More

    ಬ್ರಿಟನ್ ಅರಮನೆಯಲ್ಲಿ ಬಿರುಗಾಳಿ: ರಾಜಮನೆತನದ ಬಿಕ್ಕಟ್ಟಿಗೆ ರಾಣಿ ಎಲಿಜಬೆತ್ ಪರಿಹಾರ ಸೂತ್ರ

    ಲಂಡನ್: ರಾಜಮನೆತನ ತೊರೆಯುವ ನಿರ್ಧಾರದಿಂದ ರಾಜಕುಮಾರ ಹ್ಯಾರಿ ದಂಪತಿ ಹಿಂದೆ ಸರಿಯದ ಕಾರಣ ಬ್ರಿಟನ್ ರಾಜಕುಟುಂಬದ ಬಿರುಗಾಳಿ ತಣ್ಣಗಾಗಿಸಲು ರಾಣಿ 2ನೇ ಎಲಿಜಬೆತ್ ಪ್ರಕಟಿಸಿದ ಪರಿಹಾರ ಸೂತ್ರಕ್ಕೆ ಹ್ಯಾರಿ ದಂಪತಿ ಸಮ್ಮತಿಸಿದ್ದಾರೆ. ಇದರಂತೆ ಅವರಿಬ್ಬರು ರಾಜ ಕುಟುಂಬದ ಜವಾಬ್ದಾರಿಗಳಿಂದ ದೂರವುಳಿಯುವುದಾಗಿ ಪ್ರಕಟಿಸಿದ್ದು, ಪ್ರಭುತ್ವದ ಗೌರವ ಸೂಚಕ ಸಂಬೋಧನೆ (ಹಿಸ್/ಹರ್ ರಾಯಲ್ ಹೈನೆಸ್-ಎಚ್​ಆರ್​ಎಚ್) ಕೈಬಿಡಲು ಮತ್ತು ಸರ್ಕಾರಿ ನಿಧಿಯಿಂದ ಹಣ ಪಡೆಯದಿರಲೂ ಒಪ್ಪಿದ್ದಾರೆ. ಹ್ಯಾರಿ ದಂಪತಿ ಇನ್ಮುಂದೆ ಸಾಮಾನ್ಯ ನಾಗರಿಕರಂತೆ ಬ್ರಿಟನ್ ಮತ್ತು ಉತ್ತರ ಅಮೆರಿಕದಲ್ಲಿ ನೆಲೆಸಲಿದ್ದಾರೆ.

    ರಾಜ ಕುಟುಂಬದಲ್ಲಿ ಸಂಚಲನ ಮೂಡಿಸಿದ್ದ ಹ್ಯಾರಿ ದಂಪತಿ ನಿರ್ಧಾರದ ಹಿನ್ನೆಲೆಯಲ್ಲಿ ರಾಣಿ 2ನೇ ಎಲಿಜಬೆತ್ ಕುಟುಂಬ ಸದಸ್ಯರೊಂದಿಗೆ ಒಂದು ವಾರ ಚರ್ಚೆ ನಡೆಸಿ ನಂತರ ರೂಪುಗೊಂಡ ಈ ಸೂತ್ರವನ್ನು ಬಂಕಿಂಗ್ ಹ್ಯಾಮ್ ಅರಮನೆ ಶನಿವಾರ ಪ್ರಕಟಿಸಿದೆ. ಹ್ಯಾರಿ-ಮೆಘಾನ್ ರಾಜ ಮನೆತನದ ಸೌಲಭ್ಯ ತೊರೆಯಲು ರಾಣಿ ಎಲಿಜಬೆತ್ ರೂಪಿಸಿದ ಸೂತ್ರಕ್ಕೆ ‘ಮೆಗ್ಸಿಟ್’ ಎಂದು ಕರೆಯಲಾಗಿದೆ. ಐರೋಪ್ಯ ಒಕ್ಕೂಟದಿಂದ ಬ್ರಿಟನ್ ಹೊರ ಬರುವ ಬ್ರೆಕ್ಸಿಟ್​ಗೆ ಸಂವಾದಿಯಾಗಿ ಇದನ್ನು ಬಳಸಲಾಗಿದೆ.

    ಹಣ ಮರುಪಾವತಿ: ಹ್ಯಾರಿ ಮತ್ತು ಮೆಘಾನ್ ಮನೆಯ ನವೀಕರಣಕ್ಕಾಗಿ ಖಾಜನೆಯಿಂದ ಬಳಿಸಿದ -ಠಿ; 22 ಕೋಟಿ (3.10 ಮಿಲಿಯನ್ ಡಾಲರ್) ಮೊತ್ತವನ್ನು ಮರುಪಾವತಿ ಮಾಡಬೇಕು ಎಂದು ಸಂಧಾನ ಸೂತ್ರದಲ್ಲಿ ಹೇಳಲಾಗಿದೆ. ವಿಂಡ್ಸರ್ ಕ್ಯಾಸಲ್ ಸಮೀಪದ ಫ್ರಾಗ್​ವೋರ್ ಕಾಟೇಜ್​ನ ನವೀಕರಣಕ್ಕೆ ವೆಚ್ಚ ಮಾಡಿದ್ದರು.

    ಹೆಚ್ಚು ಸ್ವತಂತ್ರವಾಗಿ ಬಾಳಬೇಕೆಂಬ ಹ್ಯಾರಿ ಮತ್ತು ಮೆಘಾನ್ ಇಚ್ಛೆಗೆ ನನ್ನ ಸಂಪೂರ್ಣ ಬೆಂಬಲವಿದೆ. ಅವರಿಗೆ ಒಳಿತಾಗಲಿ.

    | ಬ್ರಿಟನ್ ರಾಣಿ 2ನೇ ಎಲಿಜಬೆತ್

    ನಟಿಯಿಂದ ರಾಜಮನೆತನಕ್ಕೆ

    ಅಮೆರಿಕದಲ್ಲಿ ಸಿನಿಮಾಗಳಲ್ಲಿ ನಟಿಸುತ್ತಿದ್ದ ಮೆಘಾನ್ ಮಾರ್ಕಲ್ (39) ಸಸೆಕ್ಸ್​ನ ಡ್ಯೂಕ್ ರಾಜಕುಮಾರ ಹ್ಯಾರಿಯನ್ನು ಮದುವೆಯಾದ ನಂತರ ಬ್ರಿಟನ್ ರಾಜಮನೆತನದ ಸದಸ್ಯೆಯಾದರು. ಅವರಿಗೆ ಸಸೆಕ್ಸ್​ನ ಡಚೆಸ್ ಎಂಬ ಪದವಿಯನ್ನು ನೀಡಲಾಯಿತು. ಹ್ಯಾರಿಯನ್ನು 2018ರಲ್ಲಿ ಮದುವೆಯಾದಾಗಿನಿಂದ ಕೇವಲ 72 ದಿನ ಕಾಲ ರಾಜವಂಶದ ಕಾರ್ಯಭಾರವನ್ನು ಮೆಘಾನ್ ನಿರ್ವಹಿಸಿದ್ದಾರೆ. ಹ್ಯಾರಿಗಿಂತ ಮೆಘಾನ್ ಮೂರು ವರ್ಷ ದೊಡ್ಡವರು. ಈ ದಂಪತಿಗೆ ಒಂದು ಗಂಡು ಮಗುವಿದೆ. ಟ್ರೆವೆಲ್ ಎಂಗಲ್ಸನ್ ಎಂಬುವವರನ್ನು 2011ರಲ್ಲಿ ವಿವಾಹವಾಗಿದ್ದ ಮೆಘಾನ್, 2013ರಲ್ಲಿ ವಿಚ್ಛೇದನ ಪಡೆದಿದ್ದರು.

    ಪ್ರಜೆಗಳಿಂದಲೇ ಪಾಲನೆ

    ರಾಜಕುಟುಂಬಕ್ಕೆ ಬ್ರಿಟನ್​ನ ತೆರಿಗೆದಾರರೇ ‘ಸಾರ್ವಭೌಮ ಅನುದಾನ’ ನೀಡಿ ಪಾಲನೆ ಮಾಡುತ್ತಾರೆ. 2019ರಲ್ಲಿ ಖಜಾನೆಯಿಂದ ಈ ಬಾಬ್ತಿಗೆ ವೆಚ್ಚವಾಗಿದ್ದು 104.8 ಮಿಲಿಯನ್ ಡಾಲರ್. ರಾಣಿ ಪಡೆಯುವ ವೇತನ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತದೆ. 2017-18ರಲ್ಲಿ ಎಲಿಜಬೆತ್ ಸರ್ಕಾರದಿಂದ ಪಡೆದ ವೇತನ 58 ಮಿಲಿಯನ್ ಡಾಲರ್. 2016-17ರಲ್ಲಿ ಅದು 54 ಮಿಲಿಯನ್ ಡಾಲರ್ ಆಗಿತ್ತು. ರಾಜಮನೆತನದ ಖರ್ಚಿನಲ್ಲಿ ಸ್ವಲ್ಪವಷ್ಟೆ ರಾಣಿಯ ಖಾಸಗಿ ಹೂಡಿಕೆಯಾಗಿರುತ್ತದೆ. ಇದರ ಹೊರತಾಗಿ ರಾಜಮನೆತನದವರಿಗೆ ಖಾಸಗಿ ಉದ್ದಿಮೆ, ವಾಣಿಜ್ಯ ವ್ಯವಹಾರ, ಹೂಡಿಕೆ ಮೂಲಕವೂ ಸಂಪಾದನೆ ಆಗುತ್ತದೆ.

    ಎರಡನೇ ಅತ್ಯುನ್ನತ ಪದವಿ

    ರಾಜ ಅಥವಾ ರಾಣಿಯ ನಂತರ ರಾಜಮನೆತನದ ಎರಡನೇ ಅತ್ಯುಚ್ಚ ಪದವಿಯೆಂದರೆ ಡ್ಯೂಕ್ ಮತ್ತು ಡಚೆಸ್. ಡ್ಯೂಕ್ ನಿರ್ದಿಷ್ಟ ಪ್ರದೇಶದ ಸಾರ್ವಭೌಮ ಆಡಳಿತಗಾರ ಆಗಿರುತ್ತಾನೆ. ರಾಜನನ್ನು ಹಿಸ್ ಮೆಜೆಸ್ಟಿ, ರಾಣಿಯನ್ನು ಹರ್ ಮೆಜೆಸ್ಟಿ ಎಂದು ಸಂಬೋಧಿಸಲಾಗುತ್ತದೆ. ದೇಶದ ಪ್ರಮುಖ ಕಾರ್ಯ ನಿರ್ವಹಣೆಯಲ್ಲಿ ರಾಣಿಗೆ ನೆರವಾಗುವುದು ರಾಜಕುಟುಂಬದ ಸದಸ್ಯರ ಹೊಣೆಗಾರಿಕೆಯಲ್ಲಿ ಪ್ರಮುಖವಾಗಿರುತ್ತದೆ. ರಾಷ್ಟ್ರೀಯ ಏಕತೆ ಮತ್ತು ಸ್ಥಿರತೆ ಬಲಪಡಿಸುವುದು ಕೂಡ ಅವರ ಜವಾಬ್ದಾರಿ. ಸೇನೆಯಲ್ಲಿ ಕರ್ತವ್ಯ ನಿರ್ವಹಿಸುವುದು ಕೂಡ ರಾಜವಂಶಸ್ಥರ ಕೆಲಸವಾಗಿರುತ್ತದೆ. ಹ್ಯಾರಿ ಸೇನೆಯಲ್ಲಿ ಉನ್ನತ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

    ಬಂಗಾರದ ಪಂಜರದಿಂದ ಬಿಡುಗಡೆ ಬಯಕೆ

    ರಾಜಕುಟುಂಬದ ಸದಸ್ಯರಾಗಿರುವುದೆಂದರೆ ಬಂಗಾರದ ಪಂಜರದಲ್ಲಿ ವಾಸವಿದ್ದಂತೆ ಎಂದು ಭಾವಿಸಿದ್ದ ಹ್ಯಾರಿ ಮತ್ತು ಮೆಘಾನ್, ಮುಕ್ತ ಸ್ವಾತಂತ್ರ್ಯ ಬಯಸಿ ಸ್ವಚ್ಛಂದ ಜೀವನ ರೂಪಿಸಲು ನಿರ್ಧರಿಸಿದ್ದಾರೆ. ಆರ್ಥಿಕವಾಗಿ ಸ್ವತಂತ್ರವಾಗುವುದು ಕೂಡ ತಮ್ಮ ಬಯಕೆ ಎಂದು ಹೇಳಿದ್ದಾರೆ. ವಿಶೇಷವಾಗಿ ಮಾಧ್ಯಮದವರು ಸದಾ ಬೆಂಬಿಡದೆ ತಮ್ಮ ಚಟುವಟಿಕೆಗಳ ಮೇಲೆ ನಿಗಾ ಇಟ್ಟು ವರದಿಗಳನ್ನು ಮಾಡುತ್ತಿದ್ದುದರಿಂದ ಹ್ಯಾರಿ ಕುಪಿತರಾಗಿದ್ದರು. ಕೆಲವು ಮಾಧ್ಯಮದ ವಿರುದ್ಧ ಕೇಸ್ ಕೂಡ ದಾಖಲಿಸಿದ್ದರು.

    ಸ್ವಾತಂತ್ರ್ಯ ಬಯಸಿದ್ದ ಡಯಾನಾ

    ರಾಜಕುಮಾರ ಹ್ಯಾರಿ ಇನ್ನು ಮುಂದೆ ಕೇವಲ ಹ್ಯಾರಿ ಅಷ್ಟೆ. ಅವರ ತಾಯಿ ಡಯಾನಾ ಕೂಡ ಇದೇ ಪ್ರಕ್ರಿಯೆಗೆ ಒಳಗಾಗಿದ್ದರು. ವೇಲ್ಸ್ ರಾಜಕುಮಾರಿ ಡಯಾನಾ, ರಾಜಕುಮಾರ ಚಾರ್ಲ್ಸ್​ರಿಂದ ವಿಚ್ಛೇದನ ಪಡೆದ ನಂತರ ರಾಜಕುಮಾರಿ ಬಿರುದು ಹೋಗಿ ಕೇವಲ ಡಯಾನಾ ಎಂದು ಪರಿಚಿತರಾಗಿದ್ದರು. ಡಯಾನಾ ಕೂಡ ಪ್ರಚಾರದಿಂದ ದೂರವಿರಲು, ಸಾಮಾನ್ಯ ನಾಗರಿಕರಂತೆ ಬದುಕಲು ಬಯಸಿದ್ದರು. ಮಾಧ್ಯಮದವರ ಕಣ್ಣು ತಪ್ಪಿಸಲು ನಡೆಸಿದ ಪ್ರಯತ್ನವೇ ಅವರ ದುರಂತ ಸಾವಿಗೆ ಕಾರಣವಾಗಿತ್ತು.

    ಪದವಿ ತ್ಯಾಗದ ಎರಡನೇ ಪ್ರಸಂಗ

    ಬ್ರಿಟನ್ ರಾಜಕುಟುಂಬದಿಂದ ಸದಸ್ಯರು ಬೇರ್ಪಡೆಯಾದ ಎರಡನೇ ಪ್ರಕರಣ ಇದಾಗಿದೆ. ರಾಣಿ ಎಲಿಜಬೆತ್​ರ ಮಾವ ಎಂಟನೇ ಎಡ್ವರ್ಡ್, ಎರಡು ಬಾರಿ ವಿಚ್ಛೇದಿತರಾದ ಅಮೆರಿಕದ ವಾಲಿಸ್ ಸಿಂಪ್ಸನ್​ರನ್ನು ಮದುವೆಯಾದ ಹಿನ್ನೆಲೆಯಲ್ಲಿ ರಾಜ ಕುಟುಂಬದ ಹೊಣೆಗಾರಿಕೆಯಿಂದ ಹೊರ ಬಂದಿದ್ದರೂ ಎಚ್​ಆರ್​ಎಚ್ ಪದವಿಯನ್ನು ಕಿತ್ತುಕೊಂಡಿರಲಿಲ್ಲ. ಆದರೆ ವಾಲಿಸ್ ಸಿಂಪ್ಸನ್​ಗೆ ಆ ಗೌರವ ನೀಡಲಾಗಿರಲಿಲ್ಲ.

    ನನ್ನ ಮಗಳು ರಾಜಮನೆತನದ ಘನತೆಯನ್ನು ಹಾಳುಮಾಡಿದ್ದಾಳೆ. ದೀರ್ಘ ಕಾಲದಿಂದ ಅಸ್ತಿತ್ವದಲ್ಲಿರುವ ರಾಜಕುಟುಂಬ ಪ್ರಸಕ್ತ ಬಿಕ್ಕಟ್ಟನ್ನು ಎದುರಿಸಿ ಮುನ್ನಡೆಯಲಿದೆ ಎಂಬ ವಿಶ್ವಾಸ ನನಗಿದೆ.

    | ಥಾಮಸ್ ಮಾರ್ಕಲ್ ಮೆಘಾನ್​ಳ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts