ಉಪನೋಂದಣಿ ಕಚೇರಿಯಲ್ಲಿ ದಲ್ಲಾಳಿ ಹಾವಳಿ

< ಶಂಕರನಾರಾಯಣ ಸಬ್ ರಿಜಿಸ್ಟಾರ್ ಕಚೇರಿ ಅವ್ಯವಸ್ಥೆ * ಹಣವಿಲ್ಲದೆ ಕೆಲಸ ಆಗಲ್ಲ>

ಶ್ರೀಪತಿ ಹೆಗಡೆ ಹಕ್ಲಾಡಿ, ಕುಂದಾಪುರ

ಶಂಕರನಾರಾಯಣ ಉಪನೋಂದಣಿ ಕಚೇರಿಗೆ ಕಡಿದಾದ ದಾರಿಯಲ್ಲಿ ಹೋಗುವುದೇ ಕಷ್ಟ, ಕೆಲಸ ಮಾಡಿಸಿಕೊಳ್ಳುವುದು ಇನ್ನೂ ಕಷ್ಟ! ಬೆಟ್ಟಹತ್ತಿ ಏದುಸಿರು ಬಿಡುತ್ತ ಹೋದರೆ ಸುಧಾರಿಸಿಕೊಳ್ಳುವುದಕ್ಕೂ ಸ್ಥಳವಿಲ್ಲದ ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ದಳ್ಳಾಳಿಗಳದ್ದೇ ದರ್ಬಾರ್. ಹಣವಿದ್ದರೆ ಮಾತ್ರ ಕೆಲಸ ಸಾಧ್ಯ ಎನ್ನುವ ಪರಿಸ್ಥಿತಿ!

ದಲ್ಲಾಳಿಗಳಿಗೆ ರಹದಾರಿ: ನೋಂದಣಿ ಕಚೇರಿಯಲ್ಲಿ ಯಾವುದೇ ಸೇವೆಗೂ ಫಾರ್ಮ್ ನಂಬರ್ 22 ರಲ್ಲಿಯೇ ಅರ್ಜಿ ಸಲ್ಲಿಸಬೇಕೆಂದು ಕಾನೂನು ಇದೆ. ಇದನ್ನು ಕಚೇರಿ ಸಿಬ್ಬಂದಿ ಒದಗಿಸಬೇಕೆಂಬ ನಿಯಮವಿದ್ದರೂ ಫಾರ್ಮ್ ನಂಬರ್ 22 ಕೇಳಿದ ಗ್ರಾಹಕರಿಗೆ ಸಿಬ್ಬಂದಿಗಳೇ ದಲ್ಲಾಳಿ ಹತ್ತಿರ ಹೋಗಲು ಪರೋಕ್ಷವಾಗಿ ಸೂಚಿಸುತ್ತಾರೆ ಎಂಬುದು ನಾಗರಿಕರ ಆರೋಪ.

ಕಚೇರಿ ದಾರಿ ಅಪಾಯಕಾರಿ!: ಶಂಕರನಾರಾಯಣ ಪೇಟೆ ಪ್ರವೇಶದ ಬಳಿ ಬೆಟ್ಟದ ತುದಿಯಲ್ಲಿರುವ ಉಪನೋಂದಣಿ ಕಚೇರಿ ಬ್ರಿಟಿಷರ ಕಾಲದ್ದು. ಹಿಂದಿನ ಬ್ರಹ್ಮಾವರ, ಕುಂದಾಪುರ ಮತ್ತು ಬೈಂದೂರು ಕ್ಷೇತ್ರದ 42 ಗ್ರಾಮಗಳನ್ನು ಕೇಂದ್ರವಾಗಿಟ್ಟುಕೊಂಡು 1900ರಲ್ಲಿ ಆರಂಭವಾಗಿದ್ದು, ರಸ್ತೆ ಮಟ್ಟದಿಂದ 60 ಅಡಿಗೂ ಮಿಕ್ಕಿ ಎತ್ತರದಲ್ಲಿ ಕಚೇರಿ ಇದೆ.

ಕಚೇರಿ ಗುಡ್ಡದ ದಾರಿ ಅತ್ಯಂತ ಅಪಾಯಕಾರಿ. ಜಾರುವ ಕಡಿದಾದ ತಿರುವುಗಳ ರಸ್ತೆ ಹೊಂದಿದ್ದು, ಇಕ್ಕೆಲಗಳಲ್ಲಿ ಪೊದೆ ಬೆಳೆದಿದೆ. ಕೆಲವೊಮ್ಮೆ ವಾಹನಗಳು ಮೇಲೆ ಹತ್ತದೆ, ಹಿಂದೆ ಬರುತ್ತವೆ! ಕಚೇರಿ ಕಿಷ್ಕಿಂದೆಯಂತಿದ್ದು, ಇಬ್ಬರು ಬಿಟ್ಟು ಮೂರನೆಯವರು ಬಂದರೆ ಕಚೇರಿ ಹೊರಗೆ ಬಿಸಿಲಲ್ಲಿ ನಿಲ್ಲಬೇಕು. ಜನ ಕೂರುವ ಜಾಗದಲ್ಲಿ ಕಚೇರಿ ಸಾಮಾನು, ವಿದ್ಯುತ್ ಬ್ಯಾಟರಿ ಸ್ಟಾಕ್ ಇಡಲಾಗಿದೆ.

ಅವ್ಯವಸ್ಥೆಗೆ ಶಾಸಕರು ಗರಂ: ಶಂಕರನಾರಾಯಣ ಉಪನೋಂದಣಿ ಕಚೇರಿಯಲ್ಲಿನ ವ್ಯಾಪಕ ಲಂಚಾವತರದಿಂದ ಹೈರಾಣಾದ ಜನಸಾಮಾನ್ಯರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಅವರಿಗೆ ದೂರು ನೀಡಿದ್ದರ ಪರಿಣಾಮ ಶಾಸಕರು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿ, ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಚೇರಿಗೆ ಬರುವವರಿಗೆ ಶೌಚಗೃಹ ಹಾಗೂ ಕೂರಲು ಸೂಕ್ತ ವ್ಯವಸ್ಥೆ ಮಾಡಿಕೊಡುವಂತೆ ಶಾಸಕರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದು, ಜನರಿಂದ ಮತ್ತೆ ಯಾವುದೇ ದೂರು ಬಂದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಲಂಚಾವತಾರ, ಸಾವಿರದಲ್ಲೇ ವ್ಯವಹಾರ!: ಜನರಿಗೆ ಅತೀ ಅಗತ್ಯವಿರುವ 15 ವರ್ಷದ ಇಸಿ ಪಡೆಯಲು ಸರ್ಕಾರದ ಶುಲ್ಕ 180 ರೂ., ಆದರೆ ದಲ್ಲಾಳಿ ಮುಖಾಂತರ 800 ರೂ.! ಹಳೇ ಭೂ ದಾಖಲೆ ಪಡೆಯಲು ಸರ್ಕಾರಿ ಶುಲ್ಕ ಪ್ರತೀ ಪುಟಕ್ಕೆ 35 ರೂ, ದಲ್ಲಾಳಿ ಮುಖಾಂತರ 150 ರೂ., ಮದುವೆ ನೋಂದಣಿಗೆ ಸರ್ಕಾರಿ ಶುಲ್ಕ 185 ರೂ., ದಲ್ಲಾಳಿ ಮುಖಾಂತರ 1000 ರೂ., ಪಹಣಿ ಪತ್ರದಲ್ಲಿ ಸಾಲ ದಾಖಲಾಗಿದ್ದು ತೆರವುಗೊಳಿಸಲು ಸರ್ಕಾರದ ಶುಲ್ಕ 400 ರೂ., ಮಧ್ಯವರ್ತಿಗಳ ಮುಖಾಂತರ 1000 ರೂ. ಭೂ ನೋಂದಣಿಗೆ ಸರ್ಕಾರ ನಿಗದಿ ಪಡಿಸಿದ ಮೌಲ್ಯ 10 ರೂ. ನೀಡಿದರೂ ಮಧ್ಯವರ್ತಿಗಳ ಮೂಲಕ ಬರಲು ಒತ್ತಾಯಿಸಲಾಗುತ್ತದೆ. ನೋಂದಣಿ ಕಚೇರಿಯ ಲಂಚಾವತಾರದ ರೂಪವಿದು.

ಪ್ರಮುಖ ಅಂಶ

  • 2014-15ರಲ್ಲಿ 2521 ದಾಖಲೆ ನೋಂದಾಯಿಸಿ 2,61,94,155 ರೂ. ಲಾಭ ಗಳಿಸಿದೆ.
  •  ಸೇವೆ, ಶುಲ್ಕ ಕಡ್ಡಾಯವಾಗಿ ಬೋರ್ಡಿನಲ್ಲಿ ಬರೆದು ತಿಳಿಸಬೇಕೆಂಬ ನಿಯಮವಿದ್ದರೂ ಬೋರ್ಡ್ ಮಾಯ!

ರಾಜ್ಯದ ಬಹುತೇಕ ಉಪ ನೋಂದಣಿ ಕಚೇರಿಗಳು ಭ್ರಷ್ಟಾಚಾರ ಕೂಪವಾಗಿವೆ. ಆನ್‌ಲೈನ್ ಮುಖಾಂತರ ಎಲ್ಲ ಕೆಲಸಗಳಾದರೆ ಮಾತ್ರ ಭ್ರಷ್ಟಾಚಾರ ಕಡಿಮೆ ಮಾಡಬಹುದು, ಸರ್ಕಾರ ಕಡ್ಡಾಯವಾಗಿ ಕಚೇರಿ ಒಳಗೆ ಸಿಸಿ ಕ್ಯಾಮರಾ ಅಳವಡಿಸಬೇಕು.
ಆಜ್ರಿ ಸುರೇಶ ಹೆಬ್ಬಾರ, ನಾಗರಿಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ, ಸಿದ್ದಾಪುರ

ನೋಂದಣಿ ಕಚೇರಿ ಅಧಿಕಾರಿ ಬೇರೆ ಇಲಾಖೆಗಳಂತೆ ಕಡ್ಡಾಯವಾಗಿ ಜಿಪಂ, ತಾಪಂ, ಹಾಗೂ ಗ್ರಾಮ ಸಭೆಗೂ ಹಾಜರಿರಬೇಕು ಹಾಗೂ ಕಚೇರಿಯಲ್ಲಿ ಸಿಗುವ ಸೇವೆ ಶುಲ್ಕದ ಬಗ್ಗೆ ಸಾರ್ವಜನಿಕರಗೆ ಸಭೆಯಲ್ಲಿ ವಿವರಿಸಬೇಕು. ಹಳೇ ಭೂ ದಾಖಲೆ ಹಾಗೂ ಇ.ಸಿ. ಪಡೆಯಲು ಮಾಹಿತಿ ಹಕ್ಕು ಕಾಯ್ದೆ ಪ್ರಕಾರ ಜನರು ನೇರವಾಗಿ ಅರ್ಜಿ ಸಲ್ಲಿಸಿದರೆ, ಸರ್ಕಾರ ಈಗ ನಿಗದಿ ಪಡಿಸಿದ ಶುಲ್ಕಕ್ಕಿಂತಲೂ ಅತೀ ಕಡಿಮೆ ಹಣದಲ್ಲಿ ದಾಖಲೆಗಳನ್ನು ಪಡೆಯಬಹುದು. ಜನರು ಈ ವ್ಯವಸ್ಥೆಯಲ್ಲಿ ಹೆಚ್ಚು ಹೆಚ್ಚು ತೊಡಗಬೇಕು.
ಚಿಟ್ಟೆ ರಾಜಗೋಪಾಲ ಹೆಗ್ಡೆ, ಸಾಮಾಜಿಕ ಕಾರ್ಯಕರ್ತ