ಬಿಆರ್​ಟಿಎಸ್ ಬಸ್ ಪೂರ್ಣ ಕಾರ್ಯಾಚರಣೆ 24ರಿಂದ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಧ್ಯೆ ಪ್ರಾಯೋಗಿಕವಾಗಿ ಸಂಚರಿಸುತ್ತಿರುವ ಬಿಆರ್​ಟಿಎಸ್ ಬಸ್ ಅ. 24ರಿಂದ ಪರಿಪೂರ್ಣವಾಗಿ ಕಾರ್ಯಾಚರಣೆ ಪ್ರಾರಂಭಿಸಲಿದೆ.

ಇಲ್ಲಿನ ಅಂಬೇಡ್ಕರ್ ವೃತ್ತದಿಂದ ಉಣಕಲ್​ವರೆಗೆ ಬಿಆರ್​ಟಿಎಸ್ ಬಸ್​ಗಳ ಪ್ರಾಯೋಗಿಕ ಸಂಚಾರ ಹಾಗೂ ಕಾಮಗಾರಿ ಪರಿಶೀಲಿಸಿದ ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ದರ್ಪಣ ಜೈನ್ ನಗರದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.

ಬಿಆರ್​ಟಿಎಸ್ ಡಿಪೋ, ಟರ್ವಿುನಲ್, ಬಸ್ ನಿಲ್ದಾಣ, ಸೇರಿ ಶೇ. 99 ಕಾಮಗಾರಿಗಳು ಪೂರ್ಣಗೊಂಡಿವೆ. ರೋಡ್ ಕಾರಿಡಾರ್​ನ ಶೇ.95 ಕಾಮಗಾರಿ ಪೂರ್ಣಗೊಂಡಿದ್ದು, ಬ್ಯಾರಿಕೇಡ್ ಅಳವಡಿಕೆ, ಫುಟ್​ಪಾತ್ ಹಾಗೂ ವಿವಿಧ ರಸ್ತೆಗಳು ಸೇರುವ ಜಾಗಗಳಲ್ಲಿ ಕೆಲಸ ಬಾಕಿ ಇದೆ. ಬಾಕಿ ಕೆಲಸಗಳನ್ನು ಅ. 24ರೊಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.

ಸುಮಾರು 900 ಕೋಟಿ ರೂ. ವೆಚ್ಚದಲ್ಲಿ ಬಿಆರ್​ಟಿಎಸ್ ಕಾಮಗಾರಿ ಕೈಗೊಳ್ಳಲಾಗಿದೆ. ಇದರಲ್ಲಿ 350 ಕೋಟಿ ರೂ. ಭೂಸ್ವಾಧೀನಕ್ಕಾಗಿ ಖರ್ಚು ಮಾಡಿದ್ದು, ಉಳಿದ 550 ಕೋಟಿ ರೂ.ಗಳನ್ನು ಬಸ್ ನಿಲ್ದಾಣ, ರಸ್ತೆ, ಡಿಪೋ, ಟ್ರಾಫಿಕ್ ಸಿಸ್ಟಮ್ ಅಳವಡಿಕೆ ಹಾಗೂ 130 ಬಸ್​ಗಳ ಖರೀದಿಗೆ ವ್ಯಯಿಸಲಾಗಿದೆ.

ಹಂತ ಹಂತವಾಗಿ ಎಲ್ಲ ಬಸ್​ಗಳನ್ನು ಹುಬ್ಬಳ್ಳಿ-ಧಾರವಾಡದ ಮಧ್ಯೆ ಸಂಚಾರಕ್ಕೆ ಇಳಿಸಲಾಗುವುದು. ತ್ವರಿತ ಹಾಗೂ ಸಾಮಾನ್ಯ ಸೇವೆಗಳನ್ನು ಒದಗಿಸಲಾಗುತ್ತಿದ್ದು, ತ್ವರಿತ ಸೇವೆಯ ಬಸ್​ಗಳು ಹುಬ್ಬಳ್ಳಿಯ ಚನ್ನಮ್ಮ ವೃತ್ತದಿಂದ ಧಾರವಾಡ ಜುಬಿಲಿ ಸರ್ಕಲ್​ವರೆಗೆ 30 ನಿಮಿಷದ ಅವಧಿಯಲ್ಲಿ ತಲುಪಲಿವೆ. ಸಾಮಾನ್ಯ ಸೇವೆಯ ಬಸ್​ಗಳು ಎಲ್ಲ ನಿಲ್ದಾಣಗಳಲ್ಲಿ ನಿಲುಗಡೆಯೊಂದಿಗೆ 45 ನಿಮಿಷದಲ್ಲಿ ದೂರವನ್ನು ಕ್ರಮಿಸಲಿವೆ.

ಸಿಬಿಟಿ, ರೈಲ್ವೆ ನಿಲ್ದಾಣ ಹಾಗೂ ಬಿಎಸ್​ಎನ್​ಎಲ್ ಕಚೇರಿಯಿಂದ ಪ್ರತ್ಯೇಕವಾಗಿ ಬಸ್​ಗಳು ಹೊರಡಲಿವೆ. ಪೂರ್ಣ ಪ್ರಮಾಣದಲ್ಲಿ ಬಿಆರ್​ಟಿಎಸ್ ಬಸ್​ಗಳ ಸಂಚಾರ ಆರಂಭವಾದ ನಂತರ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಗಳ ನಗರ ಘಟಕದ ಬಸ್​ಗಳ ಸಂಚಾರವನ್ನು ಸ್ಥಗಿತಗೊಳಿಸಲಾಗುವುದು.

ಮಹಾನಗರ ಪಾಲಿಕೆ ವತಿಯಿಂದ ಸುಮಾರು 3.50 ಕೋಟಿ ರೂ. ವೆಚ್ಚದಲ್ಲಿ ಚನ್ನಮ್ಮ ವೃತ್ತ, ಸರ್ ಸಿದ್ದಪ್ಪ ಕಂಬಳಿ ರಸ್ತೆ ಹಾಗೂ ಸಿಬಿಟಿ ರಸ್ತೆಗಳನ್ನು ಮೆಲ್ದರ್ಜೆಗೆ ಏರಿಸಲು ಯೋಜನೆ ರೂಪಿಸಲಾಗಿದೆ ಎಂದು ಜೈನ್ ವಿವರಿಸಿದರು.

ವಾಕರಸಾ ಸಂಸ್ಥೆ ಹಾಗೂ ಬಿಆರ್​ಟಿಎಸ್ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಸಾರಿಗೆ ವಿಭಾಗೀಯ ನಿಯಂತ್ರಾಣಾಧಿಕಾರಿ ವಿವೇಕಾನಂದ ವಿಶ್ವ ಜ್ಞ, ಆಶೋಕ್ ಪಾಟೀಲ್, ಬಿಆರ್​ಟಿಎಸ್ ಡಿಜಿಎಂ ಬಸವರಾಜ ಕೇರಿ ಮತ್ತಿತರರು ಇದ್ದರು.

ದರ ನಿಗದಿಪಡಿಸಿಲ್ಲ: ಹುಬ್ಬಳ್ಳಿಗೆ ಬರುವ ದೂರದ ಮಾರ್ಗದ ಬಸ್​ಗಳನ್ನು ಗೋಕುಲ ರಸ್ತೆಯ ಹೊಸ ಬಸ್​ನಿಲ್ದಾಣ ಹಾಗೂ ಹೊಸೂರಿನ ಬಿಆರ್​ಟಿಎಸ್ ನಿಲ್ದಾಣದಲ್ಲಿ ನಿಲುಗಡೆಗೊಳಿಸುವ ಕುರಿತು ರ್ಚಚಿಸಲಾಗುತ್ತಿದೆ ಎಂದು ದರ್ಪಣ ಜೈನ್ ತಿಳಿಸಿದರು.

ಹೊಸೂರು ನಿಲ್ದಾಣದ ಎದುರಿನ ರಸ್ತೆಯನ್ನು 7 ಮೀ. ಅಗಲಗೊಳಿಸುವ ಕಾಮಗಾರಿಯನ್ನು ಪಿಡಬ್ಲ್ಯುಡಿ ರಾಷ್ಟ್ರೀಯ ಹೆದ್ದಾರಿ ಘಟಕ ಪ್ರಾರಂಭಿಸಲಿದೆ ಎಂದು ಹೇಳಿದರು. ಬಿಆರ್​ಟಿಎಸ್ ಬಸ್​ನ ಪ್ರಯಾಣಿಕರ ದರ ಇನ್ನೂ ನಿಗದಿಪಡಿಸಿಲ್ಲ. ಈ ಬಸ್​ಗಳು ಹವಾನಿಯಂತ್ರಿತ ವ್ಯವಸ್ಥೆ ಹೊಂದಿದ್ದು, ಸೂಕ್ತ ದರ ನಿಗದಿಪಡಿಸಲಾಗುವುದು ಎಂದು ತಿಳಿಸಿದರು.

ಬಿಆರ್​ಟಿಎಸ್ ಬಸ್ ಸಂಚಾರ ನಿರ್ವಹಣೆಯನ್ನು ವಾಯವ್ಯ ಸಾರಿಗೆ ಸಂಸ್ಥೆ ನೋಡಿಕೊಳ್ಳಲಿದೆ. ಇದಕ್ಕಾಗಿ ಪ್ರತ್ಯೇಕ ನಗರ ಘಟಕ ರಚಿಸಲಾಗುವುದು. ಅವಳಿ ನಗರದ ಮಧ್ಯೆ ಈವರೆಗೆ ಸಂಚರಿಸುತ್ತಿದ್ದ ಸಾರಿಗೆ ಬಸ್​ಗಳ ಸೇವೆಯನ್ನು ಇತರ ಪ್ರದೇಶಗಳಿಗೆ ಒದಗಿಸಲಾಗುವುದು ಎಂದು ಹೇಳಿದರು.

ಧಾರವಾಡ ತಲುಪಿದ ಚಿಗರಿ: ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದಿಂದ ಶ್ರೀನಗರದವರೆಗೆ ಪ್ರಾಯೋಗಿಕ ಸಂಚಾರ ಕೈಗೊಂಡಿರುವ ಬಿಆರ್​ಟಿಎಸ್ ‘ಚಿಗರಿ’ ಬಸ್, ಶನಿವಾರ ಸಂಜೆ ಧಾರವಾಡವರೆಗೆ ಆಗಮಿಸಿತು. ದರ್ಪಣ ಜೈನ್, ಸಂಸ್ಥೆಯ ಅಧಿಕಾರಿಗಳು, ಗುತ್ತಿಗೆದಾರರು ಬಸ್​ನಲ್ಲೇ ಆಗಮಿಸಿದರು.

ಹಳೇ ಬಸ್ ನಿಲ್ದಾಣ ಬಳಿಯ ಮಿತ್ರ ಸಮಾಜ ಕ್ಲಬ್ ಬಸ್ ನಿಲ್ದಾಣಕ್ಕೆ ಬಿಆರ್​ಟಿಎಸ್ ಬಸ್ ಆಗಮಿಸುತ್ತಿದ್ದಂತೆ ಸಾರ್ವಜನಿಕರು ಸುತ್ತುವರಿದರು. ಹೊಸ ಮಾದರಿಯ ‘ಚಿಗರಿ’ ಬಸ್ ವೀಕ್ಷಿಸಿದರು. ಕೆಲವರು ಬಸ್ ಏರಿ ಫೋಟೊ ಕ್ಲಿಕ್ಕಿಸಿಕೊಂಡರು.

ಬಸ್ ನಿಲ್ದಾಣ ಕಾಮಗಾರಿ ವೀಕ್ಷಿಸಿದ ದರ್ಪಣ ಜೈನ್, ಗುತ್ತಿಗೆದಾರರಿಗೆ ಕೆಲ ಸಲಹೆಗಳನ್ನು ನೀಡಿದರು.

ಅ. 10ರಿಂದ ರಾಯಾಪುರವರೆಗೆ ಬಸ್ ಸಂಚರಿಸಲಿವೆ ಎಂದು ತಿಳಿಸಿದ ದರ್ಪಣ ಜೈನ್, ಬಿಆರ್​ಟಿಎಸ್ ರಸ್ತೆ, ಬಸ್ ಶೆಲ್ಟರ್ ಹಾಗೂ ನಿಲ್ದಾಣ, ಡಿಪೋಗಳ ಕಾಮಗಾರಿ ವೇಗ ಪಡೆದಿವೆ ಎಂದು ಜೈನ್ ಮೆಚ್ಚುಗೆ ವ್ಯಕ್ತಪಡಿಸಿದರು.

ಡಿಸಿ ಕಚೇರಿಗೂ ಬಂತು: ಬಿಆರ್​ಟಿಎಸ್ ಬಸ್ ನಿಲ್ದಾಣದ ಪರಿಶೀಲನೆಯ ನಂತರ ದರ್ಪಣ ಜೈನ್ ಅವರು ಜಿಲ್ಲಾಡಳಿತದ ಸಭಾಂಗಣದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ‘ಚಿಗರಿ’ ಬಸ್​ನಲ್ಲೇ ಪ್ರಯಾಣಿಸಿದರು. ಜಿಲ್ಲಾಧಿಕಾರಿ ದೀಪಾ ಚೋಳನ್ ಹಾಗೂ ಇತರ ಅಧಿಕಾರಿಗಳು ಬಸ್ ಮುಂದೆ ನಿಂತು ಫೋಟೋ ತೆಗೆಸಿಕೊಂಡರು.

ಬೇಂದ್ರೆ ಖಾಸಗಿ ಸಾರಿಗೆ ಬಸ್ ಸಂಚಾರಕ್ಕೆ ನೀಡಿರುವ ಪರವಾನಗಿ 2019ನೇ ವರ್ಷಕ್ಕೆ ಪೂರ್ಣಗೊಳ್ಳಲಿದೆ. ಈ ಪರವಾನಗಿ ಮುಂದುವರಿಸದಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. 

| ದರ್ಪಣ ಜೈನ್, ಧಾರವಾಡ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ