More

    ಸಿಡಿಲಿಗೆ ತಮ್ಮ ಬಲಿ-ಅಣ್ಣನಿಗೆ ಗಾಯ

    ಹಾನಗಲ್ಲ: ಸಿಡಿಲು ಬಡಿದು ಕುರಿಗಾಹಿಯೊಬ್ಬ ಮೃತಪಟ್ಟಿದ್ದು, ಮತ್ತೊಬ್ಬ ಗಾಯಗೊಂಡ ಘಟನೆ ತಾಲೂಕಿನ ಮಹರಾಜಪೇಟ ಗ್ರಾಮದಲ್ಲಿ ಮಂಗಳವಾರ ನಡೆದಿದೆ.


    ನಾಗರಾಜ ಲಕ್ಕಪ್ಪ ಮುತ್ನಾಳ(22) ಮೃತಪಟ್ಟ ಯುವಕ. ಈತನ ಸಹೋದರ ಸುರೇಶ ಸೋಮಣ್ಣ ಮುತ್ನಾಳ(25) ತೀವ್ರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸಗೆ ದಾಖಲಿಸಲಾಗಿದೆ.

    ನಾಗರಾಜ ಹಾಗೂ ಸಹೋದರ ಸುರೇಶ ಕುರಿಗಳನ್ನು ಮೇಯಿಸಲು ಹೊಲಕ್ಕೆ ತೆರಳಿದ್ದ ಸಂದರ್ಭದಲ್ಲಿ ಸಂಜೆ ಭಾರಿ ಮಳೆಯೊಂದಿಗೆ ಸಿಡಿಲು ಬಡಿದಿದೆ. ಒಟ್ಟು ಮೂರು ಹಿಂಡಿನಲ್ಲಿದ್ದ ಕುರಿಗಳನ್ನು ಆರು ಜನರು ಮೇಯಿಸಲು ತೆರಳಿದ್ದರು. ಮೃತನ ಶವವನ್ನು ಹಾನಗಲ್ಲಿನ ಸರ್ಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಸಾಗಿಸಲಾಗಿದ್ದು, ತಹಸೀಲ್ದಾರ್ ಶಶಿಧರ ಮಾಡ್ಯಾಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

    ನೆಲಕ್ಕುರುಳಿದ ಮರಗಳು

    ಮಂಗಳವಾರ ಸಂಜೆ ತಾಲೂಕಿನಾದ್ಯಂತ ರಭಸದ ಗಾಳಿಯೊಂದಿಗೆ ಮಳೆ ಸುರಿದಿದೆ. ಗಾಳಿಯ ಹೊಡೆತಕ್ಕೆ ಹಲವು ಮನೆಗಳ ಮೇಲ್ಛಾವಣಿಗಳು ಹಾರಿಹೋಗಿವೆ. ಪಟ್ಟಣದ ಕಂಚಗಾರ ಓಣಿಯಲ್ಲಿ ಇನಾಂದಾರ ಎಂಬುವವರ ಮನೆ ಮೇಲೆ ತೆಂಗಿನಮರ ಬಿದ್ದಿದೆ. ಇದೇ ರಸ್ತೆಯಲ್ಲಿ ತೆಂಗಿನಮರವೊಂದು ವಿದ್ಯುತ್ ಕಂಬದ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಕಂಬ ಮುರಿದು ಪಟ್ಟಣದಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಚಿದಂಬರನಗರದಲ್ಲಿ ಬೃಹತ್ ತೆಂಗಿನಮರವೊಂದು ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ.

    ಗಾಳಿ-ಮಳೆಯಿಂದಾಗಿ ಅಂದಾಜು ಎರಡು ತಾಸು ಜನಜೀವನ ಅಸ್ತವ್ಯಸ್ತಗೊಂಡಿತ್ತು. ಚರಂಡಿಗಳು ತುಂಬಿದ್ದರಿಂದ ರಸ್ತೆಯ ಮೇಲೆಲ್ಲ ಗಟಾರದ ನೀರು ಹರಿಯಿತು. ಮಳೆಯೊಂದಿಗೆ ಕೆಲಹೊತ್ತು ಆಲಿಕಲ್ಲುಗಳೂ ಸುರಿದವು. ಕಂಚಿನೆಗಳೂರು ರಸ್ತೆಯಲ್ಲಿ ಮರ ಬಿದ್ದಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts