆ ಜನ ಎಷ್ಟು ಬೇಸತ್ತಿದ್ದಾರೆ ಎಂದು ಗೊತ್ತಾಗುತ್ತದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯಾದ್ಯಂತ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅಭಿವೃದ್ಧಿ ಕಾರ್ಯಕ್ರಮಗಳು ಸ್ಥಗಿತವಾಗಿರುವುದು, ಭ್ರಷ್ಟಾಚಾರ ತಾಂಡವವಾಡುತ್ತಿರುವುದು ಸಾರ್ವಜನಿಕರಿಂದ ಗಮನಕ್ಕೆ ಬಂದಿದೆ. ಒಟ್ಟಾರೆಯಾಗಿ ಸರ್ಕಾರ ಬದುಕಿದೆಯೇ ಎನ್ನುವ ಅನುಮಾನವಿದೆ.

# ಕರಾವಳಿ ಜಿಲ್ಲೆಗಳಲ್ಲಿ ನಡೆದ ಕೊಲೆಗಳು ಹಾಗೂ ಕಾನೂನು ಸುವ್ಯವಸ್ಥೆ ಹದಗೆಡುವುದಕ್ಕೆ ಬಿಜೆಪಿ ಕಾರಣ ಎಂದು ಕಾಂಗ್ರೆಸ್ ದೂರುತ್ತಿದೆಯಲ್ಲ…

24ಕ್ಕೂ ಹೆಚ್ಚು ಹಿಂದು ಯುವಕರು ಕೊಲೆಯಾಗಿದ್ದಾರೆ. ಅದೇ ರೀತಿ ಮುಸ್ಲಿಂ ಯುವಕರ ಹತ್ಯೆಯೂ ಆಗಿದೆ. ನಾನು ಹಿಂದು-ಮುಸ್ಲಿಂ ಎಂದು ಭೇದಭಾವ ಮಾಡುತ್ತಿಲ್ಲ. ಆಡಳಿತದ ಮೇಲೆ ಹಿಡಿತವಿಲ್ಲ. ಮತ್ತೊಂದೆಡೆ ಪೊಲೀಸರ ವೈಫಲ್ಯ. ಈ ಹಿನ್ನಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿದೆ. ಅದನ್ನು ಸರಿಪಡಿಸುವುದು ಆಡಳಿತ ನಡೆಸುವವರ ಜವಾಬ್ದಾರಿ. ಬಿಜೆಪಿ ಮೇಲೆ ಯಾಕೆ ಆರೋಪ ಮಾಡುತ್ತಾರೋ ಗೊತ್ತಾಗುತ್ತಿಲ್ಲ.

# ಪಿಎಫ್​ಐ, ಎಸ್​ಡಿಪಿಐ ನಿಷೇಧಿಸಿ ಎಂದು ಬಿಜೆಪಿ ಹೇಳಿದರೆ, ಬಜರಂಗದಳ, ಆರ್​ಎಸ್​ಎಸ್ ನಿಷೇಧ ಮಾಡಲಿ ಎಂದು ಕಾಂಗ್ರೆಸ್ ಹೇಳುತ್ತಿದೆ…

ಪಿಎಫ್​ಐ, ಎಸ್​ಡಿಪಿಐ ಮೇಲಿದ್ದ ಪ್ರಕರಣಗಳನ್ನು ಸರ್ಕಾರ ಹಿಂಪಡೆದು ಹೊಂದಾಣಿಕೆ ಮಾಡಿಕೊಂಡು ರಕ್ಷಣೆ ಮಾಡುತ್ತಿದೆ. ಇಂದಿರಾ ಗಾಂಧಿ ಕಾಲದಿಂದಲೂ ಆರ್​ಎಸ್​ಎಸ್​ನ್ನು ಮುಟ್ಟಲೂ ಆಗುತ್ತಿಲ್ಲ.

# ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುತ್ತೀರಿ, ಆದರೆ ಯಾವುದೂ ಸಾಬೀತಾಗಿಲ್ಲವಲ್ಲ. ಜನ ಹೇಗೆ ನಿಮ್ಮ ಮಾತನ್ನು ನಂಬಬೇಕು?

ಸಿದ್ದರಾಮಯ್ಯ ಹಾಗೂ ಸಚಿವರ ವಿರುದ್ಧದ ಹಗರಣಗಳ ಬಗ್ಗೆ ದಾಖಲಾದ ಪ್ರಕರಣಗಳಿಗೆ ಎಸಿಬಿ, ಸಿಐಡಿ ಕ್ಲೀನ್ ಚಿಟ್ ನೀಡಿದ್ದು ಸುಳ್ಳಾ? ಇಂತಹ ಕ್ಲೀನ್​ಚಿಟ್ ಪಡೆದ ಪ್ರಕರಣಗಳನ್ನು ನಮ್ಮ ಸರ್ಕಾರ ಬಂದ ಮೇಲೆ ಮರುತನಿಖೆ ಮಾಡಿಸಿ ಶಿಕ್ಷೆ ಕೊಡಿಸುತ್ತೇವೆ. ಇದಲ್ಲದೆ ಸಿಎಂ ಹಾಗೂ ಸಚಿವರ ವಿರುದ್ಧ ಹಗರಣಗಳ ಬಗ್ಗೆ ಚಾರ್ಜ್​ಶೀಟ್ ಮುದ್ರಿಸಿ ಮನೆ ಮನೆಗೆ ಹಂಚಲಾಗುವುದು.

# ಲಿಂಗಾಯತ ಪ್ರತ್ಯೇಕ ಧರ್ಮ ಮಾಡೇ ಮಾಡುತ್ತೇವೆ ಎಂದು ಸಚಿವರು ಹೇಳುತ್ತಿದ್ದಾರೆ. ನಿಮ್ಮ ಅಭಿಪ್ರಾಯ?

ಜಾತಿ ವಿಷಬೀಜ ಬಿತ್ತುವ ಕೆಲಸವನ್ನು ಈ ಹಿಂದೆ ಯಾರೂ ಮಾಡಿರಲಿಲ್ಲ. ಆ ಕೆಲಸವನ್ನು ಈಗಿನ ಸರ್ಕಾರ ಮಾಡುತ್ತಿದೆ. ನೀರಾವರಿ ಕೆಲಸಗಳನ್ನು ಮಾಡಬೇಕಾದ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಪ್ರತ್ಯೇಕ ಧರ್ಮದ ಬಗ್ಗೆ ಹೋರಾಟ ಮಾಡುತ್ತಿದ್ದಾರೆ. ಚುನಾವಣೆ ವೇಳೆಗೆ ಸಿದ್ದರಾಮಯ್ಯಗೆ ಈ ವಿಚಾರ ತಿರುಗುಬಾಣ ವಾಗುತ್ತದೆ. ಕಾದು ನೋಡಿ.

# ಪರಿವರ್ತನಾ ಯಾತ್ರೆ ಯಲ್ಲಿ ನೀವು ಅಭ್ಯರ್ಥಿಗಳ ಹೆಸರನ್ನು ಘೊಷಣೆ ಮಾಡುವ ಬಗ್ಗೆ ಪಕ್ಷದೊಳಗೆ ಅಸಮಾಧಾನವಿದೆ ಎನ್ನಲಾಗುತ್ತಿದೆ…

ಪೈಪೋಟಿ ಹಾಗೂ ಗೊಂದಲವಿಲ್ಲದ ಕ್ಷೇತ್ರದಲ್ಲಿ ಮಾತ್ರ ಅಭ್ಯರ್ಥಿಗಳ ಹೆಸರು ಘೊಷಣೆ ಮಾಡುತ್ತಿದ್ದೇವೆ. ಒಂದು ವೇಳೆ ಹೈಕಮಾಂಡ್ ಬೇಡ ಎಂದರೆ ಮುಂದೆ ಬೇರೆ ತೀರ್ಮಾನ ಮಾಡುತ್ತೇವೆ.

# ಹಾಗಿದ್ದರೆ ಹೈಕಮಾಂಡ್ ಅನುಮತಿಯಿಲ್ಲದೆ ನೀವು ಅಭ್ಯರ್ಥಿಗಳನ್ನು ಘೊಷಣೆ ಮಾಡುತ್ತಿದ್ದೀರಾ?

ಅಭ್ಯರ್ಥಿಗಳ ಆಯ್ಕೆ ಬಗ್ಗೆ ಇನ್ನೊಂದು ಸುತ್ತಿನ ಸಮೀಕ್ಷೆ ಆಗಬೇಕಿದೆ. ಪಕ್ಷಾಧ್ಯಕ್ಷ ಅಮಿತ್ ಷಾ ಅಭ್ಯರ್ಥಿಗಳ ಆಯ್ಕೆಯನ್ನು ಮಾಡಲಿದ್ದಾರೆ. ಇದರಲ್ಲಿ ಯಡಿಯೂರಪ್ಪ, ಅಮಿತ್ ಷಾ ಅಥವಾ ಮೋದಿ ಮುಖ್ಯವಲ್ಲ. ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಮುಖ್ಯ.

# ಈಶ್ವರಪ್ಪಗೆ ಟಿಕೆಟ್ ನೀಡುವ ವಿಚಾರದಲ್ಲಿ ಬಿಎಸ್​ವೈಗೆ ಸಮಾಧಾನವಿಲ್ಲ ಎನ್ನಲಾಗುತ್ತಿದೆ. ಹಾಗೆಯೇ ಸಂಸದರಿಗೆ ಟಿಕೆಟ್ ನೀಡುವ ಬಗ್ಗೆ ಏನಂತೀರಿ?

ನಾನು ಯಾರಿಗೂ ಟಿಕೆಟ್ ಕೊಡಿ ಅಥವಾ ಕೊಡಬೇಡಿ ಎಂದು ಶಿಫಾರಸು ಮಾಡುವುದಿಲ್ಲ. ಅಮಿತ್ ಷಾ ಅವರ ದೆಹಲಿ ತಂಡ ರಾಜ್ಯದಲ್ಲಿ ಬೀಡುಬಿಟ್ಟಿದೆ. ಪ್ರತಿದಿನ ಕ್ಷೇತ್ರದ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಎಂಎಲ್​ಸಿಗಳು ಹಾಗೂ ಎಂಪಿಗಳಿಗೆ ಟಿಕೆಟ್ ನೀಡುವುದು, ಬಿಡುವುದು ಷಾಗೆ ಸೇರಿದ್ದು. ನಾನು ಅವರ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ. ಟೆಕೆಟ್ ವಿಚಾರದಲ್ಲಿ ಯಾರೂ ನನ್ನ ಬಗ್ಗೆ ಬೇಸರಿಸಿಕೊಳ್ಳಬಾರದು.

# ಬಿಜೆಪಿಯಲ್ಲಿ ಯಾವುದೇ ಅಸಮಾಧಾನವಿಲ್ಲ ಅಂತಾ ಹೇಳುತ್ತೀರಾ?

ಸಣ್ಣಪುಟ್ಟ ಅಸಮಾಧಾನಗಳನ್ನು ಸರಿಪಡಿಸುತ್ತಿದ್ದೇವೆ. ರಾಜ್ಯ ಮಟ್ಟದ ನಾಯಕರಲ್ಲಿ ಯಾವುದೇ ಅಸಮಾಧಾನವಿಲ್ಲ. ಎಲ್ಲರೂ ಒಗ್ಗಟ್ಟಾಗಿ ಹೋಗಿ ಕೆಲಸ ಮಾಡುವಂತೆ ಅಮಿತ್ ಷಾ ಸೂಚನೆ ನೀಡಿದ್ದು, ಅದೇ ರೀತಿ ಕೆಲಸ ಮಾಡುತ್ತಿದ್ದೇವೆ. ನನಗೆ ರಾಜ್ಯದ ಎಲ್ಲ ನಾಯಕರೂ ಸಾಥ್ ನೀಡುತ್ತಿದ್ದಾರೆ.

# ಯಡಿಯೂರಪ್ಪ ಅವರಪ್ಪನಾಣೆಗೂ ಅಧಿಕಾರಕ್ಕೆ ಬರುವುದಿಲ್ಲ. ಜೈಲಿಗೆ ಹೋಗಿ ಬಂದವರು ಎಂದೆಲ್ಲ ಸಿದ್ದರಾಮಯ್ಯನವರು ನಿಮ್ಮನ್ನು ಸಾರ್ವಜನಿಕವಾಗಿ ಅಣಕಿಸುತ್ತಾರಲ್ಲ?

ಕಾಂಗ್ರೆಸ್ ನಡೆಸಿದ ಸಮೀಕ್ಷೆಯಲ್ಲಿಯೇ ಅದಕ್ಕೆ 60 ಸ್ಥಾನ ಸಿಕ್ಕಿದೆ, ಅದು ಸಿದ್ದರಾಮಯ್ಯಗೂ ಗೊತ್ತಿದೆ. ನರೇಂದ್ರ ಮೋದಿ ಹಾಗು ಅಮಿತ್ ಷಾ ಜೋಡಿ ರಾಜ್ಯದಲ್ಲಿ ಸಂಚರಿಸಿದರೆ ಕಾಂಗ್ರೆಸ್ ವಿಳಾಸ ಇಲ್ಲದಂತಾಗುತ್ತದೆ. ಸಿದ್ದರಾಮಯ್ಯ ಮಾತುಗಳನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರು ರಾಜ್ಯದ ಕೊನೆಯ ಕಾಂಗ್ರೆಸ್ ಮುಖ್ಯಮಂತ್ರಿ ಯಾಗಲಿದ್ದಾರೆ. ಇದರಲ್ಲಿ ಅನುಮಾನ ಬೇಡ.

# ಬಿಜೆಪಿ ಮತ್ತು ಜೆಡಿಎಸ್​ನವರು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ ಅವರನ್ನು ನಂಬಬೇಡಿ ಎಂದು ಸಿಎಂ ಹೇಳುತ್ತಿದ್ದಾರೆ?

ಸಿಎಂರದ್ದು ಬೇಜವಾಬ್ದಾರಿ ಹೇಳಿಕೆ. ಆಗಲೆ ಹೇಳಿದಂತೆ ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಕಾಂಗ್ರೆಸ್ ಮತ್ತು ಜೆಡಿಎಸ್ ಒಳಒಪ್ಪಂದ ಮಾಡಿಕೊಂಡರೂ ಆಶ್ಚರ್ಯಪಡಬೇಕಾಗಿಲ್ಲ.

 # ಬಿಜೆಪಿಯಲ್ಲಿ ಕೊನೇ ಕ್ಷಣದಲ್ಲಿ ಸಿಎಂ ಅಭ್ಯರ್ಥಿಯನ್ನು ಬದಲಾವಣೆ ಮಾಡಬಹುದು ಎಂದು ರಾಜಕೀಯ ವಲಯದಲ್ಲಿ ಗುಸುಗುಸು ಕೇಳಿಬರುತ್ತಿದೆ. ಏನಂತೀರಿ?

ಮೋದಿ ಮತ್ತು ಷಾ ಅವರೇ ನಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೊಷಿಸಿದ್ದಾರೆ. ಬೇರೆ ರಾಜ್ಯದಲ್ಲಿ ಪಕ್ಷದಿಂದ ಸಿಎಂ ಅಭ್ಯರ್ಥಿ ಹೆಸರನ್ನು ಘೊಷಿಸಿಲ್ಲ. ಆದರೆ ನನ್ನ ಹೆಸರನ್ನು ಪ್ರಕಟಿಸಿ, ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ನೀಡಿದ್ದಾರೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಪ್ರತಿಪಕ್ಷಗಳು ಗೊಂದಲಸೃಷ್ಟಿಗೆ ಯತ್ನಿಸುತ್ತಿರಬಹುದು.

# ರಾಜ್ಯದಲ್ಲಿ ದೇವೇಗೌಡರ ಜತೆ ಉತ್ತಮ ಸಂಬಂಧ ಇರಲಿ ಎಂದು ಮೋದಿಯವರು ಬಿಜೆಪಿ ನಾಯಕರಿಗೆ ಸೂಚನೆ ಕೊಟ್ಟಿದ್ದಾರಂತೆ, ನಿಜಾನಾ?

ಇದರಲ್ಲಿ ಎಳ್ಳಷ್ಟೂ ಸತ್ಯಾಂಶವಿಲ್ಲ. 150 ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ ಎಂದಮೇಲೆ ಜೆಡಿಎಸ್ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಜನರು ನಾನು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಕೆಲಸಗಳನ್ನು ಮರೆತಿಲ್ಲ, ಬೆಂಬಲ ನೀಡುತ್ತಾರೆ.

# ಮುಂದಿನ ಚುನಾವಣೆಯಲ್ಲಿ ನಿಮಗೆ ಪ್ರತಿಸ್ಪರ್ಧಿ ಕಾಂಗ್ರೆಸ್ಸೋ ಅಥವಾ ಜೆಡಿಎಸ್ಸೋ?

ಈ ಬಾರಿ ತ್ರಿಕೋನ ಸ್ಪರ್ಧೆಯಿರಲಿದೆ. ಜೆಡಿಎಸ್​ನ್ನು ನಾವು ಹಗುರವಾಗಿ ಪರಿಗಣಿಸಿಲ್ಲ. ಅವರು 224 ಕ್ಷೇತ್ರದಲ್ಲೂ ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ ಎಂದು ಹೇಳಿದ್ದಾರೆ. ನೋಡೋಣ.

# ಮಹದಾಯಿ ವಿಚಾರದಲ್ಲಿ ನಿಮಗೆ ಮುಖಭಂಗವಾಯಿತೇ?

ಸಿದ್ದರಾಮಯ್ಯ ಅವರು ಪ್ರತಿಭಟನೆ ಮಾಡಿಸಿದ್ರು. ಪ್ರತಿಭಟನೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್ ಮುಖಂಡರು ಏಕೆ ಬಂದರು? ಈ ಎಲ್ಲ ಗೊಂದಲಗಳ ಹಿಂದೆ ಸಿದ್ದರಾಮಯ್ಯರ ಕುತಂತ್ರವಿದೆ. ಜನ ಇದನ್ನು ಅರ್ಥಮಾಡಿಕೊಳ್ಳುತ್ತಾರೆ.

 ನಾಯಕರ ಬಗ್ಗೆ ಬಿಎಸ್​ವೈ ಮಾತು

# ವಾಜಪೇಯಿ: ಮೇಧಾವಿ, ಸರಳ, ಪ್ರಾಮಾಣಿಕ ವ್ಯಕ್ತಿ. ಇಂತಹ ಮತ್ತೊಬ್ಬ ನಾಯಕ ದೇಶಕ್ಕೆ ಸಿಕ್ಕುವುದು ಕಷ್ಟ.

# ನರೇಂದ್ರ ಮೋದಿ: ಇಡೀ ಜಗತ್ತೇ ಹಾಡಿಹೊಗಳುತ್ತಿರುವ ಧೀಮಂತ ವ್ಯಕ್ತಿ. ಅವರು ಪ್ರಧಾನಿಯಾಗಿರುವುದು ನಮ್ಮೆಲ್ಲರ ಪೂರ್ವಜನ್ಮದ ಪುಣ್ಯವೇ ಸರಿ.

# ಅಮಿತ್ ಷಾ: ಚಾಣಕ್ಯ

# ಎಲ್.ಕೆ.ಆಡ್ವಾಣಿ: ದೇಶಕಂಡ ಅಪರೂಪದ ನಾಯಕ.

# ಅನಂತ್​ಕುಮಾರ್: ಪುಣ್ಯವಂತ . ಅವರಿಗೆ ಒಂದಲ್ಲ ಒಂದು ಉನ್ನತ ಸ್ಥಾನದೊರಕುತ್ತಿದೆ. ಯಶಸ್ವಿಯಾಗಿ ಮುಂದುವರಿಯುತ್ತಿದ್ದಾರೆ.

# ಎಚ್.ಡಿ. ದೇವೇಗೌಡ: ಧೀಮಂತ ಹೋರಾಟಗಾರ. ಅವರ ಬಗ್ಗೆ ಗೌರವವಿದೆ. ಈ ವಯಸ್ಸಿನಲ್ಲೂ ರಾಜ್ಯದ ಹಿತಕ್ಕಾಗಿ ಹೋರಾಟ ಮಾಡುತ್ತಿದ್ದಾರೆ.

# ಎಚ್.ಡಿ.ಕುಮಾರಸ್ವಾಮಿ: ಏನೂ ಹೇಳಲು ಇಷ್ಟಪಡುವುದಿಲ್ಲ.

Leave a Reply

Your email address will not be published. Required fields are marked *

Back To Top