ನಮ್ಮವರು 25 +1=26 ಸಂಸದರು

ಲೋಕಸಭಾ ಚುನಾವಣೆಯಲ್ಲಿ ರಾಜ್ಯ ಬಿಜೆಪಿಯನ್ನು ಅಭೂತಪೂರ್ವ ಯಶಸ್ವಿಯತ್ತ ಮುನ್ನಡೆಸಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ಹೆಚ್ಚಿಸಿಕೊಂಡಿದ್ದಾರೆ. ಈ ಸಂದರ್ಭ ವಿಜಯವಾಣಿ ಸಂದರ್ಶನದಲ್ಲಿ ಅನೇಕ ವಿಚಾರಗಳ ಕುರಿತು ಅವರು ಮಾತನಾಡಿದ್ದಾರೆ.

| ರಮೇಶ ದೊಡ್ಡಪುರ, ಬೆಂಗಳೂರು

  • 22 ಸ್ಥಾನದ ನಿಮ್ಮ ಅಂದಾಜು ಮೀರಿ ಜನಾದೇಶ ಬಂದಿದ್ದಕ್ಕೆ ಕಾರಣವೇನು?

ಇದೇ ಕಾರಣಕ್ಕೆ ನಾನು 22ಕ್ಕಿಂತ ಹೆಚ್ಚು ಎಂದು ಹೇಳುತ್ತಲೇ ಇದ್ದೆ. ಒಂದೆರಡು ಕ್ಷೇತ್ರಗಳನ್ನು ಬಿಟ್ಟು ಉಳಿದೆಲ್ಲ ಕಡೆ ಹೈಕಮಾಂಡ್ ಹಸಿರು ನಿಶಾನೆಗೂ ಮೊದಲೆ, ನೀವೇ ನಮ್ಮ ಅಭ್ಯರ್ಥಿಗಳು ಕೆಲಸ ಮಾಡಿ ಎಂದು ತಿಳಿಸಲಾಗಿತ್ತು. ಹಾಲಿ ಸಂಸದರಿಗೆ ಟಿಕೆಟ್ ತಪು್ಪವುದಿಲ್ಲ ಎಂಬ ಭರವಸೆ ನೀಡಿದ್ದೆವು, ಉಳಿದೆಡೆ ನೀವೇ ಅಭ್ಯರ್ಥಿ ಎಂದು ತಿಳಿಸಿದ್ದೆವು. ಅವರೆಲ್ಲರೂ ಮೂರು ತಿಂಗಳು ಮುನ್ನವೇ ಕೆಲಸ ಆರಂಭಿಸಿದ್ದರು. ನಾನೂ ಪ್ರವಾಸ ಮಾಡಿ ಮೋದಿ ಅಲೆ, ಮೈತ್ರಿ ಸರ್ಕಾರದ ಕಚ್ಚಾಟ, ಸಾಲಮನ್ನಾ ವೈಫಲ್ಯ ವಿಚಾರವನ್ನು ಪ್ರಸ್ತಾಪಿಸಿದ್ದೆ. ಸದನದ ಒಳಗೆ, ಹೊರಗೆ ಪ್ರತಿಪಕ್ಷವಾಗಿ ಬಿಜೆಪಿ ಸಾಕಷ್ಟು ಕೆಲಸ ಮಾಡಿದೆ. ನನಗೆ ನೆನಪಿರುವಂತೆ ರಾಜ್ಯದ ಇತಿಹಾಸದಲ್ಲಿ ಬಿಜೆಪಿ ಮಾತ್ರವಲ್ಲ, ಕಾಂಗ್ರೆಸ್-ಜೆಡಿಎಸ್ ಸೇರಿ ಯಾವುದೇ ಪಕ್ಷಕ್ಕೆ ಇಷ್ಟು ಬೆಂಬಲ ಸಿಕ್ಕಿಲ್ಲ.

  • ಸುಮಲತಾ ಅಂಬರೀಷ್ ಜಯಿಸಿರುವುದು ಆ ಭಾಗದಲ್ಲಿ ಪಕ್ಷ ಸಂಘಟನೆಗೆ ಸಹಾಯಕವಾಗುತ್ತದೆಯೇ?

ಸುಮಲತಾ ಅವರಿಗೆ ನಾವು ಸಂಪೂರ್ಣ ಬೆಂಬಲ ನೀಡಿದ್ದೆವು. ಪ್ರಚಾರದಲ್ಲಿ ನಮ್ಮ ಹೆಸರು ಹೇಳದಿದ್ದರೂ ತೊಂದರೆಯಿಲ್ಲ, ನಮ್ಮ ಕಾರ್ಯಕರ್ತರು ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದೆವು. ರಾಷ್ಟ್ರೀಯ ಪಕ್ಷವಾಗಿ ಅಭ್ಯರ್ಥಿ ಹಾಕದೆ ಬೆಂಬಲ ನೀಡಿದ್ದರಿಂದ ನಮ್ಮ 25 ಸಂಸದರ ಜತೆಗೆ ಸುಮಲತಾ ಅವರನ್ನು 26ನೇ ಸಂಸದರು ಎಂದು ಪರಿಗಣಿಸಬಹುದು. ಸಂಘಟನೆಗೆ ಸೇರ್ಪಡೆ ಆಗಬೇಕೆ, ಬೇಡವೇ ಎಂಬುದು ಅವರಿಗೆ ಬಿಟ್ಟ ನಿರ್ಧಾರ. ನಮ್ಮ ಜತೆ ಆಗಮಿಸಿದರೆ ಮಂಡ್ಯ ಅಭಿವೃದ್ಧಿ ದೃಷ್ಟಿಯಿಂದ ಸಾಕಷ್ಟು ಅನುಕೂಲವಾಗುತ್ತದೆ. ಅವರ ಮನಸ್ಸಿನಲ್ಲೇನಿದೆ ಎಂಬುದನ್ನು ತಿಳಿದು ಮುಂದಿನ ಹೆಜ್ಜೆ ಇಡುತ್ತೇವೆ.

  • ದಕ್ಷಿಣದಲ್ಲಿ ಬಿಜೆಪಿ ಹೆಬ್ಬಾಗಿಲು ಮುಚ್ಚುತ್ತೇವೆ ಎಂದು ದೇವೇಗೌಡರು, ಬಿಜೆಪಿ ಒಂದಂಕಿ ದಾಟಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದರು. ಈಗ ಪ್ರಮುಖ ನಾಯಕರೇ ಸೋಲುಂಡಿದ್ದಾರೆ. ಈ ನಾಯಕರು ಸಂಸತ್ತಿನಲ್ಲಿ ಇರಬೇಕಿತ್ತು ಎಂದು ಕೆಲವರು ಅಭಿಪ್ರಾಯಪಡುತ್ತಿದ್ದಾರಲ್ಲ..?

ಅಧಿಕಾರದ ಮದದಿಂದ ಮಾಜಿ ಪ್ರಧಾನಿ ಎಂಬ ಅರಿವಿಲ್ಲದೆ ದೇವೇಗೌಡರು ಮಾತನಾಡಿದ್ದರು. ಸಿದ್ದರಾಮಯ್ಯ ಸೇರಿ ಅನೇಕರು ಪ್ರಧಾನಿ ಅವರನ್ನು ಏಕವಚನದಲ್ಲಿ ಸಂಬೋಧಿಸುವುದು, ಜಾತಿ ವಿಷಬೀಜ ಬಿತ್ತುವ ಪ್ರಯತ್ನ ಮಾಡಿದವರಿಗೆ ಜನರು ಪಾಠ ಕಲಿಸಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ವಿ.ಮುನಿಯಪ್ಪ, ವೀರಪ್ಪ ಮೊಯ್ಲಿ, ಎಚ್.ಡಿ.ದೇವೇಗೌಡ ಅವರು ಸೋಲುವುದು ನೂರಕ್ಕೆ ನೂರು ಸತ್ಯ ಎಂದು ಅನೇಕ ದಿನಗಳಿಂದ ಹೇಳುತ್ತಲೇ ಇದ್ದೆ. ಈಗ ಆ ಮಾತು ನಿಜವಾಗಿದೆ. ಯಾರು ಎಲ್ಲಿರಬೇಕು ಎಂಬುದನ್ನು ಜನರೇ ನಿರ್ಧರಿಸಿದ್ದಾರೆ. ಜೆಡಿಎಸ್ ಜತೆ ಸರ್ಕಾರ ನಡೆಸುವುದು ಎಷ್ಟು ಅಪಾಯಕಾರಿ, ಅವರ ಜತೆಗೆ ಸೇರಿರುವ ನೀವು ಸರ್ವನಾಶವಾಗುತ್ತೀರಾ ಎಂದು ಈ ಹಿಂದೆ ಸದನದಲ್ಲೇ ನಾನು ಹೇಳಿದ್ದೆ. ಈಗ ಆ ಮಾತು ಕಾಂಗ್ರೆಸಿಗರ ಅರಿವಿಗೆ ಬಂದಿರಬೇಕು.

  • ನೀವು ಯಾವಾಗ ಸಿಎಂ ಆಗುವುದು?

ಸರ್ಕಾರದೊಳಗೇ ಸಾಕಷ್ಟು ಗೊಂದಲಗಳಿವೆ. ಕುಮಾರಸ್ವಾಮಿ ಅವರನ್ನು ಒಪ್ಪಲು 20 ಶಾಸಕರು ಸಿದ್ಧರಿಲ್ಲ. ನಾವು ಅಸ್ಥಿರಗೊಳಿಸುವ ಅವಶ್ಯಕತೆಯಿಲ್ಲ. ಈ ಸರ್ಕಾರಕ್ಕೆ ಮುಂದುವರಿಯುವ ನೈತಿಕತೆ ಇಲ್ಲ ಎಂದು ಜನರೇ ಹೇಳುತ್ತಿದ್ದಾರೆ. ಸ್ವತಃ ಸಿಎಂ ಸಭೆಗೆ ಕರೆದರೂ ಸಿದ್ದರಾಮಯ್ಯ ತೆರಳಿಲ್ಲ. ಇಡೀ ಸರ್ಕಾರ ಗೊಂದಲದಲ್ಲಿದೆ. ಇಂತಹ ದಯನೀಯ ಸೋಲಿನ ನಂತರವೂ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸಿಲ್ಲ. ಜನಹಿತ ಮರೆತು ಅಡ್ಜಸ್ಟ್ ಮೆಂಟ್ ರಾಜಕಾರಣದಲ್ಲಿ ತೊಡಗಿದ್ದಾರೆ. ಈ ಬಗ್ಗೆ ನಮ್ಮ ಸಂಸದರು, ಶಾಸಕರು ಹೇಳಿದರೆ ತಪ್ಪೇನೂ ಇಲ್ಲ. ಆದರೆ ನಾವು ಈ ಸರ್ಕಾರ ಬೀಳಿಸಲು ಯಾವುದೇ ಪ್ರಯತ್ನ ಮಾಡುವುದಿಲ್ಲ. ನಾನು ಸಿಎಂ ಆಗುತ್ತೇನೆ ಎಂಬ ಕುರಿತು ಯಾರೂ ಹೇಳಿಕೆ ನೀಡಬಾರದು ಎಂದು ಕಾರ್ಯಕರ್ತರಲ್ಲಿ ಕೈಜೋಡಿಸಿ ಪ್ರಾರ್ಥನೆ ಮಾಡುತ್ತೇನೆ. ಕಾಲ ಕೂಡಿ ಬಂದಾಗ ಸಿಎಂ ಆಗುತ್ತೇನೆ. ಅದಕ್ಕೆಲ್ಲ ವಾತಾವರಣ ಬದಲಾಗಬೇಕು. ಸದ್ಯಕ್ಕೆ ವಿರೋಧ ಪಕ್ಷದಲ್ಲಿ ಗೌರವಯುತವಾಗಿ ಕೆಲಸ ಮಾಡೋಣ. ಅವಸರ ಮಾಡುವುದು ಸರಿಯಲ್ಲ.

  • ರಾಷ್ಟ್ರಮಟ್ಟದಲ್ಲಿ ಬಿಜೆಪಿ ಸಾಧನೆ ಬಗ್ಗೆ ಏನು ಹೇಳುತ್ತೀರಿ?

ಕೇವಲ ಎರಡು ಸಂಸದರನ್ನು ಹೊಂದಿದ್ದ ಬಿಜೆಪಿ, ಈಗ 300 ದಾಟಿದೆ. ಒಂದು ದಿನವೂ ಬಿಡುವುಲ್ಲದೆ ದುಡಿಯುವ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಜನರು ವಿಶ್ವಾಸ ಇಟ್ಟಿದ್ದಾರೆ. ಮೋದಿ ಅವರ ಸಮಾವೇಶಗಳು ನಡೆದಲ್ಲೆಲ್ಲ ಬಿಜೆಪಿ ಜಯಿಸಿದೆ. ರಾಜ್ಯದಲ್ಲಿ ಈ ಹಿಂದಿನ ನಮ್ಮ ಸರ್ಕಾರದ ಸಾಧನೆಯೂ ಸೇರಿ ಉತ್ತಮ ಸಂಖ್ಯೆಯಲ್ಲಿ ಸಂಸದರು ಆಯ್ಕೆ ಆಗಿದ್ದಾರೆ.

  • ಮೈತ್ರಿ ಸೋಲಿಗೆ ಹೊಣೆ ಯಾರು ಹೊರಬೇಕು?

ಮೈಸೂರಿನಲ್ಲಿ ಸಿದ್ದರಾಮಯ್ಯ, ಮಂಡ್ಯದಲ್ಲಿ ಕುಮಾರಸ್ವಾಮಿ, ತುಮಕೂರಿನಲ್ಲಿ ದೇವೇಗೌಡರ ಪ್ರಯತ್ನದ ನಡುವೆಯೂ ದಯನೀಯ ಸೋಲು ಅನುಭವಿಸಿದ್ದಾರೆ ಎಂದರೆ ಅವರೇ ಹೊಣೆ. ಜನರಿಗೆ ಮಾಡುತ್ತಿರುವ ದ್ರೋಹ, ಕಚ್ಚಾಟವೇ ಪ್ರಮುಖ ಕಾರಣ.

  • ದಕ್ಷಿಣ ಭಾರತದ ಪೈಕಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿ ಇಷ್ಟು ಸದೃಢವಾಗಲು ಕಾರಣವೇನು?

ಕರ್ನಾಟಕವನ್ನು ದಕ್ಷಿಣದ ಬೇರೆ ರಾಜ್ಯಗಳಿಗೆ ಹೋಲಿಕೆಯನ್ನೇ ಮಾಡಲು ಆಗುವುದಿಲ್ಲ. ದೇವದುರ್ಲಭವಾದ ಕಾರ್ಯಕರ್ತರ ನಿರಂತರ ಪರಿಶ್ರಮ, ಒಡಕಿಲ್ಲದೆ ದುಡಿಯುವ ನಾಯಕರು, ಪ್ರತಿ ಬೂತ್​ನಲ್ಲೂ ಕೆಲಸ ಮಾಡುವವರ ಜತೆಗೆ ಈ ಹಿಂದಿನ ನಮ್ಮ ಸರ್ಕಾರದ ಸಾಧನೆಗಳೂ ಇದಕ್ಕೆ ಕಾರಣ. ಈ ಚುನಾವಣೆಯಲ್ಲಿ ಪಕ್ಷ ಸಾಕಷ್ಟು ವಿಸ್ತಾರಗೊಂಡಿದೆ. ತೆಲಂಗಾಣದಲ್ಲಿ ನಾಲ್ವರು ಸಂಸದರು ಆಯ್ಕೆಯಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಪಕ್ಷ ಈ ಮಟ್ಟಕ್ಕೆ ಸಾಧನೆ ತೋರಬಹುದು ಎಂಬುದನ್ನು ಊಹಿಸಿಯೇ ಇರಲಿಲ್ಲ. ದಕ್ಷಿಣ ಭಾರತದಲ್ಲೂ ಮುಂದಿನ ದಿನಗಳಲ್ಲಿ ಪಕ್ಷ ಬಲವರ್ಧನೆಯಾಗುತ್ತದೆ.

Leave a Reply

Your email address will not be published. Required fields are marked *