ಕೆ.ಆರ್.ಸಾಗರ: ಸಾರ್ವಜನಿಕ ಪ್ರಕಟಣೆ ಹಾಗೂ ಮಾಹಿತಿ ನೀಡದೆ ಕೆ.ಆರ್.ಸಾಗರ ವಿಶ್ವವಿಖ್ಯಾತ ಬೃಂದಾವನದ ಪ್ರವೇಶ ದರವನ್ನು ಮೇ 1ರಿಂದ ಹೆಚ್ಚು ಮಾಡಿರುವುದು ಅಕ್ರಮವಾಗಿದೆ. ಯಾವುದೇ ಕರಾರು ಪತ್ರ ಮಾಡಿಕೊಳ್ಳದೆ ಖಾಸಗಿಯವರಿಂದ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿ ಕಾವೇರಿ ನೀರಾವರಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಸೇರಿದಂತೆ ನಾಲ್ವರ ವಿರುದ್ಧ ನಾರ್ತ್ ಬ್ಯಾಂಕ್ ಜಗದೀಶ್ ಅವರು ಕೆ.ಆರ್.ಸಾಗರ ಪೊಲೀಸ್ ಠಾಣೆಯಲ್ಲಿ ಶನಿವಾರ ದೂರು ನೀಡಿದ್ದಾರೆ.

ದೂರು ನೀಡಿದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಜಗದೀಶ್, ಬೃಂದಾವನ ಪ್ರವೇಶ ದರ ಹೆಚ್ಚಳ ಕುರಿತು ಕಾವೇರಿ ನೀರಾವರಿ ನಿಗಮ ಸಾರ್ವಜನಿಕ ಪ್ರಕಟಣೆ ಹೊರಡಿಸಿಲ್ಲ. ಏಕಾಏಕಿ ಹೆಚ್ಚಿಸಿ ಖಾಸಗಿ ಕಂಪನಿಗೆ ಯಾವುದೇ ಕರಾರು ಮಾಡಿಕೊಳ್ಳದೆ ವಸೂಲಿ ಮಾಡಿಕೊಳ್ಳಲು ಅನುಮತಿ ನೀಡಿದೆ ಎಂದು ಆರೋಪಿಸಿದರು.
2019-20ರ ಅವಧಿಗೆ ಕೆಸಿಐಸಿ ಕಂಪನಿಗೆ 12.6 ಕೋಟಿ ರೂ.ಗೆ ಟೆಂಡರ್ ನೀಡಲಾಗಿತ್ತು. ನಂತರ ಕೋವಿಡ್ ಹಿನ್ನೆಲೆಯಲ್ಲಿ ಅವಧಿ ವಿಸ್ತರಿಸಲಾಗಿತ್ತು. 2021ರಿಂದ 2025ರ ಏಪ್ರಿಲ್ ತನಕ 75:25ರ ಅನುಪಾತದಲ್ಲಿ ಕೆ.ಸಿ.ಐ.ಸಿ.ಗೆ ನೀಡಿದ್ದು, ಈಗ ಮತ್ತೆ ಅದೇ ಕಂಪನಿಗೆ ಟೆಂಡರ್ ನೀಡಿರುವುದು ಅನುಮಾನಕ್ಕೆ ಆಸ್ಪದವಾಗಿದೆ ಎಂದರು.
ಈಗ ಪ್ರವೇಶ ದರ ದುಪಟ್ಟು ಮಾಡಿದ್ದರೂ ಮೂರು ವರ್ಷಗಳಿಗೆ ಅವಧಿಗೆ ಕೇವಲ 13.36 ಕೋಟಿ ರೂ. ಟೆಂಡರ್ ನೀಡಲಾಗಿದೆ. ಪ್ರವೇಶ ದರ 20 ರೂ. ಇತ್ತು. ವಾಹನಗಳ ಪ್ರವೇಶ ಶುಲ್ಕ 30ರಿಂದ 50 ರೂ. ಇದ್ದಾಗಲೂ ಇದೇ ರೀತಿ ತಿಂಗಳಿಗೆ 1 ಕೋಟಿ ರೂ.ನಷ್ಟು ವಸೂಲಿಯಾಗಿತ್ತು. ಹಲವು ವರ್ಷಗಳ ಹಿಂದೆ ಇದ್ದ ಮೊತ್ತಕ್ಕೆ ಈಗಲೂ ಟೆಂಡರ್ ನೀಡಲಾಗಿದೆ. ಇದರ ಬಗ್ಗೆ ಲೋಕಾಯುಕ್ತ ತನಿಖೆ ಮಾಡಬೇಕು ಎಂದು ಆಗ್ರಹಿಸಿದರು.
ಮೇ 1ರಂದು ಕಾವೇರಿ ನೀರಾವರಿ ನಿಗಮದ ವತಿಯಿಂದ ಬೃಂದಾವನದ ಪ್ರವೇಶ ದ್ವಾರ ದರ, ವಾಹನ ಪಾರ್ಕಿಂಗ್ ಶುಲ್ಕ ಹಾಗೂ ಬೃಂದಾವನ ಮುಖ್ಯ ರಸ್ತೆ ಮೇಲು ಸೇತುವೆ ಟೋಲ್ ಸೇರಿದಂತೆ ಟೆಂಡರ್ ಕರೆಯಲಾಗಿತ್ತು. ಟೆಂಡರ್‌ನಲ್ಲಿ ಭಾಗವಹಿಸಿದ್ದ ಬೆಂಗಳೂರು ಮೂಲದ ಕಂಪನಿ ಪಡೆದಿದ್ದು, ಒಂದು ವರ್ಷಕ್ಕೆ 13.36 ಕೋಟಿ ರೂ.ಗೆ ಟೆಂಡರ್ ಪಡೆದು ಪ್ರವೇಶ ದರ ಹೆಚ್ಚಿಸಲಾಗಿದೆ.
ಪ್ರವೇಶ ದರ ವಯಸ್ಕ ಪ್ರವಾಸಿಗರಿಗೆ 50ರಿಂದ 100 ರೂ., 3 ರಿಂದ 6 ವರ್ಷದವರಿಗೆ 10 ರಿಂದ 50 ರೂ.ಗೆ ಹೆಚ್ಚಿಸಲಾಗಿದೆ. ಶಾಲಾ ಮ್ಕಕಳಿಗೆ 5 ರೂ., ಕ್ಯಾಮರಾ 100 ರೂ.ನಿಗದಿಪಡಿಸಲಾಗಿದೆ. ಪಾರ್ಕಿಂಗ್‌ಗೆ ಎರಡು ಚಕ್ರದ ವಾಹನಕ್ಕೆ 10 ರಿಂದ 20 ರೂ, ಮೂರು ಚಕ್ರದ ವಾಹನಕ್ಕೆ 40ರಿಂದ 50 ರೂ., ನಾಲ್ಕು ಚಕ್ರದ ವಾಹನಕ್ಕೆ 50ರಿಂದ 100 ರೂ., ಟೆಂಪೋ ಟ್ರಾವೆಲರ್ಸ್‌ಗೆ 70ರಿಂದ 100 ರೂ., ಬಸ್‌ಗೆ 100ರಿಂದ 200 ರೂ.ಗೆ ಏರಿಕೆ ಮಾಡಲಾಗಿದೆ.
ಟೋಲ್ ದರವನ್ನು ಮೂರು ಚಕ್ರದ ವಾಹನ 20ರಿಂದ 50 ರೂ., ನಾಲ್ಕು ಚಕ್ರದ ವಾಹನ 50ರಿಂದ 100 ರೂ., ಟೆಂಪೋ ಟ್ರಾವಲರ್/ಮಿನಿ ಬಸ್ 50ರಿಂದ 100 ರೂ., ಬಸ್ 100ರಿಂದ 200 ರೂ., 6 ಚಕ್ರದ ಲಾರಿಗೆ 150ರಿಂದ 200 ರೂ., 10 ಚಕ್ರದ ಲಾರಿ 200ರಿಂದ 300 ರೂ.ಗೆ ಏರಿಕೆ ಮಾಡಲಾಗಿದೆ ಎಂದರು.
ಕೆ.ಆರ್.ಸಾಗರದ ಬೃಂದಾವನಕ್ಕೆ ತೆರಳಲು ಇರುವ ಸೇತುವೆ ನಿರ್ಮಾಣಕ್ಕೆ 7 ಕೋಟಿ ರೂ. ವೆಚ್ಚವಾಗಿದೆ. ಸೇತುವೆ ನಿರ್ಮಾಣ ಮಾಡಿ 20 ವರ್ಷಗಳು ಕಳೆದಿದ್ದು ಇಲ್ಲಿತನಕ ಸಮಾರು 20 ಕೋಟಿ ರೂ. ವಸೂಲಿಯಾಗಿದೆ. ನಿರ್ಮಾಣಕ್ಕಿಂತ ಹೆಚ್ಚು ವಸೂಲಿಯಾಗಿದೆ. ಟೋಲ್ ರದ್ದುಪಡಿಸಿ ಎಂದು ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದೇನೆ. ಈಗಿನ ದರ ದುಪಟ್ಟು ಮಾಡಿ ವಸೂಲಿ ಮಾಡುತ್ತಿರುವ ಬಗ್ಗೆ ಲಾರಿ ಮಾಲೀಕರು ಹಾಗೂ ಸಾರ್ವಜನಿಕರು ದೂರು ನೀಡಿದ್ದಾರೆ, ತಕ್ಷಣ ನಿಗಮ ಟೋಲ್ ರದ್ದು ಪಡಿಸಬೇಕು.
ದರ್ಶನ್ ಪುಟ್ಟಣಯ್ಯ ಶಾಸಕ ಮೇಲುಕೋಟೆಸರ್ಕಾರದ ಮಾರ್ಗಸೂಚಿಯಂತೆ ಬೃಂದಾವನದ ಪ್ರವೇಶ ಹಾಗೂ ಟೋಲ್ ಟೆಂಡರ್ ಕರೆಯಲಾಗಿತ್ತು. ಮೂರು ವರ್ಷಗಳ ಅವಧಿಗೆ ಬೆಂಗಳೂರು ಮೂಲದ ಕಂಪನಿಗೆ ಆಗಿದೆ. ಒಂದು ವರ್ಷದ ನಂತರ ಶೇ.5ರಷ್ಟು ಹೆಚ್ಚಳವಾಗಲಿದೆ. 2019ರಿಂದ ಈ ಕಂಪನಿ ನಿರ್ವಹಣೆ ಮಾಡುತ್ತಿದೆ. ಸೇತುವೆ ಸಂಚಾರಕ್ಕೆ ಟೋಲ್ ರದ್ದುಗೊಳಿಸುವಂತೆ ಶಾಸಕ ದರ್ಶನ್ ಪುಟ್ಟಣಯ್ಯ ಸೇರಿದಂತೆ ಹಲವಾರು ಸಾರ್ವಜನಿಕರು ಮನವಿ ಮಾಡಿದ್ದರು. ಈ ಕುರಿತು ಸರ್ಕಾರ ಹಾಗೂ ಕಾವೇರಿ ನೀರಾವರಿ ನಿಗಮಕ್ಕೆ ಮಾಹಿತಿ ನೀಡಿದ್ದೇವೆ. ಟೆಂಡರ್ ಕರಾರು ಮೇ 1ರಿಂದ ಚಾಲ್ತಿಗೆ ಬಂದಿದೆ. ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ. ಎಲ್ಲ ದರಗಳು ಬೇರೆ ಪ್ರವಾಸಿ ತಾಣದಂತೆ ನಿಗದಿಪಡಿಸಿದ್ದೇವೆ.
ಜಯಂತ್ ಕಾರ್ಯಪಾಲಕ ಇಂಜಿನಿಯರ್ ಕಾವೇರಿ ನೀರಾವರಿ ನಿಗಮ, ಕೆ.ಆರ್.ಸಾಗರ