ಅಪ್ಪ ಮಕ್ಕಳು ಸೇರಿ ಕಾಂಗ್ರೆಸ್‌ ಹೆಸರಿಲ್ಲದಂತೆ ಮಾಡ್ತಾರೆ ಎಂಬ ತಮ್ಮ ಹೇಳಿಕೆ ವೈರಲ್‌ ಕುರಿತು ಬಿಎಸ್‌ವೈ ಏನಂತಾರೆ?

ಬೆಂಗಳೂರು: ರಾಜ್ಯದ ಲೋಕಸಭಾ ಚುನಾವಣೆಯಲ್ಲಿ ಕೇವಲ ಒಂದೇ ಒಂದು ಸ್ಥಾನವನ್ನು ಪಡೆದು ಹೀನಾಯ ಸೋಲನನ್ನುಭವಿಸಿದ ಕಾಂಗ್ರೆಸ್ ಕುರಿತು ಈ ಹಿಂದೆ ವಿಧಾನಸಭಾ ಕಲಾಪದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ ಭವಿಷ್ಯದ ವಿಡಿಯೋ ವೈರಲ್ ಆಗಿತ್ತು. ವೈರಲ್‌ ಆದ ವಿಡಿಯೋ ಕುರಿತು ಬಿ.ಎಸ್‌. ಯಡಿಯೂರಪ್ಪ ಇದೀಗ ಪ್ರತಿಕ್ರಿಯಿಸಿದ್ದಾರೆ.

ನಾನು ಸದನದಲ್ಲಿ ಹೇಳಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 40 ವರ್ಷದ ರಾಜಕಾರಣದ ಅನುಭವದ ಮೇಲೆ ನಾನು ಆ ಮಾತನ್ನು ಹೇಳಿದ್ದೆ. ಸರ್ಕಾರದ ಅಳಿವು ಉಳಿವಿನ ಬಗ್ಗೆ ನಾನು ಈಗ ಏನನ್ನು ಹೇಳುವುದಿಲ್ಲ. ರಾಷ್ಟ್ರೀಯ ನಾಯಕರ ಜತೆ ಸಂಪರ್ಕಿಸಿ ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ಮೇ 29ರಂದು ದೆಹಲಿಗೆ ತೆರಳುತ್ತೇನೆ. ರಾಜ್ಯದ ಸಂಸದರೆಲ್ಲ ಅಂದು ದೆಹಲಿಗೆ ತೆರಳುತ್ತಾರೆ. ಎರಡ್ಮೂರು ದಿನ ಕಾಂಗ್ರೆಸ್, JDS ನಿರ್ಧಾರ ನೋಡ್ತೇವೆ. ಅವರ ನಿರ್ಧಾರದ ಮೇಲೆ ರಾಜಕಾರಣ ನಿಂತಿದೆ. ಈಗ ನಾನು ಏನೂ ಹೇಳುವುದಿಲ್ಲ. ಜನರ ತೀರ್ಮಾನದಂತೆ ನಡೆದುಕೊಳ್ತಾರೆಂಬ ನಂಬಿಕೆಯಿದೆ. ನಾವಾಗಿಯೇ ಸುಮಲತಾ ಅಂಬರೀಷ್​ರನ್ನು ಕರೆಯಲ್ಲ. ಅವರಾಗಿಯೇ ಬಿಜೆಪಿಗೆ ಬಂದರೆ ಸ್ವಾಗತಿಸುತ್ತೇವೆ

ಘಟನೆ ಏನು?

ಕಲಾಪದ ವೇಳೆ ಮಾತನಾಡಿದ್ದ ಬಿಎಸ್‍ವೈ, ಶಿವಕುಮಾರ್ ಅವರೇ ನೀವು ನಾಳೆ ಪಶ್ಚತ್ತಾಪ ಪಡುವವರಿದ್ದೀರಿ. ಎಲ್ಲರನ್ನು ರಕ್ಷಣೆ ಮಾಡಿ ಈ ನಾಡಿನ ಜನರ ನಂಬಿಕೆ ವಿಶ್ವಾಸಕ್ಕೆ ದ್ರೋಹ ಮಾಡಿದಂತಹ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಕೂರಿಸಲು ನೀವು ರಕ್ಷಣೆ ಕೊಟ್ಟಿದ್ದೀರಿ. ಇದರ ನೇತೃತ್ವವನ್ನು ವಹಿಸಿದಂತಹ ಖಳನಾಯಕ ನೀವೇ ಆಗಿದ್ದರಿಂದ ನಾನು ಹೇಳುತ್ತಿದ್ದೇನೆ. ರೀ ಸ್ವಾಮಿ ನಿಮ್ಮ ಬಗ್ಗೆ ಗೌರವವಿದೆ. ಇಂದು ನಾನು ಯಾವುದೇ ಮಾತನ್ನು ಹೇಳುವುದಿಲ್ಲ. ಕಾಲವೇ ಎಲ್ಲ ಹೇಳುತ್ತದೆ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಡಿಕೆಶಿ, ಪಾಪ ನನಗೂ, ಯಡಿಯೂರಪ್ಪ ಅವರಿಗೂ ಸಂಬಂಧ, ಪ್ರೀತಿ, ವಿಶ್ವಾಸ ಇದೆ. ಆದರೆ ನಾನು ಖಳನಾಯಕ ಅನಿಸಿಕೊಳ್ಳಲು ನಾನು ತಯಾರಿಲ್ಲ ಎಂದು ಖಳನಾಯಕ ಪದ ಬಳಕೆಯನ್ನು ಖಂಡಿಸಿದ್ದರು.

ಇದಕ್ಕೆ ದನಿಗೂಡಿಸಿದ ಬಿಎಸ್‍ವೈ, ಆ ಪದವನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ಮುಂದಿನ ಮುಖ್ಯಮಂತ್ರಿ ಕನಸು ಕಾಣುತ್ತಿರುವ ನಿಮ್ಮ ಬಗ್ಗೆ ಖಳನಾಯಕನನ್ನಾಗಿ ಮಾಡಲ್ಲ. ಇನ್ನು ಕೆಲವೇ ತಿಂಗಳಲ್ಲಿ ಕಾಂಗ್ರೆಸ್ ಅನ್ನುವಂತಹ ಹೆಸರನ್ನು ಇಲ್ಲದಂತೆ ಅಪ್ಪ-ಮಕ್ಕಳು ಸೇರಿ ಮಾಡದೇ ಇದ್ದರೆ ನನ್ನನ್ನು ಯಡಿಯೂರಪ್ಪ ಎಂದು ಕರೆಯಬೇಡಿ ಎಂದು ಸವಾಲೆಸೆದಿದ್ದರು. (ದಿಗ್ವಿಜಯ ನ್ಯೂಸ್)

Leave a Reply

Your email address will not be published. Required fields are marked *