ಬಿಜೆಪಿಯಲ್ಲಿ ಪುಳಕ ಮೈತ್ರಿ ಪಕ್ಷಗಳಿಗೆ ನಡುಕ: ಚುನಾವಣೋತ್ತರ ಸಮೀಕ್ಷೆಗಳು ಮೂಡಿಸಿದ ಪ್ರಭಾವ

ಬೆಂಗಳೂರು: ಲೋಕಸಭೆ ಚುನಾವಣೋತ್ತರ ಸಮೀಕ್ಷೆಗಳು ರಾಜ್ಯದ ಮೈತ್ರಿ ಸರ್ಕಾರವನ್ನು ಆತಂಕಕ್ಕೆ ದೂಡಿದ್ದು, ರಾಜ್ಯದಲ್ಲಿ ಬಿಜೆಪಿ 20ಕ್ಕೂ ಅಧಿಕ ಸ್ಥಾನ ಗೆಲ್ಲುತ್ತದೆಂಬ ವರದಿಗಳು ಬಿಜೆಪಿಗರಲ್ಲಿ ವಿಶ್ವಾಸ ಹೆಚ್ಚಿಸಿದ್ದರೆ, ಕಾಂಗ್ರೆಸ್-ಜೆಡಿಎಸ್ ನಾಯಕರನ್ನು ಸಂಕಷ್ಟಕ್ಕೀಡುಮಾಡಿವೆ.

ಜೆಡಿಎಸ್-ಕಾಂಗ್ರೆಸ್ ಒಂದಾಗಿ ಬಿಜೆಪಿಯನ್ನು ಕಟ್ಟಿಹಾಕಬೇಕೆಂಬ ಲೆಕ್ಕಾಚಾರ ಕೈಕೊಟ್ಟಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ಬಹುತೇಕ ಸಮೀಕ್ಷೆಗಳು ಬಿಜೆಪಿಗೆ ಕನಿಷ್ಠ 17ರಿಂದ 23 ಸ್ಥಾನ ಸಿಗಬಹುದೆಂದು ಹೇಳಿದ್ದು, ಬಿಜೆಪಿ ನಾಯಕರಿಗೆ ಬಲ ತುಂಬಿದೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ 7ರಿಂದ 8 ಹಾಗೂ ಜೆಡಿಎಸ್ ಒಂದೆರಡು ಸ್ಥಾನಗಳಲ್ಲಿ ಮಾತ್ರ ಜಯ ಗಳಿಸಲಿದೆ ಎಂಬ ಲೆಕ್ಕಾಚಾರ ಮೈತ್ರಿ ಅಭ್ಯರ್ಥಿಗಳಿಗೆ ತಳಮಳ ಹೆಚ್ಚಿಸಿದೆ.

ವಿಶೇಷವಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸೋಲಲಿದ್ದಾರೆ ಎಂಬ ಸಮೀಕ್ಷೆಗಳು ಸರ್ಕಾರದ ಜಂಘಾಬಲವನ್ನೇ ಉಡುಗಿಸಿವೆ. ಮತ್ತೊಂದೆಡೆ ಹಾಸನದಲ್ಲಿ ಪ್ರಜ್ವಲ್ ರೇವಣ್ಣ ಗೆಲುವನ್ನು ಖಚಿತಪಡಿಸಿ, ತುಮಕೂರಿನಲ್ಲಿ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅವರ ಗೆಲುವು ಅನುಮಾನ ಎಂಬಂತೆ ಸಮೀಕ್ಷೆಗಳು ಅಭಿಪ್ರಾಯ ವ್ಯಕ್ತಪಡಿಸಿರುವುದು ಆತಂಕ ಹೆಚ್ಚಲು ಕಾರಣವಾಗಿದೆ.

ಇಂದು ಮಹತ್ವದ ಸಭೆ: ಚುನಾವಣೋತ್ತರ ಸಮೀಕ್ಷೆಗಳ ಬೆನ್ನಿಗೆ ಜೆಡಿಎಸ್ ಮೇ 21ರಂದು ಬೆಳಗ್ಗೆ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಸಭೆ ಕರೆದಿದೆ. ಲೋಕಸಭೆ ಚುನಾವಣೆ ಫಲಿತಾಂಶ ಏನಾಗಬಹುದು ಹಾಗೂ ಪಕ್ಷದ ಮುಂದಿನ ಕಾರ್ಯತಂತ್ರ ಏನಾಗಿರಬೇಕು ಎಂಬ ಚಿಂತನ-ಮಂಥನ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸಿಎಂ ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್​ನ ಹಲವಾರು ಸಚಿವರು, ಶಾಸಕರು, ಸಂಸತ್ ಚುನಾವಣೆ ಅಭ್ಯರ್ಥಿಗಳು ಸೇರಿ ಪ್ರಮುಖರು ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

‘ಎಕ್ಸಿಟ್’ ಸುಳಿವಿಗೆ ಬೆವರಿದ ಕೈ: ಚುನಾವಣೋತ್ತರ ಸಮೀಕ್ಷೆಗೆ ರಾಜ್ಯ ಕಾಂಗ್ರೆಸ್ ಕೂಡ ಬೆವತು ಹೋಗಿದ್ದು, ಎಕ್ಸಿಟ್ ಪೋಲ್ ಯಾವಾಗಲೂ ಸತ್ಯವಾಗಿಲ್ಲ, ಮೇ 23ರಂದು ನಿಜ ಗೊತ್ತಾಗುತ್ತದೆ ಎನ್ನುವ ಮೂಲಕ ಪಕ್ಷದ ನಾಯಕರು ಸ್ವಯಂ ಸಮಾಧಾನಕ್ಕೆ ಪ್ರಯತ್ನಿಸಿದ್ದಾರೆ. ಸಮೀಕ್ಷೆಗಳ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್, ಎಕ್ಸಿಟ್ ಪೋಲ್ ಈಸ್ ನಾಟ್ ಎ ಎಕ್ಸಾಕ್ಟ್ ಪೋಲ್. ಮೂಡ್ ಸೆಟ್ ಮಾಡಿ, ಇವಿಎಂಗಳನ್ನು ತಿರುಚುವ ಹುನ್ನಾರ ಇದು ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ 18 ಸ್ಥಾನಗಳನ್ನು ಗೆಲ್ಲಲಿದೆ ಎಂಬುದನ್ನ ನಂಬಲು ಸಾಧ್ಯವೇ? ಸಮೀಕ್ಷೆ ನೋಡಿದರೆ ಇದನ್ನು ಬಿಜೆಪಿ ಅಧ್ಯಕ್ಷರೇ ಹೇಳಿ ಮಾಡಿಸಿದ ಹಾಗಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ವ್ಯಂಗ್ಯವಾಡಿದ್ದಾರೆ.

ರಾಜ್ಯದಲ್ಲಿ ಬಿಜೆಪಿ 22-23 ಸ್ಥಾನ ಗೆಲ್ಲುವ ನಿರೀಕ್ಷೆ ಇದೆ. ಮೇ 23ರ ಬಳಿಕ ರಾಷ್ಟ್ರ- ರಾಜ್ಯ ರಾಜಕೀಯ ಚಿತ್ರಣ ಬದಲಾಗಲಿದೆ. ಸಮೀಕ್ಷೆಗಳನ್ನು ಕಂಡು ಕಾಂಗ್ರೆಸ್​ನ ಹಿರಿಯ ನಾಯಕರು ಹತಾಶರಾಗಿದ್ದಾರೆ.

| ಬಿ.ಎಸ್.ಯಡಿಯೂರಪ್ಪ ರಾಜ್ಯ ಬಿಜೆಪಿ ಅಧ್ಯಕ್ಷ

ಅಂಡಮಾನ್​ನಲ್ಲಿ ಬಿಜೆಪಿ ತಂಡ

ವಿವಿಧ ರಾಜ್ಯಗಳಲ್ಲಿ ಚುನಾವಣೆ ಕಾರ್ಯಕ್ಕೆ ತೆರಳಿದ್ದ ರಾಜ್ಯ ಬಿಜೆಪಿ ನಾಯಕರ ತಂಡ ಇದೀಗ ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ಪ್ರವಾಸ ತೆರಳಿದೆ. ರಾಜ್ಯ ಬಿಜೆಪಿ ಯಲ್ಲಿ ಅಧ್ಯಕ್ಷರ ಬದಲಾವಣೆ ಸನ್ನಿಹಿತ ಆಗುತ್ತಿರುವ ಕಾರಣಕ್ಕೆ ಸಂತೋಷ್ ನೇತೃತ್ವದಲ್ಲಿ ತಂಡ ಅಂಡಮಾನ್​ಗೆ ತೆರಳಿದೆ ಎಂದು ಭಾನುವಾರ ಕೆಲಕಾಲ ಸುದ್ದಿ ಹರಿದಾಡಿತು. ಆದರೆ ಈ ಸುದ್ದಿಯನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ಅವರು ಸಂಪೂರ್ಣವಾಗಿ ನಿರಾಕರಿಸಿ, ವಿವಿಧ ರಾಜ್ಯಗಳಿಗೆ ಚುನಾವಣೆ ಕಾರ್ಯಕ್ಕೆ ತೆರಳಿದ್ದ ಸಹೋದ್ಯೋಗಿಗಳು ಅಲ್ಲಿಗೆ ತೆರಳಿದ್ದಾರೆ. ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.

ವಿದೇಶಕ್ಕೆ ಹಾರಿದ ಡಿ.ಕೆ.ಶಿವಕುಮಾರ್

ಸರ್ಕಾರ-ಪಕ್ಷಕ್ಕೆ ಸವಾಲು ಎದುರಾ ದಾಗ ಟ್ರಬಲ್ ಶೂಟರ್ ರೀತಿ ಬಿಂಬಿತವಾಗುವ ಕಾಂಗ್ರೆಸ್ ನಾಯಕ ಡಿ.ಕೆ. ಶಿವಕುಮಾರ್ ಚುನಾವಣಾ ಫಲಿತಾಂಶಕ್ಕೆ ಮೂರು ದಿನಗಳು ಇರುವಂತೆಯೇ ವಿದೇಶಕ್ಕೆ ತೆರಳಿದ್ದಾರೆ. ಕುಟುಂಬ ಸದಸ್ಯರ ಜತೆ ಆಸ್ಟ್ರೇಲಿಯಾಗೆ ತೆರಳಿರುವ ಅವರು, 1 ವಾರ ವಿದೇಶ ಪ್ರವಾಸ ಕೈಗೊಳ್ಳುವರು.

ಚುರುಕಾದ ಅತೃಪ್ತರು: ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿರುವ ಗೋಕಾಕ್ ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಚಟುವಟಿಕೆ ಬಿರುಸಾಗಿದೆ. ಬೆಳಗಾವಿಯಿಂದ ಸೋಮವಾರ ಬೆಂಗಳೂರಿಗೆ ಬಂದ ರಮೇಶ್, ತಮ್ಮ ಸಂಗಡ ಬಿಜೆಪಿಗೆ ಬರುವ ಶಾಸಕರನ್ನು ಸಂರ್ಪಸಿದ್ದಾರೆನ್ನಲಾಗಿದೆ.

ಕಚೇರಿಯಲ್ಲಿ ಹೋಮ

ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಸುಭದ್ರ ಆಡಳಿತ ಚುಕ್ಕಾಣಿ ಹಿಡಿಯಲಿ ಎಂಬ ಸಂಕಲ್ಪದೊಂದಿಗೆ ರಾಜ್ಯ ಬಿಜೆಪಿ ಕಚೇರಿ ಸಿಬ್ಬಂದಿ 2 ದಿನಗಳ ಕಾಲ ಹೋಮ, ವಿಶೇಷ ಪೂಜೆ ಹಮ್ಮಿಕೊಂಡಿದ್ದರು. ಮಲ್ಲೇಶ್ವರದಲ್ಲಿರುವ ಜಗನ್ನಾಥ ಭವನದಲ್ಲಿ ಭಾನುವಾರ- ಸೋಮವಾರ ಸುದರ್ಶನ ಹೋಮ, ರುದ್ರ ಹೋಮ, ಗಣಪತಿ ಹೋಮ ನಡೆದವು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಶಾಸಕ ಡಾ.ಸಿ.ಎನ್. ಅಶ್ವತ್ಥನಾರಾಯಣ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಸೇರಿ ಅನೇಕರು ಉಪಸ್ಥಿತರಿದ್ದರು.

ಬಿಎಸ್​ವೈಗೆ ಅವಕಾಶ ತಪ್ಪಿಸಲು ತಂತ್ರ

ಬೆಂಗಳೂರು: ಮೇ 23ರಂದು ಹೊರ ಬೀಳುವ ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಬದಲಾವಣೆ ಗಾಳಿ ಬೀಸಲಿದೆ ಎಂಬ ಮಾತುಗಳನ್ನು ಸುಳ್ಳಾಗಿಸಲು ಪಣತೊಟ್ಟಿರುವ ಕಾಂಗ್ರೆಸ್ ನಾಯಕರು, ಬಿ.ಎಸ್. ಯಡಿಯೂರಪ್ಪ ಅವರಿಗೆ ಸರ್ಕಾರ ರಚಿಸಲು ಅವಕಾಶ ಸಿಗದಂತೆ ನೋಡಿಕೊಳ್ಳಲು ಪ್ರಯತ್ನ ಆರಂಭಿಸಿದ್ದಾರೆ. 104 ಶಾಸಕ ಬಲ ಹೊಂದಿರುವ ಬಿಜೆಪಿ ಉಪ ಚುನಾವಣೆಯಲ್ಲಿ 2 ಸ್ಥಾನ ಜಯಿಸಿದರೆ ಸರ್ಕಾರ ರಚನೆ ಕಾರ್ಯ ಚುರುಕಾಗಿಸಬಹುದು ಎಂಬುದನ್ನು ಅರಿತಿರುವ ಕಾಂಗ್ರೆಸ್, ಶಾಸಕರನ್ನು ಹಿಡಿದಿಟ್ಟುಕೊಳ್ಳಲು ಶತಾಯಗತಾಯ ಯತ್ನಿಸುತ್ತಿದೆ. ಅನಿವಾರ್ಯವಾದರೆ ಪಕ್ಷ ಬಿಡಲು ಹೊರಡುವವರಿಗೆ ಸಚಿವ ಸ್ಥಾನದ ಭರವಸೆ ನೀಡಿ, ಈಗಾಗಲೇ ಕಾಂಗ್ರೆಸ್​ಗೆ ರಾಜೀನಾಮೆ ನೀಡಲು ಮುಂದಾಗಿರುವ ರಮೇಶ್ ಜಾರಕಿಹೊಳಿ ಬಳಗದ ಸಂಖ್ಯೆ 2ಕ್ಕಿಂತ ಹೆಚ್ಚಾಗದಂತೆ ನೋಡುವ ಅವಕಾಶ ನಮಗಿದೆ ಎಂಬುದು ಕೈ ನಾಯಕರ ಅಭಿಪ್ರಾಯ.

ದೇವೇಗೌಡರಿಂದ ಟೆಂಪಲ್ ರನ್

ಜನ್ಮದಿನದ ಪ್ರಯುಕ್ತ ಶನಿವಾರವಷ್ಟೇ ತಿರುಪತಿಗೆ ತೆರಳಿದ್ದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಸೋಮವಾರ ತಮಿಳುನಾಡಿನ ದೇವಸ್ಥಾನಕ್ಕೆ ತೆರಳಿದ್ದಾರೆ. ಬೆಂಗಳೂರಿನಿಂದ ವಿಮಾನದಲ್ಲಿ ಪತ್ನಿ ಚೆನ್ನಮ್ಮ, ಪುತ್ರ ಎಚ್.ಡಿ. ರೇವಣ್ಣ ಸಹಿತ ತಮಿಳುನಾಡಿಗೆ ತೆರಳಿದ ಅವರು, ತಿರುವರೂರು ಜಿಲ್ಲೆಯ ರಾಜಗೋಪಾಲಸ್ವಾಮಿ ಮತ್ತು ಭಾಸ್ಕರ ದೇವಸ್ಥಾನಕ್ಕೆ ಭೇಟಿ ನೀಡಿದರು. ಬಳಿಕ ಶ್ರೀರಂಗಂನ ರಂಗನಾಥಸ್ವಾಮಿ ದರ್ಶನ ಪಡೆದರು. ಕರ್ನಾಟಕದ ಅಣೆಕಟ್ಟೆಗಳಲ್ಲೇ ನೀರಿಲ್ಲ, ಈ ಸಲ ಮುಂಗಾರು ಮಳೆ ಉತ್ತಮವಾಗಿದ್ದರಷ್ಟೇ ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಸಾಧ್ಯ ಎಂದು ರೇವಣ್ಣ ಹೇಳಿದ್ದಾರೆ.

Leave a Reply

Your email address will not be published. Required fields are marked *