More

  ಶಾಂತಿಯುತ ಶೇ.64 ಮತದಾನ; ತೆಲಂಗಾಣದಲ್ಲಿ ಬಿಆರ್​ಎಸ್ ಪಕ್ಷಕ್ಕೆ ಹ್ಯಾಟ್ರಿಕ್ ಗೆಲುವಿನ ಕನಸು

  ಹೈದರಾಬಾದ್: ಪಂಚ ರಾಜ್ಯ ಚುನಾವಣೆಗಳ ಸುದೀರ್ಘ ಪ್ರಕ್ರಿಯೆಯ ಕೊನೆಯ ಹಂತವಾಗಿ ಗುರುವಾರ ತೆಲಂಗಾಣದಲ್ಲಿ ಹೊಸ ಸರ್ಕಾರದ ಆಯ್ಕೆಗಾಗಿ ಮತದಾನ ನಡೆದಿದ್ದು, ಶೇ. 64ರಷ್ಟು ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದರು. ಅಲ್ಲಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳನ್ನು ಬಿಟ್ಟರೆ ಚುನಾವಣೆ ಬಹುತೇಕ ಶಾಂತಿಯುತವಾಗಿ ನಡೆಯಿತು. ಇದರೊಂದಿಗೆ ಪಂಚ ರಾಜ್ಯ ಅಸೆಂಬ್ಲಿ ಚುನಾವಣಾ ಕದನಕ್ಕೆ ತೆರೆ ಬಿದ್ದಿದ್ದು ಭಾನುವಾರ ಫಲಿತಾಂಶ ಪ್ರಕಟವಾಗಲಿದೆ.

  ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್​ಎಸ್), ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತುರುಸಿನ ಹಣಾಹಣಿ ನಡೆದಿದ್ದು ಅವುಗಳ ಘಟಾನುಘಟಿ ಮುಖಂಡರು ಪ್ರಚಾರ ನಡೆಸಿದ್ದರು. ತೆಲಂಗಾಣ ರಾಜ್ಯ ರಚನೆಯಾದಾಗಿನಿಂದ ಎರಡೂ ಚುನಾವಣೆಗಳಲ್ಲಿ ಗೆದ್ದು ಬೀಗಿದ್ದ ಬಿಆರ್​ಎಸ್, ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ ಮೊದಲಾದವರು ಸಾಕಷ್ಟು ಬೆವರು ಸುರಿಸಿದ್ದರೂ ಬಿಜೆಪಿ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಬೆಳಗ್ಗೆ 7ಕ್ಕೆ ಆರಂಭವಾದ ಮತದಾನ ಸಂಜೆ 6ರ ವರೆಗೆ ನಡೆಯಿತು. 5 ರಾಜ್ಯಗಳ ಒಟ್ಟು 679 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಅವುಗಳ ಸೋಲುಗೆಲುವಿನ ಲೆಕ್ಕಾಚಾರ ಆರಂಭವಾಗಿದೆ. ಡಿ. 3ರಂದು ಫಲಿತಾಂಶ ಹೊರಬೀಳಲಿದೆ.

  ಸೆಲೆಬ್ರಿಟಿಗಳಿಂದ ಮತದಾನ: ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಮುಂತಾದ ಪ್ರಮುಖ ರಾಜ ಕಾರಣಿಗಳಲ್ಲದೆ ಚಿರಂಜೀವಿ, ಅಲ್ಲು ಅರ್ಜುನ್, ರಾಮ್ ಚರಣ್, ಜೂನಿಯರ್ ಎನ್​ಟಿಆರ್ ಮೊದಲಾದ ನಟರೂ ತೆಲಂಗಾಣದ ಮತದಾನದಲ್ಲಿ ಪಾಲ್ಗೊಂಡರು.

  1,760 ಕೋಟಿ ರೂ. ವಶ: ಪಂಚ ರಾಜ್ಯ ಚುನಾವಣೆಗಳ ವೇಳೆ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಜರುಗಿಸಿದ್ದ ಚುನಾವಣಾ ಆಯೋಗ, ಮತದಾರರಿಗೆ ಆಮಿಷ ಒಡ್ಡಲು ಬಳಸಲಾಗುತ್ತಿದ್ದ ಒಟ್ಟು 1,760 ಕೋಟಿ ರೂ.ಗೂ ಹೆಚ್ಚಿನ ನಗದನ್ನು ವಶಪಡಿಸಿಕೊಂಡಿದೆ.

  ಕೈ ವಿರುದ್ಧ ದೂರು: ತೆಲಂಗಾಣ ಪ್ರಚಾರದಲ್ಲಿ ಕಾಂಗ್ರೆಸ್ ‘ಡೀಪ್​ಫೇಕ್’ ತಂತ್ರಜ್ಞಾನ ಬಳಸಿದೆ ಎಂದು ಆರೋಪಿಸಿ ಬಿಆರ್​ಎಸ್ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ. ಪಕ್ಷದ ಅಧ್ಯಕ್ಷ ಕೆ.ಸಿ.ಆರ್., ಇತರ ಪ್ರಮುಖರು ಹಾಗೂ ಅಭ್ಯರ್ಥಿಗಳನ್ನು ಟಾರ್ಗೆಟ್ ಮಾಡಿ ಸುಳ್ಳು ಕಂಟೆಂಟ್​ಗಳನ್ನು ಕಾಂಗ್ರೆಸ್ ಸೃಷ್ಟಿಸಿತ್ತು ಎಂದು ಬಿಆರ್​ಎಸ್ ಹೇಳಿದೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts