ಬೆಳಗಾವಿ: ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಕೃಷಿ ಹೊಂಡದ ಕಾಮಗಾರಿಯ ಬಿಲ್ ಫೈಲ್‌ಗೆ ಸಹಿ ಹಾಕಲು ಲಂಚ ಸ್ವೀಕರಿಸುತ್ತಿದ್ದ ಅಥಣಿ ತಾಪಂ ನರೇಗಾ ಯೋಜನೆ ಇಂಜಿನಿಯರ್, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಅಧಿಕಾರಿಗಳ ಬಲೆಗೆ ಬುಧವಾರ ಸಿಲುಕಿದ್ದಾರೆ.
ಅಥಣಿ ತಾಪಂ ನರೇಗಾ ಯೋಜನೆ ಇಂಜಿನಿಯರ್ ನಾಗಪ್ಪ ಭೀಮಪ್ಪ ಮೊಕಾಶಿ ಬಂಧನಕ್ಕೊಳಗಾದ ಅಧಿಕಾರಿ. ಕೃಷಿ ಹೊಂಡದ ಫೈಲ್‌ಗೆ ಸಹಿ ಹಾಕಲು 6 ಸಾವಿರ ರೂ. ಬೇಡಿಕೆ ಇಟ್ಟು, ಮೊದಲ ಹಂತದಲ್ಲಿ 3 ಸಾವಿರ ರೂ. ಪಡೆದಿದ್ದರು. ಎರಡನೇ ಹಂತದಲ್ಲಿ 3 ಸಾವಿರ ರೂ. ಪಡೆಯುತ್ತಿರುವ ಸಂದರ್ಭದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಅವರನ್ನು ಬಂಧಿಸಿದ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳು ಹಣ ವಶಪಡಿಸಿಕೊಂಡಿದ್ದಾರೆ.ಈ ಕುರಿತು ಅಥಣಿ ತಾಲೂಕಿನ ಅನಂತಪುರ ಗ್ರಾಮದ ಅಂಬರೀಷ್ ಎಸ್.ದುಗ್ಗಾನಿ ಎಸಿಬಿಗೆ ದೂರು ನೀಡಿದ್ದರು.
ನಾಲ್ಕೈದು ತಿಂಗಳ ಅವಧಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕೃಷಿ ಹೊಂಡ, ರಸ್ತೆ ನಿರ್ಮಾಣ, ಕುಡಿಯುವ ನೀರಿನ ಪೈಪ್‌ಲೈನ್ ಸೇರಿ ಇನ್ನಿತರಕಾಮಗಾರಿಗಳ ಬಿಲ್ ಫೈಲ್‌ಗಳಿಗೆ ಲಂಚ ನೀಡಿದರೆ ಮಾತ್ರ ಸಹಿ ಹಾಕುತ್ತಿದ್ದರು. ಇಲ್ಲದಿದ್ದರೆ ವಿನಾಕಾರಣ ಕಚೇರಿಗಳಿಗೆ ಅಲೆದಾಡಿಸುತ್ತಿದ್ದರು ಎಂದು ಅಂಬರೀಷ್ ಎಂಬುವರು ದೂರಿನಲ್ಲಿ ಉಲ್ಲೇಖಿಸಿದ್ದರು ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ. ಎಸಿಬಿ ಎಸ್ಪಿ ಡಿ.ಎಸ್. ನೇಮಗೌಡ ನೇತೃತ್ವದಲ್ಲಿ ಡಿಎಸ್ಪಿ ಶರಣಪ್ಪ, ಎ.ಎಸ್. ಗುದಿಗೊಪ್ಪ, ಸುನೀಲಕುಮಾರ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿದ್ದರು.