ಗ್ರಾಪಂ ಸಿಬ್ಬಂದಿಗೆ ಕನಿಷ್ಠ ವೇತನ ಕೊಡಿ

ಚಿಕ್ಕಮಗಳೂರು: ಸರ್ಕಾರ ನಿಗದಿಪಡಿಸಿರುವ ಕನಿಷ್ಠ ವೇತನ, 14ನೇ ಹಣಕಾಸು ಯೋಜನೆಯಡಿ ನಿಗದಿಗೊಳಿಸುವ ವೇತನ ಪಾವತಿ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಗ್ರಾಪಂ ಬಿಲ್ ಕಲೆಕ್ಟರ್, ಜವಾನ, ಜಾಡಮಾಲಿ, ನೀರುಗಂಟಿ, ಸಿಬ್ಬಂದಿ ಜಿಪಂ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

ಸರ್ಕಾರ ನಿರ್ದೇಶನ ನೀಡಿದರೂ ಬೇಡಿಕೆ ಈಡೇರಿಸದ ಜಿಪಂ ಸಿಇಒ, ತಾಪಂ ಇಒಗಳ ವಿರುದ್ಧ ವಿವಿಧ ಘೊಷಣೆ ಕೂಗಿದ ಪ್ರತಿಭಟನಾಕಾರರು, ಕೂಡಲೆ ತಮ್ಮ ಮನವಿಗೆ ಸ್ಪಂದಿಸದಿದ್ದರೆ ಪ್ರತಿಭಟನೆ ತೀವ್ರಗೊಳಿಸುವಾಗಿ ಎಚ್ಚರಿಸಿದರು.

ಗ್ರಾಪಂ ನೌಕರರ ಫೆಡರೇಶನ್ ರಾಜ್ಯ ಕಾರ್ಯದರ್ಶಿ ಎಸ್.ವಿಜಯಕುಮಾರ್ ಮಾತನಾಡಿ, ಸರ್ಕಾರ ಗ್ರಾಪಂ ತಳ ಹಂತದ ಸಿಬ್ಬಂದಿಗೆ ಹಲವು ಸೌಲಭ್ಯ ನೀಡಿ ಆದೇಶ ಹೊರಡಿಸಿದೆ. ಈ ಬಗ್ಗೆ ಜನಪ್ರತಿನಿಧಿಗಳಿಗೂ ಮಾಹಿತಿ ನೀಡದೆ ಅಧಿಕಾರಿಗಳು ವಂಚಿಸುತ್ತಿದ್ದಾರೆ. ಬಿಲ್ ಕಲೆಕ್ಟರ್, ಕ್ಲರ್ಕ್​ಗಳಿಗೆ ಜ್ಯೇಷ್ಠತೆ ಪಟ್ಟಿ ತಯಾರಿಸಲು ಹಣ ಕೇಳುತ್ತಾರೆ. ಹಣ ನೀಡದಿದ್ದರೆ ಆಕ್ಷೇಪಣೆ, ಸಬೂಬು ಹೇಳಿ ಪಟ್ಟಿಯಿಂದ ಕೈಬಿಡಲಾಗುತ್ತಿದೆ. ಇದರಿಂದ ನೌಕರರು ಮೃತಪಟ್ಟರೆ ಸರ್ಕಾರದ ಯಾವುದೆ ಸೌಲಭ್ಯ ಸಿಗದೆ ಕುಟುಂಬ ಬೀದಿಗೆ ಬೀಳುತ್ತಿವೆ ಎಂದು ಅಳಲು ತೋಡಿಕೊಂಡರು.

ಗ್ರಾಪಂ ವ್ಯಾಪ್ತಿಯಲ್ಲಿ ಬಹುತೇಕ ದೈಹಿಕ ಶ್ರಮದ ಕೆಲಸವನ್ನು ಕೆಳ ಹಂತದ ಸಿಬ್ಬಂದಿಯೇ ಮಾಡುತ್ತಿದ್ದಾರೆ. ಇದರಿಂದ ಸ್ಥಳೀಯ ಆಡಳಿತ ಸುಗಮವಾಗಿ ನಡೆಯುತ್ತಿದೆ. ಇದಕ್ಕೆ ಜಿಲ್ಲೆಯ ಹಲವು ಗ್ರಾಪಂಗಳಿಗೆ ಪ್ರಶಸ್ತಿಯೂ ಲಭಿಸಿದೆ. ಆದರೆ ಕೆಲಸ ಮಾಡಿದರೆ ಸಿಗಬೇಕಾದ ಸೌಲಭ್ಯಗಳ ಬಗ್ಗೆ ಹಿರಿಯ ಅಧಿಕಾರಿಗಳು ತಾತ್ಸಾರ ಮಾಡುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಂಘದ ಕೆಳವಳ್ಳಿ ಕಳಸಪ್ಪ ಮಾತನಾಡಿ, ಸರ್ಕಾರದ ಆದೇಶದಂತೆ ಎಲ್ಲ ನೌಕರರಿಗೂ ಕನಿಷ್ಠ ವೇತನ, 14ನೇ ಹಣಕಾಸು ಯೋಜನೆಯಡಿ ವೇತನ ನೀಡಬೇಕು. ಬಾಕಿ ಇರುವ ವೇತನವನ್ನು ವರ್ಗ-1ರಲ್ಲಿ ಪಾವತಿಸಬೇಕು. ಕೂಡಲೆ ಮುಂಬಡ್ತಿಗಾಗಿ ಜ್ಯೇಷ್ಠತಾ ಪಟ್ಟಿ ತಯಾರಿಸಬೇಕು. ಅಪಘಾತ ಸಂದರ್ಭ ವೈದ್ಯಕೀಯ ಸೌಲಭ್ಯ ಕೊಡಿಸಬೇಕು. ಅರ್ಹತೆ ಆಧಾರದಲ್ಲಿ ಜ್ಯೇಷ್ಠತೆ ಪಟ್ಟಿ ತಯಾರಿಸಬೇಕು. ಸಿಬ್ಬಂದಿ ವೇತನವನ್ನು ಮಾಸಿಕವಾಗಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು. ರಾಜೇಗೌಡ, ಮಂಜು, ಮೋಹನ್, ಮಂಜಪ್ಪ, ಮಲ್ಲೇಶಪ್ಪ, ಬಸವರಾಜ್, ಪ್ರದೀಪ್, ದೇವರಾಜ್, ರಂಗಪ್ಪ ಮುಂತಾದವರಿದ್ದರು.

Leave a Reply

Your email address will not be published. Required fields are marked *