ನಿಜವಾದ ‘ಚೋರ್​’ ಯಾರೆಂದು ಮಿಶೆಲ್​ನಿಂದ ದೇಶಕ್ಕೆ ಗೊತ್ತಾಗಿದೆ: ರಾಹುಲ್​ ವಿರುದ್ಧ ಬಿಎಸ್​ವೈ ವಾಗ್ದಾಳಿ

ಬೆಂಗಳೂರು: ಅಗಸ್ತಾ ವೆಸ್ಟ್​ಲ್ಯಾಂಡ್​ನ ಮಧ್ಯವರ್ತಿ ವಿಚಾರಣೆ ವೇಳೆ ಸೋನಿಯಾ ಗಾಂಧಿ ಮತ್ತು ರಾಹುಲ್​ ಗಾಂಧಿ ಅವರ ಹೆಸರು ಹೇಳುವ ಮೂಲಕ ಈ ದೇಶಕ್ಕೆ ನಿಜವಾದ ಚೋರ್​ ಯಾರೆಂದು ತಿಳಿಸಿಕೊಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​. ಯಡಿಯೂರಪ್ಪ ಕಾಂಗ್ರೆಸ್​ ಮತ್ತು ರಾಹುಲ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ರಫೆಲ್​ ಹಗರಣದಲ್ಲಿ ಬಿಜೆಪಿ ವಿರುದ್ಧ ದೇಶಾದ್ಯಂತ ಏಕಕಾಲಕ್ಕೆ ಸುದ್ದಿಗೋಷ್ಠಿ ನಡೆಸಿ ಟೀಕೆ ಮಾಡುತ್ತಿದ್ದ ಕಾಂಗ್ರೆಸ್​ನ ನಡೆಯನ್ನೇ ಅನುಸರಿಸಿದ ಬಿಜೆಪಿ, ಇಂದು ಅಗಸ್ತಾ ವೆಸ್ಟ್​ಲ್ಯಾಂಡ್​ ಹಗರಣದ ವಿಚಾರವಾಗಿ ಕಾಂಗ್ರೆಸ್​ ವಿರುದ್ಧ ದೇಶಾದ್ಯಂತ ಸುದ್ದಿಗೋಷ್ಠಿ ನಡೆಸಿತು. ಬಿಜೆಪಿ ಅಧಿಕಾರದಲ್ಲಿರುವ ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು ಇಂದು ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್​ ವಿರುದ್ಧ ಕಿಡಿ ಕಾರಿದರು. ಅದರಂತೆ ರಾಜ್ಯದಲ್ಲೂ ಯಡಿಯೂರಪ್ಪ ಅವರು ಸುದ್ದಿಗೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ಅವರು, ” ಕಾಂಗ್ರೆಸ್ ನೇತಾರರು ರಫೇಲ್ ವಿಮಾನ ಖರೀದಿ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು “ಚೋರ್” ಎಂದು ಹೇಳುವ ಮೂಲಕ ಅವಮಾನಿಸುತ್ತಿದ್ದರು. ಆದರೆ ಆಗಸ್ತಾ ವೆಸ್ಟ್​ಲ್ಯಾಂಡ್​ ‘ಹೆಲಿಕಾಪ್ಟರ್ ಖರೀದಿಯಲ್ಲಿ ಮಧ್ಯವರ್ತಿಯಾಗಿದ್ದ ಕ್ರಿಶ್ಚಿಯನ್ ಮಿಶೆಲ್​, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೇ, ಈ ದಲ್ಲಾಳಿ ವ್ಯವಹಾರದಲ್ಲಿ ರಾಹುಲ್ ಗಾಂಧಿ ಅವರೂ ಫಲಾನುಭವಿ ಎನ್ನುವ ಪ್ರಬಲ ಸುಳಿವನ್ನು ನೀಡಿದ್ದಾರೆ. ಈ ಮೂಲಕ ಮೋದಿಯವರನ್ನು “ಚೋರ್” ಎಂದು ಕೂಗುತ್ತಿದ್ದವರೇ ಈಗ ನಿಜವಾದ ಚೋರರು ಎನ್ನುವುದು ಸಾಬೀತಾಗಿದೆ,” ಎಂದರು.

“ಮೋದಿ ದೇಶದ ಸಂಪತ್ತನ್ನು ಲೂಟಿ ಹೊಡೆದವರ ವಿರುದ್ಧ ನಿಗಾ ಇರಿಸುವ ನಿಜವಾದ ಚೌಕಿದಾರ ಎನ್ನುವುದು ಕೂಡಾ ಸಾಬೀತಾಗಿದೆ. ಆದ್ದರಿಂದಲೇ ಕಳ್ಳರು ಮೋದಿಯ ವಿರುದ್ಧ ಕೂಗುವುದನ್ನು ಜೋರು ಮಾಡಿದ್ದಾರೆ,” ಎಂದರು.

ಸರ್ಕಾರ ಅಸ್ತಿರಗೊಳ್ಳುತ್ತಿದೆ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ನೋಡಿ ಹೇಳಿಕೆ ಕೊಡುತ್ತಿದ್ದೇವೆ ಹೊರತು ನಾವಾಗಿಯೇ ಸರ್ಕಾರ ಅಸ್ತಿರಗೊಳಿಸುತ್ತಿಲ್ಲ..

ಇದೇ ವೇಳೆ, ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಬಿಜೆಪಿ ಅಸ್ತಿರಗೊಳಿಸಲು ಪ್ರಯತ್ನಿಸುತ್ತಿದೆ ಎಂಬ ವಾದಗಳ ಕುರಿತು ಪ್ರತಿಕ್ರಿಯಿಸಿದ ಅವರು, “ಸರ್ಕಾರ ಬೀಳುತ್ತದೆ ಎಂದು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿರುವ ವರದಿಗಳ ಆಧಾರದ ಮೇಲೆ ಬಿಜೆಪಿ ನಾಯಕರು ಹಾಗೆ ಹೇಳುತ್ತಿದ್ದಾರೆ. ಒಂದು ವೇಳೆ ಸರ್ಕಾರ ತಾನಾಗಿಯೇ ಬಿದ್ದರೆ ಸುಮ್ಮನೆ ಕೂರಲು ನಾವೇನು ಸನ್ಯಾಸಿಗಳಲ್ಲ. ಹೊಸ ವರ್ಷದಲ್ಲಿ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಅಷ್ಟರ ಮಟ್ಟಿಗೆ ಕಾಂಗ್ರೆಸ್-ಜೆಡಿಎಸ್ ನಲ್ಲಿ ಅತೃಪ್ತಿ ಅಸಮಾಧಾನ ಹೆಚ್ಚಿದೆ,” ಎಂದು ಹೇಳಿದರು.