ಸೇತುವೆ ತಡೆಗೋಡೆ ಬಿದ್ದು ಅಪಾಯಕ್ಕೆ ಆಹ್ವಾನ

ಯಳಂದೂರು: ತಾಲೂಕಿನ ಹೊನ್ನೂರು ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯ ಇರುವ ಕಬಿನಿ ನಾಲೆ ಸೇತುವೆಗೆ (ಚಾನಲ್ 43) ನಿರ್ಮಿಸಿರುವ ತಡೆಗೋಡೆ ಕಳಚಿ ಬಿದ್ದು ಅಪಾಯಕ್ಕೆ ಆಹ್ವಾನ ನೀಡುತ್ತಿದೆ.

ದುಗ್ಗಹಟ್ಟಿ, ಮೆಲ್ಲಹಳ್ಳಿ ಮತ್ತು ಹೊನ್ನೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಕಬಿನಿ ನಾಲೆಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ತಡೆಗೋಡೆ ಬಿದ್ದು ಹೋಗಿ ಹಲವು ವರ್ಷಗಳೇ ಕಳೆದಿದೆ.ಆದರೂ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಡೆಗೋಡೆ ನಿರ್ಮಿಸಿ ಸಾರ್ವಜನಿಕವಾಗಿ ನಡೆಯುವ ಅಪಾಯವನ್ನು ತಡೆಯಲು ನಿರ್ಲಕ್ಷೃ ವಹಿಸಿದ್ದಾರೆ. ಈಗಾಗಲೇ ಈ ರಸ್ತೆಯಲ್ಲಿ ನಿತ್ಯ ನೂರಾರು ಆಟೋಗಳು ಜನರನ್ನು ತುಂಬಿಕೊಂಡು ಹೋಗುತ್ತಿವೆ. ಜತೆಯಲ್ಲೇ ಕೊಳ್ಳೇಗಾಲಕ್ಕೆ ಹೋಗುವ ಲಾರಿ, ಬಸ್, ಸೇರಿದಂತೆ ಇತರ ವಾಹನಗಳು ಇದೇ ರಸ್ತೆಯಲ್ಲಿ ಸಂಚಾರ ಮಾಡುವುದರಿಂದ ರಾತ್ರಿ ವೇಳೆಯಲ್ಲಿ ಆಕಸ್ಮಿಕವಾಗಿ ಚಾಲಕನ ನಿಯಂತ್ರಣ ತಪ್ಪಿದರೆ ಅಮೂಲ್ಯವಾದ ಜೀವಗಳನ್ನು ಸೇತುವೆ ಬಲಿ ತೆಗೆದುಕೊಳ್ಳಲಿದೆ.

ಈಗಲಾದರೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ಅನಾವುತ ನಡೆಯುವ ಮುನ್ನ ಎಚ್ಚೆತ್ತು ತಡೆಗೋಡೆ ನಿರ್ಮಿಸಬೇಕಾಗಿದೆ ಎಂದು ಹೊನ್ನೂರು ಮಹದೇವಸ್ವಾಮಿ ಆಗ್ರಹಿಸಿದ್ದಾರೆ.