ಆರು ತಿಂಗಳಾದರೂ ಇನ್ನೂ ಸಾಲಮನ್ನಾ ಆಗಿಲ್ಲ: ಬಿಎಸ್​ವೈ

ಶಿವಮೊಗ್ಗ: ರೈತರ ಸಾಲಮನ್ನಾ ಎಂದು ಆರು ತಿಂಗಳಿಂದ ಹೇಳಿಕೊಂಡು ಬರುತ್ತಿದ್ದಾರೆ. ಆದರೆ, ಇನ್ನೂ ರೈತರ ಸಾಲಮನ್ನಾ ಆಗಿಲ್ಲ. ರೈತರ ಆತ್ಮಹತ್ಯೆ ಪ್ರಕರಣಗಳು ದಿನೇ ದಿನೆ ಹೆಚ್ಚುತ್ತಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ತಿಳಿಸಿದ್ದಾರೆ.

ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಸಾಲಮನ್ನಾ ಎಂದು ಪ್ರಚಾರದಲ್ಲಿ ತೊಡಗಿದ್ದಾರೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸವಾಗುತ್ತಿಲ್ಲ. ರಾಷ್ಟ್ರೀಕೃತ ಬ್ಯಾಂಕ್​ಗಳಿಗೆ ಸಾಲಮನ್ನಾದ ಹಣ ಪಾವತಿ ಮಾಡದಿದ್ದಲ್ಲಿ ಯಾವುದೇ ಕಾರಣಕ್ಕೂ ಅವರು ಕ್ಲಿಯರೆನ್ಸ್ ಸರ್ಟಿಫಿಕೇಟ್ ನೀಡುವುದಿಲ್ಲ. ಆದರೆ, ರಾಷ್ಟ್ರೀಕೃತ ಬ್ಯಾಂಕ್​ಗಳ ಸಾಲಮನ್ನಾ ಮಾಡಲು ಇನ್ನು ನಾಲ್ಕು ವರ್ಷ ಬೇಕು ಎಂದು ಖುದ್ದು ಮುಖ್ಯಮಂತ್ರಿಯೇ ಹೇಳಿದ್ದಾರೆ ಎಂದರು.

ಉತ್ತರ ಕರ್ನಾಟಕದ ಅಭಿವೃದ್ಧಿ ಕುಂಠಿತವಾಗಿರುವ ನೋವು ಜನರನ್ನು ಕಾಡುತ್ತಿದೆ. ನೀರಾವರಿ ಯೋಜನೆಗಳು ಕುಂಠಿತವಾಗಿವೆ. ಈ ಎರಡು ಸಮಸ್ಯೆಗಳ ಬಗ್ಗೆ ಸದನದಲ್ಲಿ ಸುದೀರ್ಘವಾಗಿ ಚರ್ಚಿಸಿ ಪರಿಹಾರ ಕಂಡುಕೊಳ್ಳುವ ಕೆಲಸ ಮಾಡುತ್ತೇವೆ ಎಂದರು.

ಇಂದು ಶಿವಮೊಗ್ಗದಲ್ಲಿ ರಾಜ್ಯಪಾಲರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಇಂದು ಶಿವಮೊಗ್ಗಕ್ಕೆ ಬಂದಿದ್ದೇನೆ. ನಾಳೆಯಿಂದ ಸದನದಲ್ಲಿ ಭಾಗಿಯಾಗುತ್ತೇನೆ. ಈ ಬಾರಿ ಸದನದಲ್ಲಿ ಧರಣಿ ಮಾಡದೆ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಿ ಜನರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡುತ್ತೇವೆ ಎಂದರು.

ಪ್ರಸಾದಕ್ಕೆ ಅನುಮತಿ ಆದೇಶ ಸರಿಯಲ್ಲ
ಸುಳ್ವಾಡಿ ಪ್ರಕರಣದ ಹಿನ್ನೆಲೆ ಮುಜರಾಯಿ ಇಲಾಖೆ ನೂತನ ಆದೇಶಕ್ಕೆ ಬಿಎಸ್​ವೈ ಅಸಮಾಧಾನ ವ್ಯಕ್ತಪಡಿಸಿದ್ದು, “ದೇವಸ್ಥಾನದಲ್ಲಿ ಪ್ರಸಾದ ವಿತರಣೆಗೆ ಅನುಮತಿ ಪಡೆಯಬೇಕು ಎಂಬುದು ನನಗೆ ಸರಿ ಕಾಣುತ್ತಿಲ್ಲ. ಸುಳ್ವಾಡಿ ಪ್ರಕರಣದ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಿದರೆ ಮುಂದೆ ಈ ರೀತಿಯ ಪ್ರಕರಣಗಳು ಮರುಕಳಿಸುವುದಿಲ್ಲ. ದುರುದ್ದೇಶದಿಂದ ಪ್ರಸಾದಕ್ಕೆ ವಿಷ ಹಾಕಿದ್ದಾರೆ. ಈ ಪ್ರಕರಣದ ಹಿನ್ನೆಲೆಯಲ್ಲಿ ಅರ್ಥವಿಲ್ಲದ ಆದೇಶ ಹೊರಡಿಸಿರುವುದು ಸರಿಯಲ್ಲ” ಎಂದರು. (ದಿಗ್ವಿಜಯ ನ್ಯೂಸ್)