ಕಂಪ್ಲಿ: ತುಂಗಭದ್ರಾ ನದಿಯಲ್ಲಿ 90 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಸೇತುವೆ ಮೇಲಿನ ಸಂಚಾರ ಸ್ಥಗಿತಗೊಳಿಸಲಾಗಿದೆ. ಒಂದೆರಡು ಅಡಿ ಅಂತರವಿದ್ದು, ಒಂದು ಲಕ್ಷ ಕ್ಯೂಸೆಕ್ ಮೇಲೆ ನೀರು ಹರಿದರೆ ಸೇತುವೆ ಮುಳುಗಡೆಯಾಗಲಿದೆ.
ಇದನ್ನೂ ಓದಿ: ರಸ್ತೆಗಳ ಅಭಿವೃದ್ಧಿ, ಕೆರೆಗಳಿಗೆ ನೀರು ತುಂಬಿಸಲು ಆದ್ಯತೆ
ಜಲಾಶಯದ ಒಳಹರಿವು ಇಳಿದ ಬಳಿಕ ಆ.6ರಿಂದ ಸೇತುವೆ ಮೇಲೆ ಪಾದಚಾರಿಗಳ ಸಂಚಾರ ಆರಂಭವಾಗಿತ್ತು. ಜಲಾಶಯದ 19ನೇ ಕ್ಲಸ್ಟರ್ ಗೇಟ್ ಕಳಚಿದ್ದರಿಂದ ನದಿಗೆ ಹೆಚ್ಚಿನ ಪ್ರಮಾಣದ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಸೇತುವೆ ಮೇಲಿನ ಪಾದಚಾರಿ ಸಂಚಾರ ಆ.10ರ ರಾತ್ರಿಯಿಂದ ಸ್ಥಗಿತಗೊಳಿಸಿದೆ.
ವಾಸ್ತವದಲ್ಲಿ ಸೇತುವೆ ಮೇಲಿನ ರಕ್ಷಣಾ ಕಂಬಿಗಳ ದುರಸ್ತಿ ಕಾರ್ಯ ನಡೆದಿದ್ದು ಆ.12ರಿಂದ ದ್ವಿಚಕ್ರವಾಹನಗಳ ಓಡಾಟಕ್ಕೆ ಅನುಮತಿ ದೊರಕಬೇಕಿತ್ತು. ಕ್ಲಸ್ಟರ್ ಗೇಟ್ ಕಳಚಿದ್ದರಿಂದ ದುರಸ್ತಿ ಕಾರ್ಯ, ಪಾದಚಾರಿಗಳ ಓಡಾಟವನ್ನು ನಿಲ್ಲಿಸಲಾಗಿದೆ.
ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗಿ ಪರಿಣಮಿಸಿದೆ. ಪ್ರವಾಹ ಭೀತಿ ಎದುರಿಸಲು ನೋಡಲ್ ಅಧಿಕಾರಿಗಳು ಸನ್ನದ್ಧರಾಗಿದ್ದಾರೆ. ಸೇತುವೆ ಬಳಿ ಪೊಲೀಸರು ಬಿಗಿ ಬಂದೋಬಸ್ತ್ ಒದಗಿಸಿದ್ದಾರೆ.