ಕೃಷ್ಣಮೂರ್ತಿ ಪಿ.ಎಚ್., ಮಾಯಕೊಂಡ
ದಾವಣಗೆರೆ ತಾಲೂಕಿನ ಮಾಯಕೊಂಡ ವ್ಯಾಪ್ತಿಯ ಮಳೆಯಾಶ್ರಿತ ಖುಷ್ಕಿ ಜಮೀನುಗಳಲ್ಲಿ ಬೆಳೆಯುವ ಮುಖ್ಯ ಬೆಳೆಯೆಂದರೆ ಮೆಕ್ಕೆಜೋಳ ಮಾತ್ರ. ಅದು ಬಿಟ್ಟರೆ, ಬೋರ್ ಇದ್ದವರು ಅಡಕೆ ಬೆಳೆಯುತ್ತಾರೆ. ಆದರೆ, ಅದೇ ಗುಡ್ಡಗಾಡಿನ ಕಲ್ಲುಮಿಶ್ರಿತ ಜರುಗು ಭೂಮಿಯಲ್ಲಿ ಭರ್ಜರಿ ದಾಳಿಂಬೆ, ಪೇರಲ ಬೆಳೆದು ಯುವ ಸಹೋದರರಿಬ್ಬರು ಮಾದರಿಯಾಗಿದ್ದಾರೆ.
ಹೌದು.. ಮಾಯಕೊಂಡ ಸಮೀಪದ ಎಚ್. ರಾಂಪುರ ಗ್ರಾಮದ ಆರ್.ಬಿ. ಸಿದ್ದೇಶ್ ಹಾಗೂ ಆರ್.ಬಿ. ವೀರೇಶ್ ಸಹೋದರರು ಜರುಗು ಭೂಮಿಯಲ್ಲೂ ಬಹುಬೆಳೆ ಪದ್ಧತಿ ಕೃಷಿ ಲಾಭದಾಯಕ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
ಈ ಭಾಗದ ಒಣ ಭೂಮಿಯಲ್ಲಿ ಬೋರ್‌ವೆಲ್ ನೀರು ಬಳಸಿ ಹೆದ್ನೆ ಗ್ರಾಮದ ರಾಷ್ಟ್ರೀಯ ಕೃಷಿ ಪ್ರಶಸ್ತಿ ವಿಜೇತ ರೈತ ಎಚ್.ಬಿ. ಮುರುಗೇಶಪ್ಪ ಅವರು ಮೊಟ್ಟ ಮೊದಲಬಾರಿಗೆ 2002-03ರಲ್ಲಿ ವೆನಿಲ್ಲಾ, ಕೆಂಪುಬಾಳೆ, ದಾಳಿಂಬೆ ಮತ್ತು ಪೇರಲ ಬೆಳೆದು ಯಶಸ್ಸು ಕಂಡರು.
ಅವರಿಂದ ಪ್ರೇರಿತರಾದ ರೈತರಾದ ಸಿದ್ದೇಶ್ ಮತ್ತು ವೀರೇಶ್ ಎರಡು ಎಕರೆ ಜಮೀನಿನಲ್ಲಿ 105 ಅಡಿ ಅಂತರದಲ್ಲಿ 1500 ಥೈವಾನ್ ಫಿಂಕ್ ವೆರೈಟಿ ಪೇರಲ ಸಸಿ ನಾಟಿ ಮಾಡಿದರು. ಇದು ವಾರ್ಷಿಕ ಎರಡು ಬಾರಿ ಬೆಳೆ ಕಟಾವಿಗೆ ಬರುತ್ತದೆ. 2 ಬೆಳೆಯಿಂದ 20 ಕೆಜಿ ಬಾಕ್ಸ್‌ನಂತೆ ಒಟ್ಟು ಸರಾಸರಿ 2.500ರಿಂದ 3000 ಸಾವಿರ ಬಾಕ್ಸ್ ಇಳುವರಿ ಬರುತ್ತಿದೆ. ಒಂದು ಬಾಕ್ಸ್‌ಗೆ ಕನಿಷ್ಠ 300 ರಿಂದ 500 ರೂ. ಸಿಗುತ್ತದೆ ಎನ್ನುತ್ತಾರೆ ರೈತ ಸಿದ್ದೇಶ್.
ಹಣ್ಣಿಗೆ ಕವರ್, ಕೀಟನಾಶಕ ಸಿಂಪಡಣೆ, ಕಟಾವು ಸೇರಿ 1.5ರಿಂದ 2.5 ಲಕ್ಷ ರೂ. ಖರ್ಚು ತೆಗೆದರೂ 10 ಲಕ್ಷ ರೂ. ಆದಾಯವಿದೆ. ಜತೆಗೆ, ಮಿಶ್ರ ಬೆಳೆಯಾಗಿ ಅಡಕೆ ಸಸಿ ಸಹ ಹಾಕಿದ್ದಾರೆ. 1500 ದಾಳಿಂಬೆ ಸಸಿಗಳನ್ನು 1014 ಅಡಿ ಅಂತರದಲ್ಲಿ ನಾಟಿ ಮಾಡಿದ್ದು, ಪ್ರತಿ ಗಿಡಕ್ಕೆ 40 ಕೆಜಿ ಹಣ್ಣು ಬರುತ್ತಿದ್ದು, ಬೆಳೆಗೆ ಮೆಸ್ ಅಳವಡಿಕೆ, ಕೀಟನಾಶಕ ಇನ್ನೂ ಹಲವಾರು ಖರ್ಚು ಸೇರಿ ಒಟ್ಟು ವಾರ್ಷಿಕ 2 ರಿಂದ 3 ಲಕ್ಷ ರೂ. ಖರ್ಚು ಬಂದರೂ 8 ರಿಂದ 10 ಲಕ್ಷ ರೂ. ಲಾಭವಿದೆ. ಹಾಗಾಗಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಭೂಮಿಯಲ್ಲಿ ಪೇರಲ, ದಾಳಿಂಬೆ ಬೆಳೆಯಲು ತಯಾರಿ ನಡೆಸಿದ್ದೇವೆ ಎಂದು ಮಾಹಿತಿ ನೀಡಿದರು.
ರೈತರು ಮೆಕ್ಕೆಜೋಳ ಬೆಳೆ ಮಾತ್ರ ಅವಲಂಬಿಸದೆ ಬಹು ಬೆಳೆ ಪದ್ಧ್ದತಿ ರೂಡಿಸಿಕೊಳ್ಳಬೇಕು ಮತ್ತು ಕಡಿಮೆ ನೀರಿನಲ್ಲಿ ಬೆಳೆಯುವ, ಅಧಿಕ ಲಾಭ ನೀಡುವ ಬೆಳೆ ಬೆಳೆದಲ್ಲಿ ಆರ್ಥಿಕವಾಗಿ ಸದೃಢರಾಗಬಹುದು.
ಆರ್.ಬಿ. ಸಿದ್ದೇಶ್
- ಪ್ರಗತಿಪರ ಯುವ ರೈತ, ಎಚ್ ರಾಂಪುರ.
ಬಹು ವಾರ್ಷಿಕ ಅಡಕೆ ಬೆಳೆಗೆ ಸಾಕಷ್ಟು ನೀರು ಬೇಕು. ಆದ್ದರಿಂದ ರೈತರು ಕಡಿಮೆ ತೇವಾಂಶದಲ್ಲಿ ಬೆಳೆಯುವ ಸೀಬೆ, ಸೀತಾಲ, ಗೋಡಂಬಿ, ಪೇರಲ, ದಾಳಿಂಬೆ, ಡ್ರ್ತ್ರ್ಯಾಗನ್ ಹಣ್ಣಿನ ಬೆಳೆ ಬೆಳೆದು ಅತ್ಯಧಿಕ ಲಾಭ ಪಡೆಯಬಹುದು. ಈ ಬೆಳೆಗೆ ಎನ್‌ಆರ್‌ಇಜಿಯಲ್ಲಿ ಪ್ರತಿ ಎಕರೆಗೆ ಸರಾಸರಿ 1ರಿಂದ 2 ಲಕ್ಷ ರೂ.ವರೆಗೆ ಸಹಾಯಧನವಿದೆ.
- ರಾಘವೇಂದ್ರ ಪ್ರಸಾದ್
ಜಿಲ್ಲಾ ತೋಟಗಾರಿಕಾ ಉಪ ನಿರ್ದೇಶಕರು. ದಾವಣಗರೆ ಜಿಲ್ಲೆ