ಅಪಾಯಕ್ಕೆ ಆಹ್ವಾನ ನೀಡುವ ಸೇತುವೆ!

ಚಿದಾನಂದ ಮಾಣೆ ರಟ್ಟಿಹಳ್ಳಿ

ರಟ್ಟಿಹಳ್ಳಿ- ರಾಣೆಬೆನ್ನೂರ ರಾಷ್ಟ್ರೀಯ ಹೆದ್ದಾರಿಯಲ್ಲಿನ ರಾಮತೀರ್ಥ ಗ್ರಾಮದ ಬಳಿ ನಿರ್ವಣವಾಗಿರುವ ತುಂಗಾ ಮೇಲ್ದಂಡೆಯ ಮುಖ್ಯ ಮೇಲ್ಸೇತುವೆಯು ಹಲವು ವರ್ಷಗಳಿಂದ ಸೋರುತ್ತಿದ್ದು, ಕೆಳಗಿ ಹಾಯ್ದು ಹೋಗಿರುವ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರಿಗೆ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

2003ರಲ್ಲಿ ಇಲ್ಲಿನ ಮುಖ್ಯ ಹೆದ್ದಾರಿಯಲ್ಲಿ ಕಿ.ಮೀ. 124ರಲ್ಲಿ ತುಂಗಾ ಮೇಲ್ದಂಡೆ ಯೋಜನೆಯಿಂದ ಮೇಲ್ಸೇತುವೆ ನಿರ್ಮಾಣ ಮಾಡಲಾಗಿತ್ತು. ಆದರೆ, ಕಳೆದ 5-6 ವರ್ಷಗಳಿಂದ ಕಾಲುವೆಯಲ್ಲಿ ನೀರು ಹರಿಯುವ ಸಂದರ್ಭದಲ್ಲಿ, ಅಂದರೆ ವರ್ಷದಲ್ಲಿ 7-8 ತಿಂಗಳು ಇಲ್ಲಿನ ಸೇತುವೆಯಲ್ಲಿ ನೀರು ಸೋರುತ್ತ ರಸ್ತೆಗೆ ಬೀಳುತ್ತದೆ. ಇದರಿಂದ ಸೇತುವೆಯ ಕೆಳಗಡೆ ಸದಾ ನೀರು ಹರಿಯುತ್ತಿದ್ದು, ರಸ್ತೆಯ ಇಕ್ಕೆಲಗಳಲ್ಲಿ ಗುಂಡಿಗಳು ನಿರ್ವಣವಾಗಿವೆ. ಇದು ರಾಷ್ಟ್ರೀಯ ಹೆದ್ದಾರಿಯಾಗಿರುವುದರಿಂದ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಸೇತುವೆ ಬಳಿ ಚಾಲಕರು ಎಚ್ಚರಿಕೆಯಿಂದ ಹೋಗಬೇಕಿದೆ. ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ.

ಎಷ್ಟೋ ಬಾರಿ ಇಲ್ಲಿ ಅಪಘಾತಗಳು ಸಂಭವಿಸಿದ ಉದಾಹರಣೆಗಳಿವೆ. ದ್ವಿಚಕ್ರ ವಾಹನ ಚಾಲಕರಂತೂ ನಿತ್ಯ ಇಲ್ಲಿ ಕಿರಿಕಿರಿ ಅನುಭವಿಸಬೇಕಿದೆ. ಹಲವು ಬಾರಿ ಜಾರಿ ಬಿದ್ದು ಪೆಟ್ಟು ತಿದ್ದಿದ್ದುಂಟು. ಹಲವು ವರ್ಷಗಳಿಂದ ನೀರು ಬಸಿಯುತ್ತಿರುವುದರಿಂದ ಸೇತುವೆ ಕುಸಿಯುವ ಸಂಭವವಿದೆ. ಈ ಬಗೆಗೆ ಇಲಾಖೆಯವರಿಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

ಕಾಲುವೆಯ ನೀರು ಪೋಲು: ಮುಖ್ಯ ಕಾಲುವೆ ನೀರು ಬಿಟ್ಟಾಗಲೆಲ್ಲ ಈ ಮೇಲ್ಸೇತುವೆಯಿಂದ ನೀರು ನಿರಂತರವಾಗಿ ಪೋಲಾಗುತ್ತದೆ. ಎಷ್ಟೋ ಸಂದರ್ಭಗಳಲ್ಲಿ ರಸ್ತೆಯಲ್ಲಿ ಮೊಣಕಾಲಳತೆ ನೀರು ನಿಲ್ಲುತ್ತದೆ. ಇದರಿಂದ ಅಪಾರ ನೀರೂ ಪೋಲಾಗುತ್ತದೆ, ಪ್ರಯಾಣಿಕರಿಗೂ ತೊಂದರೆಯಾಗುತ್ತದೆ.

ಇಷ್ಟೆಲ್ಲ ಸಮಸ್ಯೆ ಇದ್ದರೂ ಅಧಿಕಾರಿಗಳು ಕಂಡೂ ಕಾಣದಂತೆ ಕೂರುವುದು ಸರಿಯಲ್ಲ. ಕೂಡಲೆ ಎಚ್ಚೆತ್ತು ಮೇಲ್ಸೇತುವೆ ದುರಸ್ತಿಗೆ ಮುಂದಾಗಬೇಕು ಎಂಬುದು ಪ್ರಜ್ಞಾವಂತರ ಒತ್ತಾಯ.

ದುರಸ್ತಿಗೆ ಸೂಕ್ತ ಸಮಯ: ಸದ್ಯ ಕಾಲುವೆಯಲ್ಲಿ ನೀರಿನ ಹರಿವು ಕಡಿಮೆಯಾಗಿದ್ದು, ಕೆಲವೇ ದಿನಗಳಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಲಿದೆ. ಮುಂದಿನ ಮಳೆಗಾಲ ಬರುವಷ್ಟರಲ್ಲಿ ಅಧಿಕಾರಿಗಳು ಸೇತುವೆ ದುರಸ್ತಿ ಕಾರ್ಯ ಕೈಗೊಂಡರೆ ಮುಂದಾಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು ಎನ್ನುತ್ತಾರೆ ಸಾರ್ವಜನಿಕರು.

ಇಲ್ಲಿನ ಮೇಲ್ಸೇತುವೆಯಿಂದ ನಿತ್ಯ ನೀರು ಸೋರುತ್ತಿದ್ದು, ವಾಹನ ಸಾವರರಿಗೆ, ಪ್ರಯಾಣಿಕರಿಗೆ ತುಂಬ ತೊಂದರೆಯಾಗುತ್ತಿದೆ. ಇಲ್ಲಿ ಯಾವ ವೇಳೆಯಲ್ಲಾದರೂ ಅಪಾಯ ಸಂಭವಿಸಬಹುದು. ಕೂಡಲೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಿದೆ.
| ಡಾ. ಜೋಷಿ, ರಟ್ಟಿಹಳ್ಳಿ ನಿವಾಸಿ

ಇಲ್ಲಿನ ಮೇಲ್ಸೇತುವೆಯ ದುರಸ್ತಿ ಬಗೆಗೆ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಕಾಲುವೆಯಲ್ಲಿ ನೀರಿನ ಹರಿವು ನಿಂತಾಗ ಅನುಭವಿ ಇಂಜಿನಿಯರ್​ಗಳನ್ನು ಕರೆಸಿ ಸೇತುವೆ ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು.
| ಆರ್. ಕುಮಾರಸ್ವಾಮಿ, ಪ್ರಭಾರಿ ಇಂಜಿನಿಯರ್, ತುಂಗಾ ಮೇಲ್ದಂಡೆ ಯೋಜನೆ