ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡುವಂತೆ ಕೇಂದ್ರಕ್ಕೆ ಆಗ್ರಹಿಸುತ್ತೇವೆ: ಬಿಎಸ್​ವೈ

ತುಮಕೂರು: ‘ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಬೇಕೆಂದು ಈ ಹಿಂದೆಯೂ ಹೇಳಿದ್ದೆವು. ಈ ಬಗ್ಗೆ ಕೇಂದ್ರಕ್ಕೆ ಮನವಿ ಮಾಡುತ್ತೇವೆ’ ಎಂದು ಬಿ.ಎಸ್​. ಯಡಿಯೂರಪ್ಪ ತಿಳಿಸಿದ್ದಾರೆ.

ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿ ಮಾತನಾಡಿದ ಅವರು, ಸಂಸದರೆಲ್ಲರೂ ಈ ಬಗ್ಗೆ ಪ್ರಧಾನಿಗೆ ಆಗ್ರಹಿಸುತ್ತೇವೆ. ಅಗತ್ಯ ಬಿದ್ದರೆ ಮತ್ತೊಮ್ಮೆ ಪ್ರಧಾನಿಯನ್ನು ಭೇಟಿ ಮಾಡುತ್ತೇವೆ ಎಂದರು.

ಇನ್ನು ರಾಜ್ಯದಲ್ಲಿ ಆಪರೇಷನ್ ಕಮಲ ವಿಚಾರದ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ಇಲ್ಲಿ ರಾಜಕೀಯದ ಬಗ್ಗೆ ಮಾತನಾಡುವುದು ಸರಿಯಲ್ಲ. ಇದು ಅಂಥ ವೇದಿಕೆಯು ಅಲ್ಲ. ಇವತ್ತು, ನಾಳೆ ಇಲ್ಲೆ ಇರುತ್ತೇನೆ. ಶ್ರೀಗಳ ಆರೋಗ್ಯ, ಚಿಕಿತ್ಸೆ ನೀಡುವ ಕುರಿತಂತೆ ಚರ್ಚೆ ನಡೆಸುತ್ತೇನೆ ಎಂದರು.

‘ಶ್ರೀಗಳನ್ನು ನೋಡುವುದೇ ಒಂದು ಅದ್ಭುತ’
ಶ್ರೀಗಳ ದರ್ಶನ ಪಡೆದಿದ್ದು ನನ್ನ ಭಾಗ್ಯ. ಶ್ರೀಗಳ ಚೇತರಿಕೆಯಿಂದ ವೈದ್ಯಕೀಯ ಲೋಕ ಚಕಿತಗೊಂಡಿದೆ. ಅವರನ್ನು ನೋಡುವುದೇ ಒಂದು ಅದ್ಭುತ. ಅವರು ಇನ್ನಷ್ಟು ಲವಲವಿಕೆಯಿಂದ ಇರಬೇಕೆಂದು ದೇವರಲ್ಲಿ ಬೇಡಿಕೊಳ್ಳುವೆ. ಅವರ ಜಾಗೃತಾ ಕಾರ್ಯ ನಮಗೆ ಸ್ಪೂರ್ತಿ ಎಂದು ಶಾಸಕ ಜಗದೀಶ್​ ಶೆಟ್ಟರ್​ ತಿಳಿಸಿದರು.

ಅವರ ಆರೋಗ್ಯ ನಮ್ಮ ಕೈಯಲ್ಲಿಲ್ಲ
ಅವರ ಆರೋಗ್ಯ ನಮ್ಮಗಳ‌ ಕೈಯಲ್ಲಿಲ್ಲ. ಆ ಶಿವ ಏನ್ ನಿರ್ಧಾರ ಮಾಡುತ್ತಾನೋ ಗೊತ್ತಿಲ್ಲ. ನಾನು ಈ ಮಠದ ಹಳೆ ವಿದ್ಯಾರ್ಥಿ. ಅವರನ್ನು ನೋಡಿದರೆ ಮತ್ತೆ ಗುಣಮುಖರಾಗುವ ರೀತಿ ಇದ್ದಾರೆ. ವೈದ್ಯರ ಚಿಕಿತ್ಸೆ ಕೂಡ ನಡೆದುಹೋಗಿದೆ. ಇದು ಶ್ರೀಗಳ ಸ್ವಯಂ ನಿರ್ಧಾರ. ಶ್ರೀ ಗಳು ಗುಣಮುಖರಾಗಲಿ‌ ಎಂದು ಶ್ರೀಗಳ ಭೇಟಿ ಬಳಿಕ ಚೆಲುವರಾಯಸ್ವಾಮಿ ಹೇಳಿದ್ದಾರೆ.

ಶ್ರೀಗಳ ಆಶೀರ್ವಾದ ಪಡೆದು ಬಂದೆ
ಸಿದ್ಧಗಂಗಾ ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಾಗುತ್ತಿದೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ. ಶ್ರೀಗಳ ಆಶೀರ್ವಾದವನ್ನು ಪಡೆದು ಬಂದಿದ್ದೇನೆ. ವೈದ್ಯ ಡಾ.ಪರಮೇಶ್ ಬಳಿಯೂ ಮಾತನಾಡಿದ್ದೇನೆ. ಸಿದ್ಧಗಂಗಾ ಶ್ರೀಗಳು ಬೇಗ ಗುಣಮುಖರಾಗುತ್ತಾರೆ ಎಂದು ಬಿ.ಸಿ.ಪಾಟೀಲ್​ ತಿಳಿಸಿದ್ದಾರೆ. (ಏಜೆನ್ಸೀಸ್)