ಸಿನಿಮಾ

ಬಿಆರ್‌ಟಿಎಸ್ ಕಿರಿಕಿರಿ ಮುಗಿಯದ ಕಾಮಗಾರಿ

ಬಸವರಾಜ ಇದ್ಲಿ ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ಮಧ್ಯೆ ಸಂಚರಿಸುವ ಪ್ರಯಾಣಿಕರು, ಸಾರ್ವಜನಿಕರ ವಾಹನಗಳಿಗೆ ಕಿರಿಕಿರಿ ತಪ್ಪುವುದಿಲ್ಲ ಎಂದು ಕಾಣುತ್ತದೆ.

ಕಳೆದೊಂದು ದಶಕದಿಂದ ಆರಂಭವಾಗಿರುವ ರಸ್ತೆ ಕಾಮಗಾರಿ ನಿರಂತರವಾಗಿ ನಡೆಯುತ್ತಿದ್ದು, ನಿತ್ಯವೂ ನರಕದ ಅನುಭವವನ್ನು ಇಲ್ಲಿಯೇ ಮಾಡಿಸಲಾಗುತ್ತಿದೆ.


ಇದಕ್ಕೆಲ್ಲ ಮುಖ್ಯ ಕಾರಣ, ಹುಬ್ಬಳ್ಳಿ -ಧಾರವಾಡ ಬಿಆರ್‌ಟಿಎಸ್ ಕಂಪನಿಯ ಮುಗಿಯದ ಕಾಮಗಾರಿಗಳು. ದಶಕದಿಂದ ಅವಳಿ ನಗರ ಮಧ್ಯೆ ರಸ್ತೆ ಕಾಮಗಾರಿ ನಡೆಯುತ್ತಿದ್ದು, ನಿತ್ಯ ಒಂದಿಲ್ಲೊಂದು ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ.

ಅವಳಿ ನಗರದಲ್ಲಿ ಯೋಜನೆಯೊಂದರ ಕಾಮಗಾರಿಗಳನ್ನು ಇಷ್ಟು ಸುದೀರ್ಘ ಸಮಯದವರೆಗೆ ನಡೆಸುತ್ತಿರುವುದು ಇದೇ ಮೊದಲು. ಇದು ಅವಳಿನಗರದ ಜನರಿಗೆ ತೀವ್ರ ತೊಂದರೆ ಕೊಡುತ್ತಿದೆ.

ಬಿಆರ್‌ಟಿಎಸ್ ಯೋಜನೆ ಜಾರಿಯಾದಾಗಿನಿಂದ ಅವಳಿನಗರವೇ ಇಬ್ಭಾಗವಾಗಿ ಹೋಗಿದೆ. ಚಿಗರಿ ಕಾರಿಡಾರ್‌ನಿಂದಾಗಿ ಎರಡೂ ಬದಿಯ ಜನರು ಅತಂತ್ರರಾಗಿದ್ದಾರೆ. ಯಾರೂ ಸುಲಭವಾಗಿ ಅತ್ತಿಂದಿತ್ತ, ಇತ್ತಿಂದತ್ತ ಹೋಗಲು ಸಾಧ್ಯವಿಲ್ಲ. ಚಿಗರಿ ಬಸ್ ಹತ್ತಲು ನಿಲ್ದಾಣಗಳಿಗೆ ಹೋಗುವುದೂ ಸಾಹಸದ ಕೆಲಸವಾಗಿದೆ.


2012ರಲ್ಲಿ ಬಿಆರ್‌ಟಿಎಸ್ ಯೋಜನೆ ಜಾರಿಗೆ ಕಂಪನಿ ಸ್ಥಾಪನೆಯಾಯಿತು. ಆರಂಭದ ಪತ್ರ ವ್ಯವಹಾರದ ನಂತರ 2013-14ರ ವೇಳೆಗೆ ಕಾರಿಡಾರ್ ಕಾಮಗಾರಿ ಆರಂಭವಾಯಿತು. ಅಂದಿನಿಂದ ಇಂದಿನವರೆಗೂ ಎಂಟು ಪಥದ ರಸ್ತೆಯುದ್ದಕ್ಕೂ ಅವಳಿನಗರ ಮಧ್ಯೆ ಅಲ್ಲಲ್ಲಿ ಕೆಲಸಗಳು ನಡೆಯುತ್ತಲೇ ಇವೆ. ಕಾಲಮಿತಿಯಲ್ಲಿ ಕೆಲಸ ಕೈಗೊಳ್ಳದೆ ಇರುವುದು ಈ ಸಮಸ್ಯೆಗಳಿಗೆ ಕಾರಣವಾಗಿದೆ.


2015ರಲ್ಲಿ ಮುಗಿಯಬೇಕಿದ್ದ ಈ ಕಾಮಗಾರಿಯು ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ 2018ರ ಅಕ್ಟೋಬರ್ ವೇಳೆಗೆ ಕನಿಷ್ಠ ಪಕ್ಷ ಪ್ರಾಯೋಗಿಕ ಬಸ್ ಸಂಚಾರ ಆರಂಭಿಸಬೇಕೆಂದು ಅಂದಿನ ಬಿಆರ್‌ಟಿಎಸ್ ಎಂಡಿ ರಾಜೇಂದ್ರ ಚೋಳನ್ ಆಲೋಚನೆ ಮಾಡಿದರು. ಅದರಂತೆ 2018 ಅಕ್ಟೋಬರ್ 2ರಂದು ಪ್ರಾಯೋಗಿಕ ಸಂಚಾರ ಆರಂಭವಾಯಿತು. ಜತೆಜತೆಯಲ್ಲೇ ಉಳಿದ ಕಾಮಗಾರಿಗಳನ್ನು ಮಾಡಲು ಕಂಪನಿ ಅಣಿಯಾಯಿತು.


ಅಲ್ಲಿಂದ ಇಲ್ಲಿಯವರೆಗೆ ಸುಮಾರು ಐದು ವರ್ಷ ಕಳೆಯುತ್ತ ಬಂದರೂ ಇನ್ನೂ ಕೆಲಸಗಳು ಕುಂಟುತ್ತ ಸಾಗಿವೆ. ಚಿಗರಿ ಬಸ್ ಅವಳಿನಗರ ಮಧ್ಯೆ ತ್ವರಿತ ಸಾರಿಗೆ ಸೇವೆಯನ್ನು ನೀಡುತ್ತಿದೆ. ಆದರೆ, ಉಳಿದ ಕೆಲಸಗಳು ವೇಗ ಪಡೆದುಕೊಂಡಿಲ್ಲ. ಯಾವುದೇ ಯೋಜನೆ ಇರಲಿ ಅದರ ಕೆಲಸವನ್ನು ಒಂದೇ ಸಲ ಮುಗಿಸಿ ಬಿಟ್ಟರೆ ಜನರು ನಿರಾಳವಾಗಿ ಓಡಾಡಬಹುದು. ಆದರೆ, ಅಧಿಕಾರಿಗಳ ಅನಾದರದಿಂದಾಗಿ ಜನರು ನಿತ್ಯವೂ ಹೈರಾಣಾಗುತ್ತಿದ್ದಾರೆ.


ಯೋಜನೆಗೆ ಖರ್ಚು ಎಷ್ಟು?
ಅವಳಿನಗರದ ಮೊದಲ ಹಾಗೂ ಬೃಹತ್ ಕಾರಿಡಾರ್ ಯೋಜನೆ ಇದಾಗಿದ್ದು, ವಿಶ್ವ ಬ್ಯಾಂಕ್ ನೆರವಿನೊಂದಿಗೆ 1,000 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಜಾರಿ ಮಾಡಲಾಗಿದೆ. ಇದರಲ್ಲಿ 303 ಕೋಟಿ ರೂ. ಭೂಸ್ವಾಧೀನಕ್ಕೆ ಖರ್ಚು ಮಾಡಲಾಗಿದೆ. ಆದರೂ, ಕೆಲವೆಡೆ ಇನ್ನೂ ಸ್ವಾಧೀನ ಪ್ರಕ್ರಿಯೆಗಳು ನಡೆಯುತ್ತಿವೆ.


ಏನೇನು ಕಾಮಗಾರಿ?
ಹುಬ್ಬಳ್ಳಿ- ಧಾರವಾಡ ಮಧ್ಯೆ 44 ಮೀಟರ್ ಅಗಲದ 22 ಕಿಮೀ ಉದ್ದದ ಎಂಟು ಪಥದ ಕಾರಿಡಾರ್ ಇದ್ದು, ಸಿಟಿ ವ್ಯಾಪ್ತಿಯ ಧಾರವಾಡ ಜುಬಿಲಿ ಸರ್ಕಲ್‌ನಿಂದ ಗಾಂಧಿನಗರವರೆಗೆ ಹಾಗೂ ಹುಬ್ಬಳ್ಳಿಯ ನವೀನ ಹೋಟೆಲ್‌ನಿಂದ ಹೊಸೂರವರೆಗೆ 35 ಮೀಟರ್ ಅಗಲದ ರಸ್ತೆ ನಿರ್ಮಿಸಲಾಗಿದೆ. 22 ಕಿಮೀ ಉದ್ದದ ರಸ್ತೆಯಲ್ಲಿ 24 ಜಂಕ್ಷನ್‌ಗಳನ್ನು ನಿರ್ಮಿಸಲಾಗಿದೆ. ಈ ಜಂಕ್ಷನ್‌ಗಳಲ್ಲಿ ಇದೀಗ ಕೈಗೊಂಡಿರುವ ಸುಧಾರಣೆ ಕಾರ್ಯಗಳು ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಇದರ ಜತೆಗೆ ಯೋಜನೆಯ ಕಾಮಗಾರಿ ಅಲ್ಲಲ್ಲಿ ಅರ್ಧಂಬರ್ಧ ಆಗಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇಟ್ಟಿಗೆ, ಕಲ್ಲು, ಉಸುಕು ಇತ್ಯಾದಿಗಳನ್ನು ರಸ್ತೆಯಲ್ಲಿ ಇಡಲಾಗಿದೆ. ತೆಗ್ಗು ತೋಡಿ ಹಾಗೇ ಬಿಡಲಾಗಿದೆ. ಇದರಿಂದ ಆಗಾಗ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಿವೆ. ಜಂಕ್ಷನ್‌ಗಲ್ಲಿ ಮಿಶ್ರ ಪಥದ ಮಾರ್ಗ ಮೊದಲೇ ಕಿರಿದಾಗಿದೆ. ಇದರಲ್ಲಿ ಮತ್ತೆ ಎರಡು ಅಡಿಗಳಷ್ಟು ರಸ್ತೆ ಬಳಸಿಕೊಂಡು ಸಮಸ್ಯೆಯನ್ನು ಹೆಚ್ಚಿಸಲಾಗುತ್ತಿದೆ.


ಕಾಲಮಿತಿ ಇಲ್ಲ


ಬಿಆರ್‌ಟಿಎಸ್‌ನ ಕಾಮಗಾರಿಗಳಿಗೆ ಯಾವುದೇ ಕಾಲಮಿತಿ ಇಲ್ಲದೆ ಇರುವುದರಿಂದ ಸಮಸ್ಯೆಗೆ ಕೊನೇ ಇಲ್ಲ ಎಂಬಂತಾಗಿದೆ. ಅಧಿಕಾರಿಗಳಿಗೆ ಕಾಮಗಾರಿ ಮುಗಿಸಲು ಯಾವುದೇ ಕಾಲಮಿತಿ ಎಂಬುದು ಇಲ್ಲವಾಗಿದೆ. ಜನರ ಸಮಸ್ಯೆಗಳು ಇವರಿಗೆ ಅರ್ಥವಾಗದಂತಾಗಿದೆ.


ಬಿಆರ್‌ಟಿಎಸ್ ಕಾರಿಡಾರ್‌ನ ಜಂಕ್ಷನ್‌ಗಳಲ್ಲಿ ಸುರಕ್ಷತೆ ಹೆಚ್ಚಿಸಲು ಕೆಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅನುದಾನ ಹೇಗೆ ಬರುತ್ತದೆಯೋ ಹಾಗೆ ಕೆಲಸ ಕೈಗೆತ್ತಿಕೊಳ್ಳುತ್ತೇವೆ. ನವಲೂರು ಸೇತುವೆ 2023ರ ವರ್ಷಾಂತ್ಯದ ವೇಳೆಗೆ ಮುಗಿಯಲಿದೆ. ಈಗಿರುವ ್ಲೈಓವರ್‌ಗಳ ಅಡಿಯಲ್ಲಿ ಸಮತಟ್ಟು ಮಾಡಿ ಅಭಿವೃದ್ಧಿ ಪಡಿಸಲಾಗುತ್ತಿದೆ.
— ಭರತ್ ಎಸ್., ಬಿಆರ್‌ಟಿಎಸ್ ಎಂಡಿ

ಹುಬ್ಬಳ್ಳಿ-ಧಾರವಾಡ ಮಧ್ಯದ ಬಿಆರ್‌ಟಿಎಸ್ ಕಾರಿಡಾರ್‌ನಲ್ಲಿನ ಹಲವಾರು ಸಮಸ್ಯೆಗಳು ಜನರ ಜೀವ ಹಿಂಡುತ್ತಿವೆ. ವೃದ್ಧರು, ಗರ್ಭಿಣಿಯರು, ಮಕ್ಕಳು ರಸ್ತೆ ದಾಟಿ, ಬಿಆರ್‌ಟಿಎಸ್ ಬಸ್ ತಲುಪಬೇಕೆಂದರೆ ಹರಸಾಹಸ ಪಡಬೇಕು. ಇದರ ಮಧ್ಯೆ ಈ ಕಾರಿಡಾರ್‌ನಲ್ಲಿ ಒಂದಿಲ್ಲೊಂದು ಕಾಮಗಾರಿಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಇದೀಗ, ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಹೊಸ ಸರ್ಕಾರವಾದರೂ ಈ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲಿ ಎಂಬ ಆಶಯ ಜನರದ್ದು. ಈ ನಿಟ್ಟಿನಲ್ಲಿ ಬಿಆರ್‌ಟಿಎಸ್ ಅವಾಂತರಗಳ ಬಗ್ಗೆ ‘ವಿಜಯವಾಣಿ’ ಸರಣಿ ವಿಶೇಷ ಲೇಖನಗಳನ್ನು ಪ್ರಕಟಿಸುತ್ತಿದೆ.

Latest Posts

ಲೈಫ್‌ಸ್ಟೈಲ್