ಹಗಲು ದರೋಡೆಗೆ ಪುಟ್ಟರಂಗ ಶೆಟ್ಟಿ‌ ಪ್ರಕರಣವೇ ಸಾಕ್ಷಿ: ಬಿ ಎಸ್‌ ಯಡಿಯೂರಪ್ಪ

ಶಿವಮೊಗ್ಗ: ಪುಟ್ಟರಂಗ ಶೆಟ್ಟಿ ಕೂಡಲೇ ರಾಜೀನಾಮೆ ಕೊಡಬೇಕು. ‘ಹಗಲು ದರೋಡೆಗೆ ಪುಟ್ಟರಂಗ ಶೆಟ್ಟಿ‌ ಪ್ರಕರಣವೇ ಸಾಕ್ಷಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.

ಅಧಿಕಾರಿ, ಮಂತ್ರಿಗಳು ಹಗಲು ದರೋಡೆ ಮಾಡುತ್ತಿದ್ದಾರೆ. ಪುಟ್ಟರಂಗಶೆಟ್ಟಿ ಪಿಎ ಮೋಹನ್ ಬಳಿ 25 ಲಕ್ಷ ಹಣ ಪತ್ತೆಯಾಗಿದ್ದು, ಕವರ್ ಮೇಲೆ ಸಚಿವರ ಹೆಸರು ಇರುವುದು ಬಹಿರಂಗವಾಗಿದೆ. ಒತ್ತಡಕ್ಕೆ ಮಣಿಯದೆ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಲಿ ಎಂದು ಹೇಳಿದರು.

ಅಧಿಕಾರಿಗಳು ಮಂತ್ರಿಗಳು ಸೇರಿ ಹಗಲು ದರೋಡೆ ಮಾಡುತ್ತಾರೇ ಎನ್ನುವುದಕ್ಕೆ ಪುಟ್ಟರಂಗ ಶೆಟ್ಟಿ‌ ಪ್ರಕರಣ ಸಾಕ್ಷಿಯಾಗಿದೆ. ಮೋದಿ ಅವರು 10 ಪರ್ಸೆಂಟ್ ಸರ್ಕಾರ ಎಂದು ಹೇಳಿದ್ದರು. ಆದರೆ ಇದು 20 ಪರ್ಸೆಂಟ್ ಸರ್ಕಾರ ಎಂಬುದು ಸಾಬೀತಾಗಿದೆ. ಈ ಸರ್ಕಾರ ಜನರ ಪಾಲಿಗೆ ಬದುಕಿದ್ದು ಸತ್ತಂತಾಗಿದೆ ಎಂದರು.

ಮುಖ್ಯಮಂತ್ರಿಗಳು ಪದೇ ಪದೆ ವೇದಾಂತ, ಉಪನಿಷತ್‌ ಮಾತನಾಡುತ್ತಾರೆ. ಅದರೆ‌ ಅವರ ‌ಬುಡದಲ್ಲೇ ಇಂತಹ ಘಟನೆಗಳು ನಡೆದಿವೆ. 24 ಗಂಟೆ ಒಳಗೆ ಮಂತ್ರಿಯನ್ನು ಸಚಿವ ಸ್ಥಾನದಿಂದ ಕೈ ಬಿಡಬೇಕು. ಇಲ್ಲವಾದರೆ ಜನರೇ ತಕ್ಕ ಪಾಠ ಕಲಿಸುತ್ತಾರೆ. ಈ ಪ್ರಕರಣ ಮುಚ್ಚಿ ಹಾಕುವಂಥ ಪ್ರಯತ್ನವನ್ನು ಸರ್ಕಾರ ಮಾಡಿದರೆ ಜನರು ಕ್ಷಮಿಸಲ್ಲ ಎಂದು ಕಿಡಿಕಾರಿದರು. (ದಿಗ್ವಿಜಯ ನ್ಯೂಸ್)