ಮಲೇನಿಯಾ ವಿರುದ್ಧ ಸುಳ್ಳು ಮಾಹಿತಿ ಪ್ರಕಟಿಸಿದ್ದಕ್ಕೆ ಬೇಷರತ್​ ಕ್ಷಮೆಯಾಚನೆ

ಲಂಡನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಅವರ ಪತ್ನಿ ಮೆಲೇನಿಯಾ ಟ್ರಂಪ್​ ಕುರಿತು ಸುಳ್ಳು ಮಾಹಿತಿಗಳನ್ನು ಒಳಗೊಂಡ ವರದಿ ಪ್ರಕಟಿಸಿದ್ದಕ್ಕಾಗಿ ಬ್ರಿಟನ್​ನ ದಿನಪತ್ರಿಕೆ ಟೆಲಿಗ್ರಾಫ್​ ದೊಡ್ಡ ಮೊತ್ತದ ಪರಿಹಾರಮೊತ್ತ ಪಾವತಿಸಿದೆ. ಜತೆಗೆ ಮಲೇನಿಯಾ ಅವರಲ್ಲಿ ಬೇಷರತ್​ ಕ್ಷಮೆಯಾಚಿಸಿದೆ.

ಜ.19ರಂದು ಪ್ರಕಟಿಸಿದ್ದ ತನ್ನ ಸಾಪ್ತಾಹಿಕ ಪುರವಣಿಯಲ್ಲಿ ಟೆಲಿಗ್ರಾಫ್​ ಮಲೇನಿಯಾ ಅವರನ್ನು ಅವಹೇಳನ ಮಾಡುವ ವರದಿಯನ್ನು ಪ್ರಕಟಿಸಿತ್ತು. ಮೆಲೇನಿಯಾ ವೃತ್ತಿಪರ ರೂಪದರ್ಶಿಯಾಗಿದ್ದರು. ಆದರೆ, ಡೊನಾಲ್ಡ್​ ಟ್ರಂಪ್​ ಅವರ ಸಂಪರ್ಕಕ್ಕೆ ಬಂದ ಬಳಿಕ ಅವರ ವೃತ್ತಿಜೀವನ ಹಾಳಾಗಿತ್ತು. ಟ್ರಂಪ್​ ಅವರನ್ನು ಮದುವೆಯಾದ ಬಳಿಕ ಮೆಲೇನಿಯಾ ಅವರ ತಂದೆ, ತಾಯಿ ಮತ್ತು ಸಹೋದರಿ 2005ರಲ್ಲಿ ಟ್ರಂಪ್ ಮಾಲೀಕತ್ವದ ಕಟ್ಟಡದಲ್ಲಿ ವಾಸಿಸಲು ಸ್ಥಳಾಂತರಗೊಂಡಿದ್ದರು ಎಂದು ವರದಿಯಲ್ಲಿ ಹೇಳಲಾಗಿತ್ತು.

ಈ ಹಿನ್ನೆಲೆಯಲ್ಲಿ ಮಲೇನಿಯಾ ಟೆಲಿಗ್ರಾಫ್​ ಪತ್ರಿಕೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.