ಬಸ್​ನಲ್ಲಿ ಬ್ರಿಟಿಷ್​ ಸಂಸದೆಯ ಎದುರೇ ಹಸ್ತಮೈಥುನ ಮಾಡಿಕೊಂಡ ಅಪರಿಚಿತ: ವ್ಯಕ್ತಿಗಾಗಿ ಪೊಲೀಸರ ಹುಡುಕಾಟ

ಲಂಡನ್​: ಪಾಕಿಸ್ತಾನಿ ಮೂಲದ ಬ್ರಿಟಿಷ್​ ​ ಸಂಸತ್ತು ಸದಸ್ಯೆ ನಾಜ್​ ಷಾ ಎದುರು ಬಸ್​ನಲ್ಲೇ ವ್ಯಕ್ತಿಯೋರ್ವ ಹಸ್ತಮೈಥುನ ಮಾಡಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ವೆಸ್ಟ್​ ಬ್ರಾಡ್​ಫೋರ್ಡ್ ಕ್ಷೇತ್ರವನ್ನು ಪ್ರತಿನಿಧಿಸುವ ಲೇಬರ್​ ಪಕ್ಷದ ಸದಸ್ಯೆಯಾಗಿರುವ ನಾಜ್​ ಷಾ ಲಂಡನ್​ ನಲ್ಲಿ ಬಸ್​ನಲ್ಲಿ ಸಂಚರಿಸುತ್ತಿದ್ದಾಗ ಈ ಘಟನೆ ನಡೆದಿದ್ದು ಇದೊಂದು ಅತ್ಯಂತ ಅಸಹ್ಯಕರ ಸನ್ನಿವೇಶ ಎಂದು ಅವರು ಹೇಳಿಕೊಂಡಿದ್ದಾರೆ. ಅಲ್ಲದೆ, ಪೊಲೀಸರಿಗೆ ದೂರು ನೀಡಿದ್ದಾರೆ.

ನಾನು ಈ ಘಟನೆಯಿಂದ ತುಂಬ ಶಾಕ್​ಗೆ ಒಳಗಾಗಿದ್ದೇನೆ. ಪದೇಪದೆ ಆ ಅಸಹ್ಯ ನೆನಪಾಗುತ್ತದೆ. ಅವನೂ ಕೂಡ ಸಹಜವಾಗಿಯೇ ಕೂತಿದ್ದ. ಏನಾಗುತ್ತಿದೆ ಎಂದು ಅರ್ಥವಾಗಲಿಲ್ಲ. ನಾನು ಡ್ರೈವರ್​ಗೆ ತಿಳಿಸಿದೆ. ಆದರೆ ಅಷ್ಟರಲ್ಲಾಗಲೇ ಆ ವ್ಯಕ್ತಿ ಅಲ್ಲಿಂದ ಹೋಗಿದ್ದ. ತುಂಬ ಅಶ್ಲೀಲವಾಗಿ ನಡೆದುಕೊಂಡ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇಂಥ ಸನ್ನಿವೇಶ ಹಿಂದೆ ಯಾವತ್ತೂ ಎದುರಾಗಿರಲಿಲ್ಲ. ಮಹಿಳೆಯರು ಇಂತಹ ಲೈಂಗಿಕ ಅನುಚಿತ ವರ್ತನೆಗಳನ್ನು ನೋಡದೆ ಅವರ ಕೆಲಸಕ್ಕೆ ಹೋಗುವಂತಾಗಬೇಕು ಎಂದಿದ್ದಾರೆ.

ಪೊಲೀಸರಿಗೆ ದೂರು ನೀಡಿದ ಬಳಿಕ ತಮ್ಮ ಸಾಮಾಜಿಕ ಜಾಲತಾಣಗಳಲ್ಲೂ ತಮಗಾದ ಕೆಟ್ಟ ಅನುಭವವನ್ನು ಶೇರ್​ ಮಾಡಿಕೊಂಡಿದ್ದಾರೆ. ಶೇ.90ರಷ್ಟು ಜನರು ತಮ್ಮೆದುರು ಯಾರಾದರೂ ಅನುಚಿತ, ಅಶ್ಲೀಲವಾಗಿ ವರ್ತಿಸುತ್ತಿದ್ದರೂ ಅದರ ಬಗ್ಗೆ ದೂರು ನೀಡುವುದಿಲ್ಲ. ಆದರೆ ಸುಮ್ಮನೆ ಕೂರಬಾರದು. ಈ ಪ್ರಮಾಣ ಹೆಚ್ಚಾಗಬಾರದು ಎಂದೂ ಎಂಪಿ ಹೇಳಿದ್ದಾರೆ.